ಹುಳಿಯಾರು:ಬ್ಯಾಂಕುಗಳಲ್ಲಿ ಕೇವಲ ಹತ್ತು ಸಾವಿರ ಸಾಲ ತರಲು ಇಂದು ಸಮಸ್ಯೆಯಿದ್ದು ಆಧಾರವಿಲ್ಲದೆ ಸಾಲ ತರುವುದು ದುಸ್ತರವಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದವರು ಸ್ವಸಹಾಯ ಸಂಘಗಳು ಮೂಲಕ ಪ್ರತಿಯೊಬ್ಬರಿಗೂ ಹತ್ತುಸಾವಿರದಿಂದ ಹಿಡಿದು ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲ ನೀಡುತ್ತಿರುವುದು ಗ್ರಾಮೀಣ ಮಹಿಳೆಯರ ಆರ್ಥಿಕ ಚೈತನ್ಯಕ್ಕೆ ಕಾರಣವಾಗಿದೆ ಎಂದು ಜಿಪಂ ಸದಸ್ಯ ಸಿದ್ಧರಾಮಯ್ಯ ಶ್ಲಾಘಿಸಿದರು.
ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರದಂದು ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಂಸ್ಥೆಯವರು ವೈಯುಕ್ತಿಕ ಸಾಲದ ಬದಲು ಗುಂಪು ಸಾಲ ನೀಡಿ ಉಪ್ಪಿನಕಾಯಿ,ಹಪ್ಪಳಸಂಡಿಗೆ,ಊದುಕಡ್ಡಿ ಮುಂತಾದ ಗುಡಿ ಕೈಗಾರಿಕೆಗಳಿಗ ಉತ್ತೇಜನ ನೀಡಿ ಅವರೇ ಕೊಂಡುಕೊಳ್ಳುವುದರ ಮೂಲಕ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆಗಳಿಗೆ ನಾಂದಿ ಹಾಡಬೇಕೆಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದ ಕೆಳ ವರ್ಗದ ಕುಟುಂಬಗಳಿಗೆ ಸಾಕಷ್ಟು ನೆರವು ದೊರೆತಿದ್ದು ಇದರಿಂದ ಸಿಗುವ ಸೌಲಭ್ಯ ಎಲ್ಲರಿಗೂ ದೊರೆಯುವಂತಾಗಲಿ,ರಾಜ್ಯದ ಎಲ್ಲೆಡೆ ಎಲ್ಲಡೆ ಇವರ ಸೇವೆ ವಿಸ್ತರಿಸಲಿ ಎಂದರು.
ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಬಿ.ನಾಗರಾಜು ಮಾತನಾಡಿ ಸ್ತ್ರೀ ಸಬಲೀಕರಣಕ್ಕೆ ಒತ್ತುನೀಡಿದ ವೀರೇಂದ್ರಹೆಗ್ಗಡೆಯವರು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಸಾಲನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತಂದಿದ್ದಾರೆ.ಮನೆ ನಿರ್ವಹಣೆಗಷ್ಟೆ ಮೀಸಲಾಗಿದ್ದ ಮಹಿಳೆಯರಲ್ಲಿಂದು ಮಹತ್ತರ ಬದಲಾವಣೆಯಾಗಿದ್ದು ಪುರುಷರಿಗೆ ಸರಿಸಮನಾಗಿ ಬ್ಯಾಂಕ್ ಮತ್ತಿತರ ಕ್ಷೇತ್ರಗಳಲ್ಲಿ ಒಳಹೊಕ್ಕು ಸಮಾಜಮುಖಿಯಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಹಕಾರಿ ತತ್ವದಲ್ಲಿ ಸಂಘವನ್ನು ನಿಯಮಗಳಿಗುಣವಾಗಿ ನಡೆಸಿಕೊಂಡು ಹೋದಾಗ ಮಾತ್ರ ಗುರಿ ಸಾಧನೆಯೊಂದಿಗೆ ಯೋಜನೆ ಪ್ರಗತಿ ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಎ.ಎಸೈ ಶಿವಪ್ಪ ಮಾತನಾಡಿ ಗ್ರಾಮೀಣಾಭಿವೃದ್ಧಿ ಹಿನ್ನಲೆಯಲ್ಲಿ ಸಾವಿರಾರು ಸ್ವಸಹಾಯ ಸಂಘಗಳ ಸ್ಥಾಪನೆ ಮಾಡಿ ದೈನಂದಿನ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡಿ ಮಹಿಳೆಯರನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ.ಸಂಘದಲ್ಲಿ ಸಾಲಕೊಡಿಸುವ ನೆಪದಲ್ಲಿ ಕೆಲವೊಂದು ಗ್ರಾಮಗಳಲ್ಲಿನ ಮಹಿಳೆಯರಿಗೆ ವಂಚಿಸುವ ಪ್ರಕರಣ ಗಮನಕ್ಕೆ ಬಂದಿದ್ದು ಮಹಿಳೆಯರು ಈ ಬಗ್ಗೆ ಎಚ್ಚರವಾಗಿರಬೇಕೆಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿ ಗೀತಕ್ಕ ಕಾರ್ಯಕ್ರಮ ಉದ್ಘಾಟಿಸಿ ಹಿತವಚನ ಹೇಳಿದರು.ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ,ತಿಮ್ಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ದೇವರಾಜು,ಚಿ.ನಾ.ಹಳ್ಳಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್,ಮೇಲ್ವಿಚಾರಕ ಸಂತೋಷ್ ಮೊದಲಾದವರಿದ್ದರು.ಹುಳಿಯಾರು ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಒಕ್ಕೂಟಗಳ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ