![]() |
ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ |
ಹುಳಿಯಾರು:ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯಹೋರಾಟಗಾರರಿಗೆ ಪಿಂಚಣಿಯನ್ನು ಪ್ರತಿ ವರ್ಷವೂ ಎರಡು ಸಾವಿರದಂತೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು ಅದರಂತೆ ಪಿಂಚಣಿಯನ್ನು ವಾರ್ಷಿಕವಾಗಿ ಹೆಚ್ಚಳ ಮಾಡುವಂತೆ ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕಾರ ವಹಿಸಿಕೊಂಡ ಪ್ರಥಮದಲ್ಲಿ ಚಿತ್ರದುರ್ಗದಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಮತ್ತು ಉತರಾಧಿಕಾರಿಗಳ ರಾಜ್ಯ ಸಮ್ಮೇಳನದಲ್ಲಿ ಹೋರಾಟಗಾರರಿಗೆ ಹಾಲಿ ಆರು ಸಾವಿರವಿರುವ ಪಿಂಚಣಿಯನ್ನು ಪ್ರತಿ ವರ್ಷವೂ ಎರಡು ಸಾವಿರದಂತೆ ಏರಿಕೆ ಮಾಡುವುದಾಗಿ ಹಾಗೂ ಹೋರಾಟಗಾರರ ಪತ್ನಿಯರಿಗೂ ಉಚಿತ ಬಸ್ ಪಾಸ್ ವಿತರಿಸುವುದಾಗಿ ಭರವಸೆ ನೀಡಿದ್ದರು. ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಇಳಿ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ನೆಮ್ಮದಿಯಾಗಿ ಜೀವಿಸುವ ಸಲುವಾಗಿ ಪಿಂಚಣಿ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು.
ಅದರಂತೆ ಎರಡುಸಾವಿರ ಒಮ್ಮೆ ಮಾತ್ರ ಏರಿಕೆ ಮಾಡಿ ಆನಂತರ ೨೦೧೪-೧೫ರಲ್ಲಿ ಹೆಚ್ಚಿಳ ಮಾಡಿಲ್ಲ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಅನೇಕ ಬಾರಿ ಜೈಲು ವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು ಯಾರು ಪಿಂಚಣಿಗಾಗಿ ಹೋರಾಡಿದವರಲ್ಲ. ಅದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ವಾಗ್ದಾನದಂತೆ ಸರ್ಕಾರ ಸ್ವಾತಂತ್ರ ಹೋರಾಟಗಾರರಿಗೆ ಮೊದಲ ವರ್ಷ ಮಾತ್ರ ಹೆಚ್ಚಳ ಮಾಡಿ ಆರು ಸಾವಿರದ ಬದಲು ಎಂಟು ಸಾವಿರ ನೀಡಿದ್ದು ಸರಿಯಷ್ಟೆ.ಆ ಪ್ರಕಾರವಾಗಿ ಈಗ ಬರುತ್ತಿರುವ ರೂ. 8 ಸಾವಿರ ಪಿಂಚಣಿಯನ್ನು ರೂ10 ಸಾವಿರಕ್ಕೆ ಹೆಚ್ಚಿಸಬೇಕಿತ್ತು.ಅಲ್ಲದೆ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಪಿಂಚಣಿಯಲ್ಲಿ ವ್ಯತ್ಯಾಸವಿದ್ದು ಕೇಂದ್ರ ಸರ್ಕಾರ ನೀಡುವಷ್ಟೆ ಪಿಂಚಣಿಯನ್ನು ಮತ್ತಿತರೆ ಸೌಲಭ್ಯವನ್ನು ರಾಜ್ಯಸರ್ಕಾರವೂ ನೀಡಬೇಕೆಂದರು.
ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯಾದರೂ ಪಿಂಚಣಿ ಹೆಚ್ಚಳ ಘೋಷಿಸುವಂತೆಯೂ ಹಾಗೂ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವಂತೆಯೂ ಹಾಗೂ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಗಾಂಧಿ ಭವನದ ಬಾಕಿ ಉಳಿದಿರುವ ಕಾಮಗಾರಿ ಮುಗಿಸಲು ಅಗತ್ಯ ಅನುದಾನವನ್ನು ಮಂಜೂರು ಮಾಡುವಂತೆಯೂ ಅವರು ಮನವಿ ಮಾಡಿದರು. ಸ್ವಾತಂತ್ರ ಹೋರಾಟಗಾರರ ಉತ್ತರಾಧಿಗಳ ಸಂಘದ ಬಸ್ ಏಜೆಂಟ್ ಗಂಗಣ್ಣ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ