ಖಾಯಂ ವೈದ್ಯರ ನಿಯೋಜನೆ ಮಾಡುವ ಭರವಸೆ
---------------------------
ಹುಳಿಯಾರು : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಂಗಸ್ವಾಮಿ ದಿಢೀರ್ ಭೇಟಿ ನೀಡಿ ಸ್ವಚ್ಛತೆಯನ್ನು ಕಣ್ಣಾರೆ ಪರಿಶೀಲಿಸಿದಲ್ಲದೆ ತ್ಯಾಜ್ಯ ವಿಲೇವಾರಿ ಬಗ್ಗೆ ಗಮನಹರಿಸದ ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.
ಆಸ್ಪತ್ರೆಯ ಒಳಗಿನ ಪ್ರಾಂಗಣವು ತಕ್ಕಮಟ್ಟಿಗೆ ಸ್ವಚ್ಛವಾಗಿದ್ದು, ಆಸ್ಪತ್ರೆಯ ಸುತ್ತಲಿನ ಪರಿಸರದಲ್ಲಿ ಕಾಂಗ್ರೆಸ್ ಗಿಡ,ಮುಳ್ಳಿನ ಗಿಡಗಂಟೆಗಳು ಬೆಳೆದಿದ್ದು ಆವರಣವನ್ನು ತಕ್ಷಣ ಸ್ವಚ್ಛವಾಗಿಡುವಂತೆ ತಾಕೀತು ಮಾಡಿದರು.ವಾರಕೊಮ್ಮೆಯಾದರೂ ಆಸ್ಪತ್ರೆಯ ಪರಿಸರ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.
ಡಿ.ಹೆಚ್.ಒ.ಆಗಮಿಸುತ್ತಿದ್ದಂತೆ ಸಾಕಷ್ಟು ಮಂದಿ ಸಾರ್ವಜನಿಕರು ಆಗಮಿಸಿ, ಇಲ್ಲಿನ ಕುಂದುಕೊರತೆಗಳ ಬಗ್ಗೆ ತಿಳಿಸಿ ಆಸ್ಪತ್ರೆಗೆ ಹಗಲು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಖಾಯಂ ವೈದ್ಯರನ್ನು ನೇಮಕ ಮಾಡುವಂತೆಯೂ ಹಾಗೂ ಅಗತ್ಯ ಔಷಧಿಗಳು ದೊರೆಯುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಇದಕ್ಕ ಸ್ಪಂದಿಸಿದ ಡಿ.ಹೆಚ್.ಓ ಈ ಮೊದಲು ಸದರಿ ಆಸ್ಪತ್ರೆಯಲ್ಲಿ ನಾನೂ ಕೂಡ ಕೆಲಸ ಮಾಡಿದ್ದು ಇಡಿ ಜಿಲ್ಲೆಯಲ್ಲಿಯೆ ಹೆಸರಾಗಿತ್ತು.ಇತ್ತೀಚಿನ ದಿನಗಳಲ್ಲಿ ವೈದ್ಯರಿಲ್ಲದ ಕಾರಣ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ವೈದ್ಯರು ಬರುತ್ತಿಲ್ಲವಾದ್ಧರಿಂದ ವೈದ್ಯರ ಕೊರತೆಯುಂಟಾಗಲು ಕಾರಣವಾಗಿದೆ.ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಖಾಯಂ ವೈದ್ಯರ ನಿಯೋಜನೆ ಮಾಡುವ ಭರವಸೆ ನೀಡಿದರು.
ಔಷಧಿಗಳ ಕೊರತೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಅಲ್ಲದೆ ಬಹಳಷ್ಟು ವರ್ಷದಿಂದ ವ್ಯರ್ಥವಾಗಿ ನಿಂತಿರುವ ತುರ್ತುವಾಹನಕ್ಕೆ ಕಾರ್ಯಕಲ್ಪ ನೀಡಿ ಒಬ್ಬ ಚಾಲಕನನ್ನು ನೇಮಿಸಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡುತ್ತೇನೆ ಎಂದು ಭರವಸೆ ಇತ್ತರು.
ಈ ಸಂದರ್ಭದಲ್ಲಿ ತಾಲ್ಲೂಕ್ ವೈದ್ಯಾಧಿಕಾರಿ ಡಾ.ಶಿವಕುಮಾರ್,ಡಾ.ಚಂದನಾ,ಡಾ.ಶೋಭಾ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ