ಹುಳಿಯಾರು:ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಮಾತೃ ಸುರಕ್ಷ ಯೋಜನೆಯಡಿ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಬ್ಬಿಣಾಂಶ ಮಾತ್ರೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯೆ ಡಾ.ಚಂದನ ಮಾತನಾಡಿ ಗರ್ಭದಲ್ಲಿ ಮಗು ಬೆಳೆಯುವಾಗ ಗರ್ಭಿಣಿಯರಲ್ಲಿ ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆ ಹೋಗಲಾಡಿಸಲು ಹಾಗೂ ಸುರಕ್ಷಿತ ಹೆರಿಗೆಗಾಗಿ ಗರ್ಭಿಣಿಯರು ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು ವಾರಕೊಮ್ಮೆ ತೆಗೆದುಕೊಳ್ಳುವಂತೆ ಹಾಗೂ ಕಬ್ಬಿಣಾಂಶ ಇರುವ ಆಹಾರ ಪದಾರ್ಥಗಳಾದ ಬಸಳೆಸೊಪ್ಪು, ಪಾಲಕ್ ಸೊಪ್ಪು, ಕೆಂಪಕ್ಕಿ, ಮೊಳಕೆಕಾಳು ಸೇವಿಸುವಂತೆ ತಿಳಿಸಿದರು.
ರಕ್ತಹೀನತೆ ಹೋಗಲಾಡಿಸಲು ಆಸ್ಪತ್ರೆಗಳಲ್ಲಿ ಕೊಡುವ ಕಬ್ಬಿಣಾಂಶದ ಪೋಲಿಕ್ ಆಸಿಡ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುವಂತೆ ತಿಳಿಸಿದರು..ಪ್ರಸೂತಿ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಪ್ರಾಣಕ್ಕೆ ಕುತ್ತು ಸಂಭವಿಸುವ ಸಾಧ್ಯತೆ ಇದ್ದು ೮ ರಿಂದ ೯ ತಿಂಗಳ ಒಳಗೆ ವಾರಕ್ಕೊಮ್ಮೆ ಬಿಪಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.ಗರ್ಭವತಿಯರಿಗೆ ಪ್ರತಿ ತಿಂಗಳ ಮಾಹಿತಿ ನೀಡುವ ಸಲುವಾಗಿಯೇ ಮಾತೃ ಸುರಕ್ಷ ಕಾರ್ಯಕ್ರಮ ಜಾರಿಯಾಗಿದ್ದು ಪ್ರತಿ ಮಾಹೆ ೯ ನೇ ತಾರೀಖು ಗರ್ಭಿಣಿಯರ ಸಭೆ ನಡೆಸಿ ಸೂಕ್ತ ಪರಿಹಾರ ನೀಡುವುದಿದ್ದು ಸಾರ್ವಜನಿಕರು ಇದರ ಬಳಕೆ ಮಾಡಿಕೊಳ್ಳುವಂತೆ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಶೋಭ, ಹಿರಿಯ ಆರೋಗ್ಯ ಸಹಾಯಕ ವೆಂಕಟರಾಮಯ್ಯ, ಆರೋಗ್ಯ ಸಿಬ್ಬಂದಿ ನಾಗವೇಣಿ, ಜ್ಯೋತಿಕಲಾ, ನಾಗಮ್ಮ, ರಶ್ಮಿ, ಮಹಾಲಕ್ಷ್ಮಿ ಸೇರಿದಂತೆ ಆಶಾ ಕಾರ್ಯಕರ್ತೆಯರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ