ಹುಳಿಯಾರು:ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರದ ಮೂಲಕ ಸರ್ಕಾರ ಖರೀದಿ ಮಾಡಿದ್ದ ರಾಗಿಗೆ ಎರಡು ತಿಂಗಳಾಗುತ್ತಾ ಬಂದರೂ ಹಣ ಪಾವತಿ ಮಾಡದಿರುವುದರಿಂದ ಕಂಗಾಲಾಗಿರುವ ರೈತರು ಬರದ ಇಂದಿನ ಪರಿಸ್ಥಿತಿಯಲ್ಲಿ ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದು ಖರೀದಿ ಕೇಂದ್ರಗಳ ಉಸಾಬರಿಯೇ ಬೇಡವೆಂದು ತೀರ್ಮಾನಿಸಿದ್ದಾರೆ.
ಖರೀದಿ ಕೇಂದ್ರ ಪ್ರಾರಂಭದಲ್ಲಿ ರಾಗಿ ಮಾರಿದ ವಾರದೊಳಗೆ ರೈತರ ಖಾತೆಗೆ ಹಣ ಪಾವತಿ ಮಾಡಲಾಗುವುದೆಂದು ಹೇಳಿದ್ದ ಇಲಾಖೆ ಇದೀಗ ತಿಂಗಳುಗಳುರುಳಿದರೂ ಪಾವತಿ ಮಾಡದೆ ಮುಗ್ಗುಮ್ಮಾಗಿ ಕುಳಿತಿರುವುದು ಸಮಸ್ಯೆಗೆ ಕಾರಣವಾಗಿದೆ.
ತಿಂಗಳಾದರೂ ಇಲ್ಲ:ತೀವ್ರ ಕುಸಿತ ಕಂಡಿದ್ದ ರಾಗಿಗೆ ಬೆಂಬಲ ಬೆಲೆ ಘೋಷಿಸಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿ ಕ್ವಿಂಟಾಲ್ ರಾಗಿಗೆ ೨,೧೦೦ ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿತ್ತು. ಜನವರಿ ೨೨ರಿಂದ ಮಾರ್ಚ್ ೨೯ ರವರೆಗೆ ಖರೀದಿ ನಡೆದಿದ್ದು ಹುಳಿಯಾರು ಕೇಂದ್ರದಲ್ಲಿ ಒಟ್ಟು ೨೩೩೩ ರೈತರುಗಳಿಂದ ೫೬೫೪೦ ಕ್ವಿಂಟಾಲ್ ರಾಗಿ ರೈತರಿಂದ ಕೊಳ್ಳಲಾಗಿತ್ತು. ಒಟ್ಟು ೧೧ಕೋಟಿ ೮೭ ಲಕ್ಷದ ೩೫ ಸಾವಿರ ರೂಪಾಯಿಗಳ ರಾಗಿ ಖರೀದಿ ಮಾಡಿದ ನಿಗಮ ಇದುವರೆಗೂ ಮೂರು ಹಂತದಲ್ಲಿ ಹಣ ಬಿಡುಗಡೆ ಮಾಡಿದೆ.ಕಡೆಯದಾಗಿ ಮಾರ್ಚ್ ೩ ರಿಂದ ೧೯ ರವರೆಗಿನ ಖರೀದಿಗಾಗಿ ಮೇ ೧೦ರಂದು ಹಣ ಬಿಡುಗಡೆ ಮಾಡಿದ್ದರೂ ಸಹ ಇನ್ನೂ ಸಾಕಷ್ಟು ರೈತರಿಗೆ ಬಾಕಿ ಉಳಿಸಿದ್ದಾರೆ.
ಸಮಸ್ಯೆ ಏನು:ಎಪಿಎಂಸಿಯಲ್ಲಿ ೧೪೦೦ ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ರಾಗಿಯ ಬೆಲೆ ಕುಸಿತದಿಂದ ಕಂಗೆಟ್ಟಿದ ರೈತರಿಗೆ ಸರ್ಕಾರ ಪ್ರಾರಂಭಿಸಿದ ಖರೀದಿ ಕೇಂದ್ರ ವರದಾನವಾಗಿದ್ದೇನೋ ಸರಿ.ಕೇಂದ್ರ ಪ್ರಾರಂಭದಿಂದಾಗಿ ಮಾರುಕಟ್ಟೆಯಲ್ಲಿ ಇಳಿಮುಖವಾಗಿದ್ದ ರಾಗಿ ಬೆಲೆಯೂ ಏರಿಕೆ ಕಂಡು ೧೮೦೦ರೂ ಆಸುಪಾಸಿನಲ್ಲಿ ಮಾರಾಟವಾಗುವಂತಾಗಿತ್ತು.ನಿತ್ಯ ಲೋಡ್ ಗಟ್ಟಲೆ ರಾಗಿ ಖರೀದಿಯೂ ಬಿಡುವಿಲ್ಲದಂತೆ ನಡೆದಿತ್ತು.ಮಾ.೨೯ ರವರೆಗೆ ರಾಗಿ ಖರೀದಿ ಮಾಡಿದ ನಿಗಮದವರು ಹಣಪಾವತಿಸಬೇಕಿದ್ದ ಸಮಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.
ದುಡ್ಡು ತಡವಾಗುವುದರಿಂದ ಮುಂದಿನ ದಿನಗಳಲ್ಲಿ ರೈತರು ಖರೀದಿ ಕೇಂದ್ರಕ್ಕೆ ಮಾರಿದ್ರೆ ದುಡ್ಡು ಬರವುದು ಯಾವತ್ತೂ ,ಏನೋ ,ಅದರ ಬದಲು ತಕ್ಷಣ ಹಣ ನೀಡುವ ವ್ಯಾಪಾರಸ್ಥರಿಗೆ ಮಾರಾಟ ಮಾಡಿದರೆ ಒಳ್ಳೆಯದು ಅನ್ನುವ ಅಭಿಪ್ರಾಯ ಮೂಡಿದಂತಾಗುತ್ತದೆ.ನಿಗಮಕ್ಕೆ ಮಾರಿದರೆ ದುಡ್ಡು ತಕ್ಷಣಕ್ಕೆ ಲಭ್ಯವಾಗುವುದಿಲ್ಲ ಎಂದ ಮೇಲೆ ಮಧ್ಯವರ್ತಿಗಳನ್ನೆ ಆಶ್ರಯ ಮಾಡುವ ಪರಿಸ್ಥಿತಿ ಎದುರಾಗುತ್ತದೆ.
ಎಚ್ಚರಿಕೆ: ನಿಗಮದಿಂದ ಸಾಕಷ್ಟು ರೈತರಿಗೆ ಬಾಕಿ ಬರಬೇಕಿದ್ದು ಖರೀದಿ ನಡೆದಿದ್ದ ಗೊಡೌನ್ ಸಧ್ಯ ಬಾಗಿಲು ಮುಚ್ಚಿದ್ದು ಖರೀದಿ ಅಧಿಕಾರಿಯೊಬ್ಬರ ನಂಬರ್ ಅಂಟಿಸಿದ್ದಾರೆ.ಅವರಿಗೆ ಫೋನ್ ಮಾಡಿದರೆ ಹಣ ಬರಬೇಕು ,ಬಂದಾಗ ನಿಮ್ಮ ಖಾತೆಗೆ ನೇರ ಹಾಕುತ್ತೇವೆ ಅಂತಾರೆ ಹೊರತು ಎಂದು ಬರುತ್ತೆ ಅಂತ ತಿಳಿಸುತ್ತಿಲ್ಲ.ಹೀಗಾದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ರಾಜ್ಯರೈತ ಸಂಘದ ಕಾರ್ಯದರ್ಶಿ ಕೆಂಕೆರೆ ಸತೀಶ್ .
![]() |
ಹುಳಿಯಾರಿನ ಎಪಿಎಂಸಿಯಲ್ಲಿ ತೆರಯಲಾಗಿದ್ದ ರಾಗಿ ಖರೀದಿ ಕೇಂದ್ರದ ದೃಶ್ಯ |
ಈ ಕುರಿತು ಪ್ರತಿಕ್ರಿಯಿಸಿದ ಹುಳಿಯಾರು ಎಪಿಎಂಸಿ ಕಾರ್ಯದರ್ಶಿ ನಾಗರಾಜು ಬೆಂಬಲ ಬೆಲೆ ಯೋಜನೆ ಮೂಲಕ ಖರೀದಿಸಿರುವ ರಾಗಿಗೆ ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದ್ದು, ನಿಗಮದಿಂದ ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗುತ್ತಿದೆ. ಎಪಿಎಂಸಿಯಿಂದ ನಿಗಮದವರಿಗೆ ಗೊಡೌನ್ ಹಾಗೂ ತೂಕದ ವ್ಯವಸ್ಥೆ ಮಾತ್ರ ಮಾಡಿಕೊಟ್ಟಿದ್ದು ,ಹಣ ಪಾವತಿಸುವುದಕ್ಕೂ ನಮಗೂ ಸಂಬಂಧವಿಲ್ಲ.ರೈತರು ನಿತ್ಯ ಎಪಿಎಂಸಿಗೆ ಅಲೆದಾಡುತ್ತಿದ್ದು ,ಹಣ ಬಿಡುಗಡೆ ಬಗ್ಗೆ ಎಪಿಎಂಸಿ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಹಾಗೂ ನಾಗರಿಕ ವ್ಯವಹಾರಗಳ ನಿಗಮಕ್ಕೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಬರಪರಿಸ್ಥಿಯಿಂದ ಕಂಗೆಟ್ಟಿರುವ ತಾಲ್ಲೂಕಿನ ರೈತರಿಗೆ ತುರ್ತಾಗಿ ಬಾಕಿ ಹಣ ಪಾವತಿಸುವ ಅನಿವಾರ್ಯತೆಯಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.
--------------------------------------------------------------------------
ಕಳೆದ ಇಪ್ಪತ್ತು ದಿನಗಳಿಂದ ರಾಗಿಯ ಬಾಕಿ ಹಣಕ್ಕಾಗಿ ಎಪಿಎಂಸಿಗೆ ನಿತ್ಯ ಬರುತ್ತಿದ್ದೇನೆ.ಆದರೆ ಹಣ ಮಾತ್ರ ಬಂದಿಲ್ಲ.ಎಂದು ಬರುತ್ತೆ ಅಂತಾನೂ ಗೊತ್ತಿಲ್ಲ.ಖರೀದಿ ಕೇಂದ್ರದ ಬದಲು ಅಂಗಡಿಗೆ ಮಾರಿದ್ದರೂ ನಮಗೆ ತಕ್ಷಣ ಹಣ ಕೈಸೇರ್ತಿತ್ತು.ತುರ್ತಾಗಿ ಹಣ ಬೇಕಿದ್ದು ಮಾಮೂಲಿ ಅಂಗಡಿಯವರಿಂದ ಕೈಗಡ ತರುವ ಪರಿಸ್ಥಿತಿ ಉಂಟಾಗಿದೆ: ಸಣ್ಣವರದಯ್ಯ-ರೈತ, ಸೀಗೆಬಾಗಿ
------------------------
ಹುಳಿಯಾರು ಎಪಿಎಂಸಿಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಿ ೨ ತಿಂಗಳಾದರೂ ಸಹ ಖರೀದಿಸಿದ ರಾಗಿಗೆ ಇನ್ನೂ ಹಣ ಬಂದಿಲ್ಲ.ಇಲ್ಲಿ ಎಪಿಎಂಸಿಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲವೆನ್ನುತ್ತರೆ. ರಾಗಿ ಖರೀದಿ ಕೇಂದ್ರ ಮುಚ್ಚಿರುವುದರಿಂದ ಯಾರನ್ನು ಕೇಳುವುದೆಂದೆ ತಿಳಿಯುತ್ತಿಲ್ಲ. :ಮಹಲಿಂಗಯ್ಯ-ನಿರುವಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ