ಹನ್ನೆರಡು ವರ್ಷ ನಂತರದ ಸಿದ್ರಾಮಣ್ಣನ ದೊಡ್ಡಜಾತ್ರೆ
--------
ಹುಳಿಯಾರು : ಹೋಬಳಿ ಯಳನಡು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ವೈಭವಯುತ ಜಾತ್ರಾಮಹೋತ್ಸವ (ದೊಡ್ಡಜಾತ್ರೆ) ಇದೇ ಮೇ.೧೧ರ ಬುಧವಾರದಿಂದ ಪ್ರಾರಂಭವಾಗಿದ್ದು ಮೇ,೨೨ರ ವರೆಗೆ ೧೨ ದಿನಗಳ ಕಾಲ ನಡೆಯಲಿದೆ.
ವಾರ್ಷಿಕ ಜಾತ್ರೆ ಹೊರತಾಗಿ ಪ್ರತಿ ೧೨ ವರ್ಷಕ್ಕೊಮ್ಮೆ ಗುರುಸಿದ್ದರಾಮೇಶ್ವರ ಸ್ವಾಮಿಯ ದೊಡ್ಡಜಾತ್ರೆಯ ಸಂಪ್ರದಾಯವಿದ್ದು ಈ ಬಾರಿ ವಿಶೇಷವಾಗಿ ಮಾಜಿ ಪ್ರಧಾನಿ ದೇವೇಗೌಡರು, ಹಾಲಿ ಮುಖ್ಯಮಂತ್ರಿ ಸಿದ್ದರಾಮಣ್ಣನವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ತಾ.೧೧ರ ಬುಧವಾರ ಸ್ವಾಮಿಯವರು ಮೂಲಸ್ಥಾನದಿಂದ ಬಂಗಾರದ ಪಲ್ಲಕ್ಕಿಯಲ್ಲಿ ದಯಮಾಡಿಸಿ,ತಾ.೧೨ರ ಗುರುವಾರ ಸ್ವಾಮಿ ಹಾಗೂ ವಿವಿಧ ದೇವರುಗಳೊಂದಿಗೆ ಸುಕ್ಷೇತ್ರ ದಶರಥ ರಾಮೇಶ್ವರ ವಜ್ರಕ್ಕೆ ತೆರಳಿದೆ,
ಇಂದು ತಾ.೧೩ರ ಶುಕ್ರವಾರ ದಶರಾಮೇಶ್ವರ ವಜ್ರದಲ್ಲಿ ಗಂಗಾಸ್ನಾನ,ಸಹಸ್ರ ಬಿಲ್ವಾರ್ಚನೆ, ಪೂಜಾಫಲಹಾರ ಸೇವೆಯೊಂದಿಗೆ ಗುರುಪರುವು ನಡೆಯಲಿದೆ.
ತಾ.೧೪ರ ಶನಿವಾರ ವಜ್ರದಿಂದ ಆಗಮಿಸಿದ ಸ್ವಾಮಿಗೆ ಆರತಿ ಮಹೋತ್ಸವ,ತಾ.೧೫ರ ಭಾನುವಾರ ಗಂಗಮ್ಮನ ಕೆರೆಯಲ್ಲಿ ಗಂಗಾಸ್ನಾನ,ಸಹಸ್ರ ಲಿಂಗಾರ್ಚನೆ,ತಪಸ್ಸಾಮ್ರಾಜ್ಯ ಫಲಹಾರಾಧಿಸೇವೆ ಹಾಗೂ ರಾತ್ರಿ ಸ್ವಾಮಿಯ ಬಂಗಾರದ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.ತಾ.೧೬ರ ಸೋಮವಾರ ರಾತ್ರಿ ಬೆಳ್ಳಿ ಬಸವನೋತ್ಸವ,ತಾ.೧೭ರ ಮಂಗಳವಾರ ಬಿಲ್ವವೃಕ್ಷವಾಹನೋತ್ಸವ,ತಾ.೧೮ರ ಬುಧವಾರ ಮಧ್ಯಾಹ್ನ ಕಳಶಧಾರಣಾಧಿ ಕ್ಲುಪ್ತ ಕಾರ್ಯಗಳು,ತಾ.೧೯ರ ಗುರುವಾರ ಬೆಳಿಗ್ಗೆ ಕಂತೆ ಸೇವೆಕಾರ್ಯ,ತಾ.೨೦ರ ಶುಕ್ರವಾರ ಮಧ್ಯಾಹ್ನ ೧೨ಕ್ಕೆ ಸ್ವಾಮಿಯ ಮಹಾರಥೋತ್ಸವ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.
ತಾ.೨೧ರ ಶನಿವಾರ ಗುರುಪರುವು ಮತ್ತು ಕುಂಬಳದ ಸೇವೆ, ಸಂಜೆ ಬಂಗಾರದ ಅಡ್ಡಪಲ್ಲಕ್ಕಿ ಉತ್ಸವ, ಉಯ್ಯಾಲೋತ್ಸವ, ತೇರುಮಂಟಪದ ಕೈಲಾಸೋತ್ಸವ ನಡೆಯಲಿದೆ.ತಾ.೨೨ರ ಭಾನುವಾರ ಸ್ವಾಮಿಯ ಓಕಳಿಸೇವೆ ಹಾಗೂ ಸಕಲ ದೇವರುಗಳ ಬೀಳ್ಕೊಡುಗೆ ನಡೆಯಲಿದ್ದು ಸಂಜೆ ಅವಭೃತ ಸ್ನಾನ, ನಡೆಮುಡಿ ಉತ್ಸವದೊಂದಿಗೆ ಸ್ವಾಮಿಯ ಮೂಲಸ್ಥಾನಕ್ಕೆ ಬಿಜಯಂಗೈಯುವ ಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ