ಮಾಡಿದ ಆರಂಭ ಕೈ ಹತ್ತಲು,ಬಿತ್ತಿದ ಬೆಳೆ ಕೈಸೇರಲು ರೈತಾಪಿ ವರ್ಗದಲ್ಲಿ ಹಿಂದಿನಿಂದ ಅನೇಕ ಆಚರಣೆಗಳು ಜಾರಿಯಲ್ಲಿದ್ದು ಅದರಲೊಂದು ಈ ಕಾರಹಬ್ಬ. ಮುಂಗಾರಿನಲ್ಲಿ ರಾಗಿ,ಹುರುಳಿ,ತೊಗರಿ ಬೆಳೆ ಬಿತ್ತನೆಗೂ ಮುಂಚೆ ಕಾರಬ್ಬವನ್ನು ಆಚರಿಸುವ ಪರಿಪಾಟವಿದ್ದು ಈ ಬಾರಿ ತಾವು ಯಾವ ಬೆಳೆ ಬಿತ್ತಿದರೆ ಕೈ ಹತ್ತಲಿದೆ, ಹೆಚ್ಚು ಫಸಲು ದೊರೆಯಲಿದೆ ಹಾಗೂ ಈ ವರ್ಷ ಯಾವ ಫಸಲು (ಬೆಳೆ) ಅಧಿಕವಾಗಿ ಬೆಳೆದು ತಮ್ಮ ಕೈಸೇರಲಿದೆ ಎಂಬುದನ್ನು ನಂಬಿಕೆಯ ಆಧಾರದಲ್ಲಿ ತಿಳಿಯಲ್ಪಡಲು ಸಮೀಪದ ಕೆಂಕೆರೆ ಗ್ರಾಮದಲ್ಲಿ ಕಾರಬ್ಬವನ್ನು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಗುರುವಾರ ಸಂಜೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕಾರಬ್ಬದ ಅಂಗವಾಗಿ ಊರಿನ ಕಾರೆಕಲ್ಲಿನ ಹತ್ತಿರ ಧಾನ್ಯಗಳನ್ನು ತುಂಬಿದ ಮಡಿಕೆಯನ್ನು ಹೊಡೆಯುತ್ತಿರುವುದು. |
ಆಚರಣೆ ಹೇಗೆ: ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಇರುವ ಕಾರೇಕಲ್ಲನ್ನು ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಯುವಕರು ಶುಚಿಗೊಳಿಸಿ ಸುಣ್ಣ ಹಾಗೂ ಕೆಂಪು ಬಣ್ಣಹಚ್ಚಿ ನಂತರ ಬೇವಿನ ಸೊಪ್ಪು ಮತ್ತು ಅಂಬಳ್ಳಿಯನ್ನು ಬಿಗಿಯಾಗಿ ಬಿಗಿದು ಕಟ್ಟಿ ಪೂಜೆಗೆ ಸಿದ್ದತೆ ಮಾಡಿರುತ್ತಾರೆ. ಗ್ರಾಮದ ಸಮೀಪವಿರುವ ಗ್ಯಾರಳ್ಳದ ಸದಾಶಿವಣ್ಣ ಎಂಬುವರ ಮನೆಯಿಂದ ತರಲಾಗುವ ಅರಿಶಿನ ಅನ್ನದ ನೈವೇದ್ಯ(ಕಿಚುಡಿ)ದ ಜೊತೆಗೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರುಹಾಕಿ ತಾವು ಬೆಳೆಯುವ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಲಾಗುತ್ತದೆ. ಆ ಮಡಿಕೆಗೆ ಅಂಗುನೂಲು, ಅಕ್ಷತೆಗಳನ್ನಿಟ್ಟು ಕೊಂಡು ಊರಿನ ಕಾರೆಕಲ್ಲಿನ ಹತ್ತಿರ ತಂದಿಟ್ಟು ಪೂಜೆಸಲ್ಲಿಸಿದ ನಂತರ ಗ್ರಾಮಸ್ಥರ ಒಪ್ಪಿಗೆ ಪಡೆದು ಮೆಡ್ಡೆಗೋಲಿನ ಸಹಾಯದಿಂದ ಆ ಮಡಿಕೆಯನ್ನು ಹೊಡೆಯುತ್ತಾರೆ. ಹಾಗೆ ಹೊಡೆದ ರಭಸಕ್ಕೆ ಮಡಿಕೆ ಒಳಗಿನ ಧಾನ್ಯಗಳೆಲ್ಲಾ ಮಡಿಕೆಯಲ್ಲಿದ್ದ ನೀರಿನೊಂದಿಗೆ ಹೊರಬಂದು ಹರಿಯುತ್ತವೆ. ಹೀಗೆ ಧಾನ್ಯಗಳಲ್ಲಿ ಯಾವ ಧಾನ್ಯ ಎಲ್ಲಕ್ಕಿಂತ ಮುಂದೆ ಹರಿದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ನಂಬುತ್ತಾರೆ. ಅಲ್ಲದೆ ಮುಂಗಾರು ಹಾಗೂ ಹಿಂಗಾರು ಬೆಳೆಗಳಲ್ಲಿ ಯಾವುದು ಹೆಚ್ಚು ದೊರೆಯುತ್ತದೆ ಎಂಬುದನ್ನೂ ಸಹ ಈ ಆಚರಣೆಯಲ್ಲಿ ತಿಳಿದು ಬರುತ್ತದೆ.
ಗ್ರಾಮದ ಹಿರಿಯ ಸದಾಶಿವಯ್ಯ ಹೇಳುವಂತೆ ಅನಾದಿಕಾಲದಿಂದಲೂ ಈ ಆಚರಣೆ ಜಾರಿಯಲ್ಲಿದ್ದು ರಾಸುಗಳಿಗೆ ಯಾವುದೇ ರೋಗರುಜನೆ ಬಾರದಂತೆ ಹಾಗೂ ಉತ್ತಮ ಫಸಲು ಸಿಗಲಿ ಎಂಬ ನಂಬಿಕೆಯಿಂದ ನೇಗಿಲು,ನೊಗ,ಕುಂಟೆ,ಕೂರಿಗೆ ಸೇರಿದಂತೆ ಇತರ ಕೃಷಿ ಉಪಕರಣ ಶುಚಿಗೊಳಿಸಿಕೊಂಡು ತಾವು ಸಾಕಿದ ದನಗಳ ಮೈತೊಳೆದು ಅವುಗಳ ಕೊಂಬಿಗೆ ನೀಲಿ,ಕೆಂಪು ಬಣ್ಣ ಹಚ್ಚಿ ಹೂಗಳಿಂದ ಸಿಂಗರಿಸಿ, ಪೂಜಿಸಿದ ನಂತರ ನೈವೇದ್ಯ ಇಟ್ಟು ಊರಿನ ದೇವಾಲಯದಲ್ಲಿಗೆ ತೆರಳಿ ಪೂಜೆಸಲ್ಲಿಸಿ ಈ ಬಾರಿ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿಕೊಳ್ಳುವ ಮೂಲಕ ಹಬ್ಬ ಕೊನೆಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಪುರೋಹಿತರಾದ ಚನ್ನಬಸವಯ್ಯ,ಈಶ್ವರಯ್ಯ ಸೇರಿದಂತೆ ಚೇತನ,ಕುಮಾರಣ್ಣ,ಕೊಟ್ರೇಶ್,ಶ್ರೀಧರ್,ಚನ್ನಬಸವಯ್ಯ,ಬಾಬುರಾಜ್,ಶರತ್ ಸೇರಿದಂತೆ ಅಪಾರ ಸಂಖ್ಯೆಯ ಯುವಕರು ಕಾರೆಕಲ್ಲಿಗೆ ಕಟ್ಟಿದ್ದ ಅಂಬಳ್ಳಿ ಹಾಗೂ ಬೇವಿನ ಸೊಪ್ಪನ್ನು ಎಳೆಯುವಲ್ಲಿ ಪಾಲ್ಗೊಂಡಿದ್ದು, ತಮ್ಮ ಮನೆಗಳಿಗೆ ಈ ಕಾರೆಸೊಪ್ಪನ್ನು ತೆಗೆದು ಕೊಂಡು ಹೋಗುವ ಮೂಲಕ ಕಾರಬ್ಬವನ್ನು ಆಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ