ಹುಳಿಯಾರು: ಹೋಬಳಿಯ ಯಳನಾಡುವಿನ ಶ್ರೀಗುರುಸಿದ್ಧರಾಮೇಶ್ವರ ಸ್ವಾಮಿಯವರ ಮಹಾರಥೋತ್ಸವದ ಅಂಗವಾಗಿ ನಡೆಯುವ ಹರಿಯಪ್ಪನ ಸೇವೆಗಾಗಿ ಆಂಧ್ರಪ್ರದೇಶದ ಪೆನುಗೊಂಡಕ್ಕೆ ದೇವರ ಬಸವನೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದ ಎಂಟುಜನರ ತಂಡ ಗುರುವಾರದಂದು ಹಿಂದಿರುಗಿ ಯಳನಾಡು ಸಮೀಪದ ತಮ್ಮಡಿಹಳ್ಳಿ ತಲುಪಿದ್ದಾರೆ.
ಯಳನಾಡುವಿನ ಶ್ರೀಗುರುಸಿದ್ಧರಾಮೇಶ್ವರ ಸ್ವಾಮಿಯವರ ವಿಶೇಷ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯವರ ಸನ್ನಿಧಿಯಲ್ಲಿ ನಡೆಯುವ ಹರಿಯಪ್ಪನ ಸೇವೆ(ಕುಂಬಳ ಸೇವೆ)ಗಾಗಿ ಪೆನುಗೊಂಡದಿಂದ ಕುರಿ ತರುವ ಪ್ರತೀತಿಯಿದ್ದು ಇದಕ್ಕಾಗಿ ದೇವರ ಆಯ್ಕೆಯ ಎಂಟುಜನರ ತಂಡವನ್ನು ನಿಯುಕ್ತಿಗೊಳಿಸಲಾಗಿತ್ತು.
ಯಾತ್ರೆಗೆ ತೆರಳುವ ತಂಡಕ್ಕೆ ಕೆಲವೊಂದು ಕಟ್ಟುಪಾಡುಗಳಿದ್ದು ಬಸವನ ಹಿಂದೆ ಕಾಲ್ನಡಿಗೆಯಲ್ಲಿ ಬಸವ ಸಂಚರಿಸುವ ಹಾದಿಯಲ್ಲಿ ನಡೆದು ಬಸವ ಎಲ್ಲೆಲ್ಲಿ ತಂಗುವುದೋ ಅಲ್ಲಿಯೇ ಅವರು ಠಿಕಾಣಿ ಹಾಕಿ ವಿಶ್ರಾಂತಿ ಪಡೆಯಬೇಕು.ಕಳೆದ ಏಪ್ರಿಲ್ ೨೮ರಂದು ಯಳನಾಡುವಿನಲ್ಲಿ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಇದಕ್ಕಾಗಿಯೆ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ಪೂಜಾರಿ ಜಗದೀಶ್,ಪುಟ್ಟಪ್ಪ,ಶಿವಣ್ಣ,ನಾಗರಾಜು, ಕಿರಣ್, ಶಿವರಾಜು,ಪುಟ್ಟಯ್ಯ,ನೀಲಕಂಠಪ್ಪ ಅವರುಗಳನ್ನು ಸ್ವಾಮಿಯ ಸನ್ನಿಧಿಯಲ್ಲಿ ಬೀಳ್ಕೊಡಲಾಗಿತ್ತು.ನಿತ್ಯ ೩೦ ರಿಂದ ೪೦ ಕಿಮೀ ವರೆಗೆ ಕ್ರಮಿಸಿದ ತಂಡ ಪೆನುಗೊಂಡ ತಲುಪಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕುರಿಗಳನ್ನು ಕೊಂಡು ಹಿಂದಿರುಗಿದ್ದಾರೆ.
ಯಳನಾಡು ಸಿದ್ಧರಾಮೇಶ್ವರ,ಭಟ್ಟರಹಳ್ಳಿ ಸಿದ್ಧರಾಮೇಶ್ವರ,ತಮ್ಮಡಿಹಳ್ಳಿ ಸಿದ್ಧರಾಮೇಶ್ವರ,ಯಳನಾಡುವಿನ ರೇವಣಸಿದ್ಧೇಶ್ವರ, ಹಾಗೂ ಹರಿಯಪ್ಪನ ಹೆಸರಿನಲ್ಲಿ ಐದು ಕುರಿಗಳನ್ನು ತರಲಾಗಿದೆ.ಮಾರ್ಗ ಮಧ್ಯೆ ಹುಳಿಯಾರು ಸಮೀಪದ ಕೆ.ಸಿ.ಪಾಳ್ಯ ಹಾಗೂ ಲಿಂಗಪ್ಪನಪಾಳ್ಯದಲ್ಲಿ ತಂಗಿದ್ದ ದೇವರ ಬಸವ ಹಾಗೂ ಕುರಿಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ