ಹುಳಿಯಾರು: ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಲ್ಲಿ ನಾಯಕ ಸಮುದಾಯವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯಿಸಿದ್ದು ಪ್ರಸಕ್ತ ಸಾಲಿನ ವಾಲ್ಮೀಕಿ ಜಯಂತಿಯನ್ನು ಮೀಸಲಾತಿ ಹಕ್ಕೊತ್ತಾಯ ದಿನವನ್ನಾಗಿ ಪರಿವರ್ತಿಸುವಂತೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.
ಹುಳಿಯಾರು ಹೋಬಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನದಿಂದ ಏರ್ಪಡಿಸಿದ್ದ ಗ್ರಾಮ ದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.
ನಾಯಕ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೇಂದ್ರ ಸರ್ಕಾರ ಶೇ.೭.೫ ಮೀಸಲಾತಿ ನೀಡಿದೆ. ರಾಜ್ಯ ಸರ್ಕಾರ ಕೇವಲ ಶೇ.೩ ಮಿಸಲಾತಿ ನೀಡಿದೆ. ಇದರಿಂದ ಶೋಷಣೆಗೆ ಒಳಗಾಗಿರುವ ನಾಯಕ ಸಮುದಾಯದ ಏಳಿಗೆಗೆ ತೊಡಕಾಗಿದೆ. ಹೀಗಾಗಿ ವಾಲ್ಮಿಕಿ ಜಯಂತಿಯನ್ನು ಎಂದಿನಂತೆ ಸಂಭ್ರಮ, ಸಡಗರದಿಂದ ಆಚರಿಸಿ.ಆದರೆ ಇದರ ಜೊತೆಗೆ ನಾಡಕಚೇರಿ, ತಾಲೂಕು ಕಚೇರಿ ಹಾಗೂ ಜಿಲ್ಲಾ ಕಚೇರಿಗಳಿಗೆ ತಂಡೋಪತಂಡವಾಗಿ ತೆರಳಿ ಮೀಸಲಾತಿ ಹಕ್ಕೋತ್ತಾಯದ ಮನವಿ ಸಲ್ಲಿಸಿ ಎಂದು ತಿಳಿಸಿದರು.
ನಾಯಕ ಸಮುದಾಯ ವ್ಯಕ್ತಿ ಆರಾಧನೆ ಹಾಗೂ ಪಕ್ಷ ಆರಾಧನೆಯಲ್ಲಿ ತಮ್ಮ ಇಡೀ ಜೀವನ ಕಳೆದಿದ್ದಾರೆ. ಇನ್ನಾದರೂ ವಾಲ್ಮಿಕಿ ಹೆಸರಿನಲ್ಲಿ ಧರ್ಮದ ತಳಹದಿಯಲ್ಲಿ ಸಂಘಟನೆಯಾಗಬೇಕಿದೆ. ಹೀಗಾದಾಗ ಮಾತ್ರ ಸರ್ಕಾರದ ಕಿವಿ ಹಿಂಡಿ ಕೆಲಸ ಮಾಡಿಸಬಹುದಾಗಿದೆ ಎಂದು ತಿಳಿಸಿದರು. ನಾವೆಲ್ಲ ಸಂಘಟಿತರಾಗುತ್ತಿರುವುದು ಬೇರೆ ಜಾತಿ ಜನಾಂಗದ ವಿರುದ್ಧ ಬಲಾಬಲ ತೋರಿಸುವುದಕ್ಕಲ್ಲ. ಸಂವಿಧಾನ ಬದ್ಧವಾದ ನಮ್ಮ ಪಾಲಿನ ಹಕ್ಕು ಪಡೆಯುವ ಸಲುವಾಗಿ ಎಂಬುದನ್ನು ಅರ್ಥ ಮಾಡಿಕೊಂಡು ನೇರ ನಡೆ, ನುಡಿ ಇರಬೇಕೆಂದು ಕಿವಿ ಮಾತು ಹೇಳಿದರು.
ಕರ್ನಾಟಕ ವಾಲ್ಮೀಕಿ ಸೇನೆ ರಾಜಧ್ಯಕ್ಷ ಪ್ರತಾಪ ಮದಕರಿ, ಸಮುದಾಯದ ಮುಖಂಡರಾದ ಕರಿಯಪ್ಪ, ಮಾರುತಿ, ರಮೇಶ್, ಬಸವಣ್ಣ, ಗಂಗಣ್ಣ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ