ಹುಳಿಯಾರು::ತಾಯಿಯ ಎದೆಹಾಲು ಕುಡಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಸದೃಢವಾಗಿ ಬೆಳೆಯಲು ಅನುಕೂಲವಾಗುತ್ತದೆ. ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು ತನ್ನ ಮಗುವಿಗೆ ಸದೃಢ ಬೆಳವಣಿಗೆಯ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ ಎಂದು ಸಿಡಿಪಿಒ ಪರಮೇಶ್ವರಪ್ಪ ಹೇಳಿದರು.
ಹುಳಿಯಾರು ಸಮೀಪದ ನಂದಿಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನದಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲು ಉಣಿಸಲು ಆಸಕ್ತಿ ತೋರದಿರುವುದು ವಿಷಾದನೀಯ. ತಾಯಿಯ ಎದೆ ಹಾಲು ಕುಡಿದ ಮಕ್ಕಳು ಕಿವಿ, ಬಾಯಿ ಸೋಂಕು, ಹೃದಯದ ಕಾಯಿಲೆ, ಪಾರ್ಶ್ವವಾಯು ಮುಂತಾದ ಮಾರಕ ರೋಗಗಳಿಂದ ರಕ್ಷಣೆ ಪಡೆಯುತ್ತಾರೆ ಎಂದರು.
ಪ್ರತಿವರ್ಷ ಆ.1ರಿಂದ 7ರ ವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ. ತಾಯಂದಿರಿಗೆ ಎದೆ ಹಾಲಿನ ಮಹತ್ವ ತಿಳಿಸುವುದು ಇದರ ಉದ್ದೇಶವಾಗಿದೆ.ಬಾಟಲಿ ಹಾಲು ಕೊಡುವುವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಎದೆ ಹಾಲಿನ ಮಹತ್ವ ತಿಳಿಸುವ ಸ್ತನ್ಯ ಪಾನ ಸಪ್ತಾಹವು ಉಪಯೋಗವಾಗಲಿದೆ ಎಂದರು.
ತಿಮ್ಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ದೇವರಾಜು ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿ ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಪ್ರಗತಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಕೂಡ ಸೇರಿದೆ.ಭಾಗ್ಯಲಕ್ಷ್ಮೀ ಬಾಂಡ್ ಹೆಣ್ಣು ಮಗುವಿಗೆ ವರದಾನವಾಗಿದೆ. ಹೆಣ್ಣು ಮಗು ಎಂದು ತುಚ್ಚವಾಗಿ ನೋಡಬಾರದು. ಹೆಣ್ಣು ಮಗುವಿನ ಪ್ರತಿಯೊಬ್ಬ ಪಾಲಕರು ಮಗುವಿನ ಪಾಲನೆ, ಪೋಷಣೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ಹೆಣ್ಣು ಮಕ್ಕಳಿಗೆ ೧೮ ವರ್ಷ ತುಂಬಿದ ನಂತರ ಬಾಂಡಿನ ಮೊತ್ತ ಲಭಿಸುವುದಿದ್ದು ಪ್ರತಿಯೊಬ್ಬ ಪಾಲಕರು ಬಾಂಡ್‌ಗಳನ್ನು ಮುಂದಿನ 18 ವರ್ಷಗಳ ಕಾಲ ಜಾಗ್ರತೆಯಿಂದ ತೆಗೆದಿಡಬೇಕು ಎಂದರು.
ಗ್ರಾಮಪಂಚಾಯ್ತಿ ಸದಸ್ಯೆ ಎನ್.ಬಿ.ಚಂದ್ರಕಲಾ,ಜಯಮ್ಮ,ನಂದೀಶಪ್ಪ,ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಮ್ಮ ,ಆಶಾ ಕಾರ್ಯಕರ್ತೆಯರು ,ಮಕ್ಕಳ ತಾಯಂದಿರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ