ಹುಳಿಯಾರು ಹೋಬಳಿಯ ಗಾಣಧಾಳು ಗ್ರಾ.ಪಂ ವ್ಯಾಪ್ತಿಯ ರಂಗನಕೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿಕುನ್ ಗುನ್ಯಾ ಕಾಯಿಲೆ ಕಾಣಿಸಿಕೊಂಡಿದ್ದು 20ಕ್ಕೂ ಹೆಚ್ಚು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ, ಶುರುವಿನಲ್ಲಿ ವಿಚಾರ ಅರಿತ ಆರೋಗ್ಯ ಇಲಾಖೆ ಸಹಾಯಕರು ರಕ್ತ ಪರೀಕ್ಷೆಗೆ ರಕ್ತ ಪಡೆದು ಹೋದವರು ಇದುವರೆಗು ತಿರುಗಿ ನೋಡಿಲ್ಲದಿರುವುದಕ್ಕೆ ಗ್ರಾಮಸ್ಥರು ಕಾಯಿಲೆ ಏನೆಂದು ಅರಿಯದೆ ಸರಿಯಾದ ಚಿಕಿತ್ಸೆ ದೊರೆಯದೆ ಪರಿತಪಿಸುತ್ತಿದ್ದಾರೆ.
ಸುಮಾರು 35 ಕುಟುಂಬಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಒಬ್ಬಿಬ್ಬರಿಗೆ ಮಂಡಿನೋವು, ಮೈಕೈನೋವು, ಜ್ವರ ಬಾಧೆಯಿಂದ ನರಳುತ್ತಿದ್ದಾರೆ. ಸಮೀಪದಲ್ಲೇ ಇರುವ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯಾಧಿಕಾರಿ ಎಸ್.ಮಂಜುನಾಥ್ ವರ್ಗಾವಣೆಯಾದ ನಂತರ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾದ್ದರೂ ಸಹ ವೈದ್ಯರ ಕೊರತೆ ಕಾಡುತ್ತಿದೆ. ವೈದ್ಯರಿಲ್ಲದೆ ಚಿಕಿತ್ಸೆಗೆ ಹೋಬಳಿ ಕೇಂದ್ರವಾದ ಹುಳಿಯಾರಿಗೆ ಬರುವ ಪರಿಸ್ಥಿತಿಯಿದೆ. ಬಸ್ ಸಂಚಾರವಿಲ್ಲದೆ ಈ ಊರಿಗೆ ಹುಳಿಯಾರಿತೆರಳಲು ದುಬಾರಿ ಹಣ ತೆತ್ತು ಆಟೋಗಳನ್ನು ಆಶ್ರಯಿಸಬೇಕಾಗಿದೆ. ಹಣವಿಲ್ಲದವರು ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಕುಳಿತು ನರಳುವಂತಾಗಿದೆ.
ಸೊಳ್ಳೆ ಸಮಸ್ಯೆ: ಈ ಭಾಗದಲ್ಲಿ ಉತ್ತಮ ಮಳೆಯಾಗಿ ಕಳೆ ಹೆಚ್ಚಾದ್ದೇ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿ ಕಾಯಿಲೆ ಉಲ್ಬಣಗೊಳ್ಳುವಂತಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಮೌನವಹಿಸಿರುವುದು ಸೇರಿದಂತೆ ಸಮಸ್ಯೆಯ ಬಗ್ಗೆ ಆರೋಗ್ಯ ಸಹಾಯಕರ ಭೇಟಿ ಬಿಟ್ಟರೇ ಯಾವೊಬ್ಬ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ ಗ್ರಾಮದಲ್ಲಿ ವಿಷಮಸ್ಥಿತಿ ಉದ್ಭವಿಸಿದ್ದು ಆರೋಗ್ಯ ಇಲಾಖೆ ಕೂಡಲೆ ಇತ್ತ ಗಮಹರಿಸಬೇಕಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ