ಹುಳಿಯಾರು:ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕ ಶಂಕರಭಗವತ್ಪಾದರು ಎಂದು ಹು.ಲ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಶಂಕರ ಜಯಂತಿಯಲ್ಲಿ ಶ್ರೀ ಶಂಕರರ ಬಗ್ಗೆ ಉಪನ್ಯಾಸ ನೀಡಿದ ಅವರು ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಶಂಕರಾಚಾರ್ಯರು ಜೀವಿತದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು ಎಂದರು.
ಶಂಕರ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುವುದಿದ್ದು ಆದಿ ಶಂಕರರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದ್ದು ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಸಹ ಇವರು ಮಾಡಿರುವ ಸಾಧನೆ ಅಪಾರ ಎಂದರು.
ಆದಿಶಂಕರರು ಬಾದರಾಯಣರ "ಬ್ರಹ್ಮಸೂತ್ರ"ಗಳಿಗೆ ಭಾಷ್ಯವನ್ನು ರಚಿಸಿದರಲ್ಲದೆ ಭಗವದ್-ಗೀತೆ,ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಅಚಾರ್ಯರಾಗಿದ್ದು ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು.ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು ಎಂದರು.
ಕಾರ್ಯಕ್ರಮವನ್ನು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್ ಶಂಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆಗೊಳಿಸಿದರು.ಗ್ರಾಪಂ ಸದಸ್ಯ ಕೋಳಿ ಶ್ರೀನಿವಾಸ್,ಪಿಡಿಓ ಸಿದ್ದರಾಮಣ್ಣ.ಇಮ್ರಾಜ್ ,ಬಿ.ವಿ.ಶ್ರೀನಿವಾಸ್,ವಿಪ್ರಸಂಘದ ವಿಶ್ವನಾಥ್,ರಂಗನಾಥ್ ಪ್ರಸಾದ್, ಅಶ್ವತ್ಥಣ್ಣ, ಮಂಜುನಾಥ್,ಬಿಲ್ ಕಲೆಕ್ಟರ್ ಕೃಷ್ಣಮೂರ್ತಿ,ವೆಂಕಟೇಶ್ ,ರೇಖಾ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ