ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು: ಪಟ್ಟಣದ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ್ದ ಹೆಸರು ಸಮೃದ್ದವಾಗಿ ಬೆಳೆದು ಇನ್ನೇನು ಫಸಲು ಕೈಗೆ ಬರುವಂತ ಸಮಯದಲ್ಲಿ ಮಳೆ ಕೈಕೊಟ್ಟಿದಲ್ಲದೆ ಹೆಸರುಗಿಡಕ್ಕೆ ಕೊಂಬಿನಹುಳುಗಳು(ಸ್ಟಿಂಡಿಜ್ ಮಾಥ್) ಕಾಟ ತಗುಲಿದ್ದು ಹೊಲದಲ್ಲಿ ಅಚ್ಚಹಸಿರಾಗಿ ನಳನಳಿಸುತ್ತಿದ್ದ ಗಿಡಗಳು ಕೀಟದ ಬಾಯಿಗೆ ತುತ್ತಾಗಿ ರೈತರನ್ನು ಸಂಕಷ್ಟಕೀಡಾಗುವಂತೆ ಮಾಡಿವೆ.
ಈಗಾಗಲೇ ಹೋಬಳಿಯ ದಸೂಡಿ,ದಬ್ಬಗುಂಟೆ,ಸೋಮನಹಳ್ಳಿ ಭಾಗಗಳಲ್ಲಿ ಪೂರ್ವಮುಂಗಾರು ಹಾಗೂ ಅಶ್ವಿನಿ ಮಳೆಗೆ ಹೆಸರು ಬಿತ್ತನೆ ಮಾಡಿದ್ದರಿಂದ ಹೆಸರಿಗೆ ಯಾವುದೇ ಕೀಟಬಾದೆಯಿಲ್ಲದೆ ಹುಲುಸಾಗಿ ಬೆಳೆದು ಇಲ್ಲಿನ ರೈತರಿಗೆ ಫಸಲು ಸಿಕ್ಕಿದ್ದು , ಕಳೆದ ಎರಡು ಮುರುದಿನಗಳಿಂದ ಹೆಸರುಗಿಡಗಳನ್ನು ಕಿತ್ತು ಕಾಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಹೊಲವೊಂದರಲ್ಲಿ ಕೊಂಬಿನಹುಳು ಬಾದೆಯಿಂದ ನಲುಗಿರುವ ಹೆಸರು. ಒಳಚಿತ್ರದಲ್ಲಿ ಹೆಸರು ಗಿಡದಲ್ಲಿ ಕಂಡುಬಂದಿರುವ ಕೊಂಬಿನಹುಳು.
ಹೋಬಳಿಯ ದೊಡ್ಡಬಿದರೆ ,ಚಿಕ್ಕಬಿದರೆ,ನಂದಿಹಳ್ಳಿ,ಗೂಬೆಹಳ್ಳಿ ಮತ್ತು ಕಂದಿಕೆರೆ ಹೋಬಳಿಯ ಕೆಲವು ಗ್ರಾಮಗಗಳಲ್ಲಿ ಮಳೆಯ ಕೊರತೆಯಿಂದಾಗಿ ಫಸಲಿನ ಇಳುವರಿ ಕಡಿಮೆಯಾಗಿ ಹೆಸರುಗಿಡಗಳೆಲ್ಲಾ ಒಣಗಿದ್ದು ಒಂದೆಡೆಯಾದರೆ, ಕೊಂಬಿನ ಹುಳುಗಳ ಕಾಟ ಕೂಡ ಹೆಚ್ಚಾಗಿ ಗಿಡದ ಎಲೆ,ಚಿಗುರನ್ನು ಭಕ್ಷಿಸುವ ಮೂಲಕ ಉಳಿದ ಗಿಡಗಳು ನಾಶವಾಗುತ್ತಿವೆ.
ಹುಳುಗಳು ಹೀಗಿವೆ : ಈ ಹುಳುಗಳು ಹಸಿರು ಬಣ್ಣದಿಂದ ಕೂಡಿದ್ದು ತಲೆಯ ಮೇಲೆ ಚಿಕ್ಕದಾದ ಕೊಂಬುನ್ನು ಹೊಂದಿದ್ದು,ಲಾರ್ವಾವಸ್ಥೆಯಿಂದ ಹೆಸರು ಗಿಡದ ಎಲೆಯನ್ನು ತಿನ್ನುತ್ತಾ ಬೆಳವಣಿಗೆಯಾಗುತ್ತವೆ. ಇವು ಹಸಿರು ಬಣ್ಣದಿಂದ ಕೂಡಿದ್ದು ಎಲೆಗಳ ಮಧ್ಯೆಯಿದ್ದರೂ ಸಹ ಅವುಗಳ ಇರುವಿಕೆಯನ್ನು ತಿಳಿಯುವುದಿಲ್ಲ, ಎಲೆಗಳ ಕೆಳಭಾಗದಲ್ಲಿ ಇರುವ ಈ ಕೀಟ ಎಲೆಯನ್ನು ಒಂದುಕಡೆಯಿಂದ ತಿನ್ನುತ್ತಾ ಸಾಗಿ ನಂತರ ಚಿಗುರು, ಹೂ, ಕಾಯಿಯನ್ನು ತಿಂದು ಗಿಡವನ್ನು ಸಂಪೂರ್ಣ ನಾಶಮಾಡುತ್ತದೆ.
ಈ ಹುಳುಗಳು ಸಾಮಾನ್ಯವಾಗಿ ಹೆಸರು, ಎಳ್ಳು, ಉದ್ದು ಬೆಳೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದು ಕಾಂಡ ಸಮೇತ ಗಿಡಗಳನ್ನು ಭಕ್ಷಿಸುತ್ತಾ ಸಂಪೂರ್ಣ ಬೆಳೆಯನ್ನು ನಾಶಪಡಿಸುತ್ತವೆ. ಹುಳುಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಲ್ಯಾನೆಟ್ , ಕ್ಲೋರೋ ಪೈರಿ ಫಾಸ್ ಅಥವಾ ಕ್ವಿನಾಲ್ ಫಾಸ್ 20 ಎಂ,ಎಲ್ ಔಷಧಿಯನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದರಿಂದ ಈ ಕೀಟಬಾಧೆಯನ್ನು ಹತೋಟಿಗೆ ತರಬಹುದಾಗಿದೆ. ಮುಂಚಿತವಾಗಿ ಔಷಧಿ ಸಿಂಪರಣೆ ಮಾಡಿದ್ದ ಪಕ್ಷದಲ್ಲಿ ಈ ಹುಳುಗಳನ್ನು ನಾಶಪಡಿಸಬಹುದಾಗಿತ್ತು. ಹುಳುಗಳು ಪ್ರೌಢಾವಸ್ಥೆ ತಲುಪಿರುವುದರಿಂದ ಸ್ಪಲ್ಪ ಮಟ್ಟಿಗೆ ಹತೋಟಿಗೆ ತರಬಹುದಷ್ಟೆ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು.
ಒಟ್ಟಾರೆ ಹೋಬಳಿಯಲ್ಲಿನ ಹೆಸರು ಗಿಡಕ್ಕೆ ಕೆಂಪುತೆಲೆ ಕಂಬಳಿ ಹುಳ, ಕೊಂಬಿನಹುಳ, ಕಳದಿ ರೋಗ ಸೇರಿದಂತೆ ಒಂದಲ್ಲ ಒಂದು ರೀತಿಯ ಕೀಟ ಬಾಧೆಗಳು ತಗುಲುವ ಮೂಲಕ ಇಲ್ಲಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ಎದುರಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ