ಹುಳಿಯಾರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
----------------------------
ಹುಳಿಯಾರು: ಬೆಂಗಳೂರಿನ ದಿ.ಯೂನೈಟೆಟ್ ಥಿಯೋಲಾಜಿಕಲ್ ಕಾಲೇಜು ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಅದಕ್ಕೆ ಅವಕಾಶ ನೀಡಿದ ಕಾಲೇಜು ಹಾಗೂ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಹುಳಿಯಾರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಾಗೂ ನೂರಾರು ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಹುಳಿಯರು ಜಿಪಿಯುಸಿಯಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಸಂತೆ ಬೀದಿಯಲ್ಲಿ ಸಾಗಿ ಬಿಹೆಚ್ ರಸ್ತೆ ಮೂಲಕ ಬಸ್ ನಿಲ್ದಾಣ ತಲುಪಿ ನಡುರಸ್ತೆ ಕೂತು ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ದೇಶಪ್ರೇಮಕ್ಕೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳನ್ನು ಕೂಗಿದರು.
ಜಮ್ಮು ಮತ್ತು ಕಾಶ್ಮೀರ 'ಆಜಾದಿ ಘೋಷಣೆ' ಕೂಗಿದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ದೇಶ ದ್ರೋಹಿ ಕೇಸ್ ದಾಖಲಿಸಿ ಬಂಧಿಸುವಲ್ಲಿ ರಾಜ್ಯಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದೇಶದ್ರೋಹದ ಘಟನೆ ನಡೆದರು ಸಹ ಸ್ವಯಂ ದೂರು ದಾಖಲು ಮಾಡಿಕೊಳ್ಳದ ಪೊಲೀಸ್ ಇಲಾಖೆ ಈ ಬಗ್ಗೆ ಎಬಿವಿಪಿ ದೂರು ನೀಡಿದ ಎರಡು ದಿನಗಳ ನಂತರ ವಿಳಂಬವಾಗಿ ಎಫ್ ಐಆರ್ ದಾಖಲಿಸಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ. ದೇಶದ್ರೋಹಿಗಳನ್ನು ಬಂಧಿಸಿ ಎಂದು ಹೋರಾಟ ನಡೆಸುತ್ತಿದ್ದ ಎಬಿವಿಪಿಯ ಹೋರಾಟವನ್ನೆ ಹತಿಕ್ಕಲು ಹೊರಟ ಇಲಾಖೆ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಅಮಾನವೀಯ. ತುಮಕೂರಿನ ಎಸ್ಎಸ್ ಐಟಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ದೇಶದ ವಿರುದ್ದ ಘೋಷಣೆ ಕೂಗಿದ ಪ್ರಕರಣ ನಡೆದಿದೆ. ಆದರೆ ಪೊಲೀಸರು ದೂರು ದಾಖಲಿಸಿಲ್ಲ. ದೇಶದ ಐಕ್ಯತೆಗೆ ಧಕ್ಕೆ ತರುವ ಇಂತಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ.
ಕೂಡಲೇ ಭಾರತದ ಐಕ್ಯತೆಗೆ ಧಕ್ಕೆ ತರುವ ಮತ್ತು ಭಾರತೀಯ ಸೈನ್ಯದ ವಿರುದ್ದ ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸಬೇಕು. ದಿ.ಯುನೈಟೆಟ್ ಥಿಯೋಲಾಜಿಕಲ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಭಾರತದಾದ್ಯಂತ ನಿಷೇಧಿಸಬೇಕು ಮತ್ತು ಪದಾಧಿಕಾರಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಜರುಗಿಸಬೇಕು ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಆಗ್ರಹಿಸಿದರು.
ಈ ವೇಳೆ ಎಬಿವಿಪಿಯ ನರೇಂದ್ರಬಾಬು,ತಾಲ್ಲೂಕ್ ಸಂಚಾಲಕರಾದ ರಾಕೇಶ್ ಕೆಂಕೆರೆ ಹಾಗೂ ಗಿರೀಶ್, ಹರೀಶ್, ಪವನ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಾಡಕಛೇರಿಯ ಉಪತಹಸಿಲ್ದಾರ್ ಸತ್ಯನಾರಾಯಣ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ