ಹುಳಿಯಾರು :ನಮ್ಮ ನಾಡಿನ ಪರಂಪರೆಯಲ್ಲಿ ಭಕ್ತಿಗೆ ಬಸವಣ್ಣ, ಆಧ್ಯಾತ್ಮಕ್ಕೆ ಅಲ್ಲಮಪ್ರಭು, ವೈರಾಗ್ಯಕ್ಕೆ ಅಕ್ಕಮಹಾದೇವಿ, ಕಾಯಕತತ್ವಕ್ಕೆ ಸಿದ್ಧರಾಮರು ಎಂಬ ನಂಬಿಕೆ ಮನೆ ಮಾಡಿದ್ದು ಅದರಂತೆ ಸಿದ್ಧರಾಮರು ಕರುನಾಡು ಕಂಡಿರುವ ಶ್ರೇಷ್ಟ ಕಾಯಕ ಯೋಗಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿದ್ಧರಾಮರ ಗುಣಗಾನ ಮಾಡಿದರು.
ಹುಳಿಯಾರು ಸಮೀಪದ ಯಳನಾಡು ಗ್ರಾಮದಲ್ಲಿ ಶ್ರೀಸಿದ್ಧರಾಮೇಶ್ವರಸ್ವಾಮಿಯವರ ದೊಡ್ಡಜಾತ್ರೆಯ ಅಂಗವಾಗಿ ಈಚೆಗೆ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸ ಎಂದು ನಂಬಿದ್ದ ಸಿದ್ಧರಾಮರು ಸಂಚರಿಸಿದ ಕಡೆಯೆಲ್ಲಾ ಕೆರೆಕಟ್ಟೆ ಕಟ್ಟಿ ಕಾಯಕ ತತ್ವ, ರೈತ ನಿಷ್ಠೆ ಹಾಗೂ ಸಾಮಾಜಿಕ ಕಳಕಳಿಗೆ ನಿದರ್ಶನರಾಗಿದ್ದಾರೆ.ಸಿದ್ಧರಾಮರು ಆಚಾರದಿಂದ ಶರಣರಾದವರು. ಯಳನಾಡುವಿನ ಅವರ ಈ ಪುಣ್ಯಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು ಸಿದ್ಧರಾಮರ ಮಠಮಂದಿರಗಳನ್ನು ಅಭಿವೃದ್ಧಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ರೈತರ ಹಿತಕಾಯಲು ಬದ್ಧನಾಗಿರುವ ನನಗೆ ರೈತರ, ಶೋಷಿತರ, ನಿರ್ಗತಿಕರ, ಕೂಲಿಕಾರ್ಮಿಕರ, ಸ್ತ್ರೀಯರ ಬಗ್ಗೆ ಕಾಳಜಿ ಇದೆ. ಹಾಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದೆ, ೨ ಬಾರಿ ಸಾಲ ಮನ್ನ ಮಾಡಿದೆ. ಹಾಗಾಗಿಯೇ ನಮ್ಮ ಆಡಳಿತಾವಧಿಯ ಕಾಲವನ್ನು ಸುವರ್ಣಕಾಲ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದು ಮುಂದಿನ ಬಾರಿ ಅವಕಾಶ ಕೊಡಿ.ನಿಮ್ಮ ಆಶಯಗಳಿಗೆ ನಂಬಿಕೆಗೆ ದ್ರೋಹ ಬಗೆಯಲಾರೆ ಎಂದು ಬೇಕಿದ್ದರೆ ರಕ್ತದಲ್ಲಿ ಬರೆದುಕೊಡುವೆ ಎಂದರು .
ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಕಾಣದ ಬರಕಾಲ ಈಗ ಬಂದಿದ್ದು ಕೆರೆಕಟ್ಟೆಗಳು ಒಣಗಿ ಜನಜಾನುವಾರುಗಳು ತತ್ತರಿಸುತ್ತಿವೆ. ಆದರೂ ರಾಜ್ಯಸರ್ಕಾರ ದಿವ್ಯನಿರ್ಲಕ್ಷ್ಯ ತಾಳಿದೆ. ಕೇಂದ್ರದ ಮೇಲೆ ಇಲ್ಲಸಲ್ಲದ ದೂರು ಹೇಳಿ ಬರಗಾಲದಲ್ಲಿ ಜನರ ನೆರವಿಗೆ ಧಾವಿಸದೆ ದಿನದೂಡುತ್ತಿದೆ ಎಂದು ಆರೋಪಿಸಿದರು.
ರೈತರ ನೋವಿಗೆ ಸ್ಪಂದಿಸಿರುವ ಮೋದಿ ಸರ್ಕಾರ ಹೊಸ ಬೆಳೆ ವಿಮೆ ನೀತಿ ಜಾರಿಗೆ ತಂದಿದ್ದು ಶೇ.೩೫ ರಷ್ಟು ಬೆಳೆ ಹಾಳಾಗಿದ್ದರೂ ಪರಿಹಾರ ಕೊಡಲು ಮುಂದಾಗಿದೆ. ದೇಶದ ಯಾವುದೇ ಒಂದು ಸರ್ವೆ ನಂಬರಲ್ಲಿ ಬೆಳೆ ಹಾಳಾಗಿದ್ದರೂ ಸಹ ಸ್ಯಾಟಲೈಟ್ ಮೂಲಕ ಪರಿಶೀಲಿಸಿ ಪರಿಹಾರ ಕೊಡುವುದು ಈ ಯೋಜನೆಯಲ್ಲಿದೆ. ಅಲ್ಲದೆ ಕೆರೆ ಹೂಳು ಎತ್ತುವ ಕಾರ್ಯ, ಸಮಗ್ರ ನೀರಾವರಿ ವ್ಯವಸ್ಥೆ, ಅಲ್ಲದೆ ರೈತರ ಆದಾಯ ಹೆಚ್ಚಳಕ್ಕೆ ವಿಶೇಷ ಯೋಜನೆ ರೂಪಿಸುವ ಚಿಂತನೆ ಅವರಲ್ಲಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಯಳನಾಡು-ಅರಸೀಕೆರೆ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ಮಾಜಿ ಸಂಸದ ಬಸವರಾಜು,ಶಾಸಕ ಸುರೇಶ್ ಗೌಡ, ಮಾಜಿ ಸಚಿವರಾದ ಗೋವಿಂದಕಾರಜೋಳ, ಹಾಗೂ ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಹುಲಿನಾಯ್ಕರ್, ಜಿ.ಪಂ. ಮಾಜಿ ಅಧ್ಯಕ್ಷ ಹುಚ್ಚಯ್ಯ, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಕೆಂಕೆರೆನವೀನ್, ಶಶಿಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ