ಬಸವ ಜಯಂತಿ ಆಚರಣೆ ಬಗ್ಗೆ ಪಂಚಾಯ್ತಿ ಸದಸ್ಯರ ನಿರಾಸಕ್ತಿ
-----------------------------
ಹುಳಿಯಾರು:ಪ್ರತಿಯೊಂದು ಗ್ರಾಮಗಳ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಗ್ರಾಮಪಂಚಾಯ್ತಿಗಳಲ್ಲಿ ಕೆಲವೊಂದು ದಾರ್ಶನಿಕರ ಜಯಂತಿ ಆಚರಣೆಗೆ ಸರ್ಕಾರ ಆದೇಶಿಸಿದ್ದರೂ ಸಹ ಇಲ್ಲಿನ ಗ್ರಾಮಪಂಚಾಯ್ತಿಯಲ್ಲಿ ಸದಸ್ಯರ ಸಹಭಾಗಿತ್ವ ಇಲ್ಲದೆ ಆಚರಣೆಗಳು ಸಾರ್ವಜನಿಕರಲ್ಲಿ ನಗೆಪಾಟಿಲೀಗಾಡಾಗುತ್ತಿದೆ.
ಇಂದು ನಾಡು ಕಂಡ ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿ ಆಚರಣೆಯಿದ್ದು ಜಿಲ್ಲೆಯ ಅತಿದೊಡ್ಡ ಪಂಚಾಯ್ತಿಯೆಂಬ ಹೆಗ್ಗಳಿಕೆಯಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕೇವಲ ಬೆರಳೇಣಿಕೆಯಷ್ಟು ಮಂದಿ ಮಾತ್ರ ಹಾಜರಿದ್ದು ಆಚರಿಸಿದ ಸಂಗತಿ ಚರ್ಚೆಯ ವಿಷಯವಾಗಿದೆ. ಗ್ರಾಪಂ ಅಧ್ಯಕ್ಷೆ ಗೀತಾ,ಸದಸ್ಯೆ ಸಿದ್ದಗಂಗಮ್ಮ,ಕಾರ್ಯದರ್ಶಿ ಉಮಾಶಂಕರ್,ಬಿಲ್ ಕಲೆಕ್ಟರ್ ರಾಜಣ್ಣ,ಕೃಷ್ಣಮೂರ್ತಿ,ಸಾರ್ವಜನಿಕರ ಪೈಕಿ ಇಮ್ರಾಜ್ ಹೊರತುಪಡಿಸಿದರೆ ಪಿಡಿಓ ಸೇರಿದಂತೆ ಇನ್ನುಳಿದ ೩೭ ಸದಸ್ಯರು ಗೈರಾಗಿದ್ದು ಸದಸ್ಯರ ನಿರಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ.
![]() |
ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಬಸವಜಯಂತಿಯಲ್ಲಿ ಹಾಜರಿರುವ ಬೆರಳೇಣಿಕೆಯ ಸದಸ್ಯರು ಹಾಗೂ ಸಿಬ್ಬಂದಿ. |
ಕಳೆದೊಂದು ವರ್ಷದಿಂದ ಕನಕ ಜಯಂತಿ,ಮಹಾವೀರ ಜಯಂತಿ,ಶಿವಾಜಿ ಜಯಂತಿ,ವಾಲ್ಮೀಕಿ ಜಯಂತಿ,ಟಿಪ್ಪು ಜಯಂತಿ,ಸಿದ್ದರಾಮೇಶ್ವರ ಜಯಂತಿ,ಬಸವ ಜಯಂತಿ ಸೇರಿದಂತೆ ಹಲವಾರು ದಾರ್ಶನಿಕರ ಆಚರಣೆಗೆ ಒತ್ತುನೀಡಿ ಆದೇಶ ಮಾಡಿದೆ.ಹೆಚ್ಚಿನ ಸಂದರ್ಭಗಳಲ್ಲಿ ಆಯಾ ಜಯಂತಿಯಂದು ರಜೆ ಕೂಡ ಇರುವುದರಿಂದ ಅಧಿಕಾರಿಗಳು ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಯಿಲ್ಲದೆ ಕೇವಲ ಶಿಷ್ಟಾಚಾರ ಪಾಲನೆಗೋಸ್ಕರ ಜಯಂತಿ ಆಚರಣೆ ಮಾಡುವ ಪ್ರಸಂಗ ಉಂಟಾಗುತ್ತಿದೆ.
ಇಂದಿನ ಬಸವ ಜಯಂತಿ ಸೇರಿದಂತೆ ಇತ್ತಿಚೆಗೆ ನಡೆದ ದಾಸೀಮಯ್ಯ ಜಯಂತಿ,ಬಾಬು ಜಗಜೀವನರಾಂ ಜಯಂತಿ,ಅಂಬೇಡ್ಕರ್ ಜಯಂತಿ ಮುಂತಾದ ಜಯಂತಿಗಳ ಆಚರಣೆ ಪಂಚಾಯ್ತಿಯಲ್ಲಿ ನಡೆದರು ಸಹ ೩೯ ಸದಸ್ಯರುಗಳ ಪೈಕಿ ಅಧ್ಯಕ್ಷರು ಕೇವಲ ಮೂರ್ನಾಲ್ಕು ಮಂದಿ ಸದಸ್ಯರು ಮಾತ್ರ ಹಾಜರಿರುವುದು ಹಾಗೂ ಹೆಚ್ಚಿನ ಸಂದರ್ಭದಲ್ಲಿ ಸಿಬ್ಬಂದಿಯೂ ಸೇರಿ ಕೇವಲ ಏಳೆಂಟು ಮಂದಿ ಮಾತ್ರ ಪಾಲ್ಗೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.
ನಾಡಿನ ಮಹಾಪುರುಷರ ಜಯಂತಿಗಳನ್ನು ಆಚರಿಸುವುದು ಸರ್ಕಾರ ಅವರಿಗೆ ಸಲ್ಲಿಸುವ ಒಂದು ಗೌರವದ ಸಂಗತಿಯಾಗಿದ್ದರೂ ಸಹ ಜಯಂತಿಗಳ ದಿನ ಸರ್ಕಾರಿ ರಜಾವಿರುವುದರಿಂದ ಯಾರೊಬ್ಬರು ಬಾರದೆ ಅನಿವಾರ್ಯವಾಗಿ ಸಿಬ್ಬಂದಿಗಳೆ ಜಯಂತಿ ಆಚರಿಸುವಂತಾಗಿದೆ.ಆಗಮಿಸುವ ಒಂದಿಬ್ಬರು ಸದಸ್ಯರೊಂದಿಗೆ ಸಿಬ್ಬಂದಿ ವರ್ಗದವರು ಮಹಾನುಭಾವರ ಫೋಟೊ ಇಟ್ಟು ಹಾರ ಹಾಕಿ ಫೋಟೊ ತೆಗೆದುಕೊಳ್ಳುವುದೆ ಜಯಂತಿ ಆಚರಣೆಯಾಗಿದೆ. ಕೇವಲ ಐದೇ ನಿಮಿಷದಲ್ಲಿ ಮುಗಿಯುವ ಕಾಟಾಚಾರದ ಜಯಂತಿಗಳು ಆಚರಿಸಬೇಕಾದ ಅಗತ್ಯವಾದರೂ ಏನೆಂದು ಕೇಳುವಂತಾಗಿದೆ.
ಪಂಚಾಯ್ತಿ ಅನುದಾನದಲ್ಲಿ ಖರ್ಚು ಹಾಕಿ ಆಚರಿಸುವ ಜಯಂತಿ ಬಗ್ಗೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂದು ಕೆಲವೊಂದು ಮಾರ್ಗದರ್ಶಿ ಸೂತ್ರರೂಪಿಸಬೇಕಾದ ಅನಿವಾರ್ಯತೆಯಿದೆ.
----------------------------------------------------
ಹೆಚ್ಚಿನ ಜಯಂತಿಗಳು ಆಯಾ ಜಾತಿಗೆ ಸೀಮಿತವಾಗಿದ್ದು ಅವರುಗಳ ಪಾಲ್ಗೊಳ್ಳುವಿಕೆ ಅನಿವಾರ್ಯ.ಆದರೆ ಇಂದು ಸಾರ್ವಜನಿಕರು ಹಾಗೂ ಸದಸ್ಯರುಗಳು ಇದರೆಡೆ ಆಸಕ್ತಿವಹಿಸುತ್ತಿಲ್ಲ.ಇಂದಿನ ಬಸವ ಜಯಂತಿ ಆಚರಣೆ ಬಗ್ಗೆ ವಾರದ ಮುನ್ನವೇ ಸದಸ್ಯರುಗಳಿಗೆ ಮೆಮೋ ಜಾರಿ ಮಾಡಿದ್ದರೂ ಸಹ ಯಾರೊಬ್ಬರು ಬಂದಿಲ್ಲ.ಹಾಗಾಗಿ ಸಿಬ್ಬಂದಿಯೆ ಆಚರಿಸುವುದು ಅನಿವಾರ್ಯವಾಗಿದೆ.: ಗೀತಾ,ಗ್ರಾಪಂ ಅಧ್ಯಕ್ಷೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ