ಲೋಕಾರ್ಪಣೆಗೆ ರಾಷ್ಟ್ರಪತಿಗಳಿಗೆ ಆಹ್ವಾನ
--------------------
ಹುಳಿಯಾರು:ಹುಳಿಯಾರಿನ ಕೋಡಿಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಕಂಕಾಳಿ ಹಾಗೂ ತುಳಜಾ ಭವಾನಿ ಅಮ್ಮನವರ ಶಕ್ತಿ ಪೀಠ ಹಾಗೂ ಭಾರತದಲ್ಲಿಯೇ ಪ್ರಪ್ರಥಮವಾದ ೬೧ ಅಡಿ ಅಗಲ ಹಾಗೂ ೩೩ ಅಡಿ ಎತ್ತರದ ಶ್ರೀ ಅನಂತಪದ್ಮನಾಭ ಸ್ವಾಮಿಯ ಬೃಹತ್ ಮೂರ್ತಿಯ ಉದ್ಘಾಟನ ಸಮಾರಂಭಕ್ಕೆ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗುವುದು ಎಂದು ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗಂಗಾಧರ್ ತಿಳಿಸಿದರು.
ಈ ನಿಮಿತ್ತ ಹುಳಿಯಾರಿನ ಸಮಸ್ತ ಸಂಘಸಂಸ್ಥೆಗಳ,ಪುರ ಪ್ರಮುಖರ ಉಪಸ್ಥಿತಿಯಲ್ಲಿ ಕೋಡಿಪಾಳ್ಯದ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹುಳಿಯಾರಿನ ಸಮಸ್ತ ಸಂಘಸಂಸ್ಥೆಗಳ,ಪುರ ಪ್ರಮುಖರ ಉಪಸ್ಥಿತಿಯಲ್ಲಿ ಕೋಡಿಪಾಳ್ಯದ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ನಡೆದ ಪೂರ್ವ ಭಾವಿಸಭೆ |
೨೦೧೭ ರ ಏಪ್ರಿಲ್ ತಿಂಗಳಿನಲ್ಲಿ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗುವುದಿದ್ದು ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಹಾಗೂ ೫೧ ಮಂದಿ ನಾಗಸಾಧುಗಳನ್ನು ಆಹ್ವಾನಿಸುವುದರ ಜೊತೆಗೆ ಅಂತರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಲ್ಲದೆ ಪ್ರತಿದಿನ ದೇಶಿಯ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗೆ ಒತ್ತುನೀಡಲಾಗುವುದು ಎಂದರು.
ದೇಶದಲ್ಲಿಯೆ ಪ್ರಥಮವಾದ ಅನಂತಪದ್ಮನಾಭನ ಮೂರ್ತಿ ಅನಾವರಣಗೊಳಿಸಲು ದೇಶದ ಪ್ರಥಮ ಪ್ರಜೆಯನ್ನು ಆಹ್ವಾನಿಸುವ ಪ್ರಯತ್ನ ಸಾಗಿದ್ದು ರಾಷ್ಟ್ರಪತಿಗಳ ಕಾರ್ಯಾಲಯದೊಂದಿಗೆ ಪತ್ರವ್ಯವಹರ ನಡೆದಿದ್ದು ಒಪ್ಪಿಗೆ ದೊರೆತ ನಂತರ ಅಧಿಕೃತ ಆಹ್ವಾನಪತ್ರಿಕೆ ಮುದ್ರಿಸಲಾಗುವುದು ಎಂದರು.
ಹುಳಿಯಾರು ಕೋಡಿಪಾಳ್ಯವನ್ನು ದಕ್ಷಿಣ ಭಾರತದ ಪುಣ್ಯ ಕ್ಷೇತ್ರವನ್ನಾಗಿಸುವ ಗುರಿಹೊಂದಿದ್ದು ಈ ನಿಟ್ಟಿನಲ್ಲಿ ನಡೆದಿರುವ ದೇವಾಲಯ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳ ಬಗ್ಗೆ ಸ್ಥೂಲನೋಟ ನೀಡಿದರು.
ದೇವರ ನಾಡು ಎಂದೇ ಪ್ರಸಿದ್ಧಿಯಾಗಿರುವ ನಮ್ಮ ನಾಡಿನಲ್ಲಿ ಹುಳಿಯಾರು ಪಟ್ಟಣವನ್ನು ಅತ್ಯಂತ ವಿಶಿಷ್ಟ ಧಾರ್ಮಿಕ ಕ್ಷೇತ್ರವನ್ನಾಗಿ ಗುರ್ತಿಸಬೇಕೆನ್ನುವ ಆಶಯದೊಂದಿಗೆ ಶಕ್ತಿ ದೇವತೆಗಳಾದ ಕಂಕಾಳಿ ಹಾಗೂ ತುಳಜಾ ಭವಾನಿ ಅಮ್ಮನವರ ಶಕ್ತಿ ಪೀಠವನ್ನು ಇಲ್ಲಿ ಸ್ಥಾಪಿಸುತ್ತಿದ್ದು ಸಮಸ್ತ ಹಿಂದೂ ಸಮುದಾಯದ ಪವಿತ್ರ ಯಾತ್ರಾಸ್ಥಳವನ್ನಾಗಿ ಮಾಡುವ ಗುರಿಹೊಂದಲಾಗಿದೆ ಎಂದರು.
ಹುಳಿಯಾರು ಸಮೀಪದ ಕೋಡಿಪಾಳ್ಯದಲ್ಲಿ ಐದು ಎಕರೆ ಪ್ರದೇಶದಲ್ಲಿ ಶಕ್ತಿ ಮಾತೆ ಕಂಕಾಳಿ ಹಾಗೂ ಏಳು ಶಕ್ತಿಪೀಠಗಳಲ್ಲಿ ಒಂದಾದ ತುಳಜಭವಾನಿ ಮಾತೆಯವರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಮಾಡುತ್ತಿರುವ ಭವ್ಯ ದೇವಾಲಯದಲ್ಲಿ ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.
ಇಲ್ಲಿ ಶ್ವೇತವರ್ಣದ ಬೆಲೆಬಾಳುವ ಕಲ್ಲಿನಲ್ಲಿ ದೇವಾಲಯ ಸೇರಿದಂತೆ ೮೫೦ ಜನರಿಗೆ ಆಸನ ವ್ಯವಸ್ಥೆಯಿರುವ ಸೇವಾಲಾಲ್ ಸಾಂಸ್ಕೃತಿಕ ಸದನ,೨೦೦ಜನರು ಏಕಕಾಲದಲ್ಲಿ ಕುಳಿತು ಧ್ಯಾನಮಾಡಬಹುದಾದ ಪಿರಮಿಡ್ ಆಕಾರದ ಧ್ಯಾನಮಂದಿರ,ಧರ್ಮದರ್ಶಿಗಳ ಕುಟೀರ ಶ್ರೀ ಅನಂತಪದ್ಮನಾಭ ಸ್ವಾಮಿಯ ೬೧ ಅಡಿ ಅಗಲ ಹಾಗೂ ೩೩ ಅಡಿ ಎತ್ತರದ ಬೃಹತ್ ಮೂರ್ತಿ ಹಾಗೂ ಆಗಮಿಸುವ ಯಾತ್ರಾರ್ತಿಗಳಿಗೆ ಸಂಪೂರ್ಣ ಸೌಕರ್ಯವಿರುವ ಶ್ರೀ ಮಾತಾ ಯಾತ್ರಿ ನಿವಾಸ ಸ್ಥಾಪಿಸಲಾಗುತ್ತಿದೆ ಎಂದರು.
ಪೂರ್ವ ಭಾವಿಸಭೆಯಲ್ಲಿ ಮಾತನಾಡುತ್ತಿರುವ ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ನ ಉಪಾಧ್ಯಕ್ಷ ಜಯರಾಂ ನಾಯಕ್.ಟ್ರಸ್ಟ್ ಪದಾಧಿಕಾರಿಗಳಿದ್ದಾರೆ. |
ಅಲ್ಲದೆ ಯಾತ್ರಾರ್ಥಿಗಳು ವಿಹರಿಸಲು ಸುಂದರ ಉದ್ಯಾನವನ ಹಾಗೂ ಅದೇ ಆವರಣದಲ್ಲಿ ಬಲಮುರಿ ಗಣಪತಿ ದೇವಾಲಯ ಕೂಡ ಸ್ಥಾಪಿಸಲಾಗುತ್ತಿದೆ ಎಂದರು.ಈಗಾಗಲೇ ಕೆಲವೊಂದು ಕಾಮಗಾರಿಗಳು ಪೂರ್ಣಗೊಂಡಿದ್ದು ಮತ್ತೆ ಕೆಲವು ಶೇ ೭೦ ರಷ್ಟು ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಪಂಚಾಯ್ತಿ ಸದಸ್ಯರುಗಳು,ದೇವಾಲಯ ಸಮಿತಿಯ ಸದಸ್ಯರುಗಳು,ರೈತ ಸಂಘದವರು,ಸ್ವಯಂ ಸೇವಾ ಸದಸ್ಯರುಗಳು ,ಮಾಧ್ಯಮ ಪ್ರತಿನಿಧಿಗಳು, ಹುಳಿಯಾರು,ಕೆಂಕೆರೆ, ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯದ ಗ್ರಾಮಸ್ಥರುಗಳು ಉಪಸ್ಥಿತರಿದ್ದು ಸಲಹೆ ,ಸೂಚನೆ ನೀಡಿದರು.
ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್,ಉಪಾಧ್ಯಕ್ಷ ಜಯರಾಂ ನಾಯಕ್,ಚಂದ್ರ ಶೇಖರ್, ಶ್ರೀನಿವಾಸ್,ಕುಮಾರ್,ಉಮೇಶ್ ನಾಯಕ್,ಜಯಣ್ಣ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ