ನಿಗಮದ ಅಸಡ್ಡೆ ಧೋರಣೆ ಬಗ್ಗೆ ರೈತರ ಅಸಮಾಧಾನ
---------------------------------------
ವರದಿ: ಡಿ.ಆರ್.ನರೇಂದ್ರ ಬಾಬು
---------------------------------------
ವರದಿ: ಡಿ.ಆರ್.ನರೇಂದ್ರ ಬಾಬು
ಹುಳಿಯಾರು:ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ರಾಗಿ ಖರೀದಿ ಕೇಂದ್ರ ಕಳೆದ ವಾರವೇ ಚಾಲನೆಗೊಂಡರೂ ಸಹ ಖರೀದಿ ಮಾತ್ರ ಪ್ರಾರಂಭವಾಗಿಲ್ಲ.ಶುಕ್ರವಾರವಷ್ಟೆ ಶಾಸಕರೂ ತರಾತುರಿಯಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದರಾದರೂ ಟೋಕನ್ ನೀಡಲು ಕಂಪ್ಯೂಟರ್ ಕೊಟ್ಟಿಲ್ಲವೆಂಬ ಕಾರಣ ನೀಡಿ ಮುಂದೂಡಿರುವುದು ರೈತರ ಅಸಮಧಾನಕ್ಕೆ ಕಾರಣವಾಗಿದೆ.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು |
ಪ್ರಾರಂಭದ ದಿನವೇ ರೈತರ ಬಗ್ಗೆ ಅಸಡ್ಡೆಯಾಗಿ ವರ್ತಿಸಿದ ಇಲಾಖೆಯ ವರ್ತನೆ ಕೂಡ ಟೀಕೆಗೆ ಗುರಿಯಾಗಿದೆ.ಖರೀದಿ ಕೇಂದ್ರದ ಬಗ್ಗೆ ಪ್ರಚಾರವನ್ನು ಕೈಗೊಳ್ಳದೆ ರೈತರಿಗೆ ಮಾಹಿತಿಯೇ ನೀಡದ ನಿಗಮದವರು ಶಾಸಕರನ್ನು ಮಾತ್ರ ಕರೆಯಿಸಿ ಚಾಲನೆ ನೀಡಿದರು.ಆ ಸಂದರ್ಭದಲ್ಲೂ ಸಹ ಖರೀದಿ ಕೇಂದ್ರದ ಬಗ್ಗೆ ಯಾವುದೇ ಮಾಹಿತಿ ನೀಡದೆ ಕೇವಲ ಶಾಸಕರಿಂದ ಟೇಪ್ ಕತ್ತರಿಸಿ ಪೂಜಾ ಕಾರ್ಯಕ್ರಮ ನಡೆಸಿ ಸಭೆ ಸೀಮಿತಗೊಳಿಸಿ ಮುಗಿಸಿದ್ದು ಎಲ್ಲರ ಟೀಕೆಗೆ ಕಾರಣವಾಯಿತು.ತೀರಾ ಬೆಲೆ ಕುಸಿತವಾಗಿ ೧೨೦೦ ರ ಅಸುಪಾಸಿನಲ್ಲಿರುವ ರಾಗಿಗೆ ಬೆಂಬಲ ಬೆಲೆ ನೀಡಿ ರಾಗಿ ಬೆಳೆದಿರುವ ರೈತರಿಗೆ ಬೆಳೆಗಾರರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದ್ದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದವರು ಈ ಬಗ್ಗೆ ಗಂಭೀರವಾಗಿ ವರ್ತಿಸದೆ ಅಸಡ್ಡೆಯಾಗಿ ವರ್ತಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಬಲ ಬೆಲೆ: ತಾಲ್ಲೂಕಿನಲ್ಲಿ ಅದರಲ್ಲೂ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಪ್ರಮುಖ ಬೆಳೆ ರಾಗಿಯಾಗಿದ್ದು ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿತ ಕಂಡಿದ್ದು, ಕ್ವಿಂಟಲ್ ೧೨೦೦-೧೪೦೦ ರ ಆಸುಪಾಸಿನಲ್ಲಿದೆ.ಕೇಂದ್ರ ಸರ್ಕಾರವು ಈ ಬಾರಿ ಪ್ರತಿ ಕ್ವಿಂಟಲ್ ರಾಗಿಗೆ 1,650 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದು ಅದಕ್ಕೆ ರಾಜ್ಯ ಸರ್ಕಾರದ 450 ರೂ ಪ್ರೋತ್ಸಾಹಧನ ಸೇರಿ ಪ್ರತಿ ಕ್ವಿಂಟಾಲ್ ಗೆ ೨೧೦೦ ದರ ಸಿಗಲಿದ್ದು ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಬೆಲೆಗಿಂತ ಸಾವಿರ ರೂಪಾಯಿ ಹೆಚ್ಚಿಗೆ ದೊರೆಯಲಿದೆ. ಹಾಗಾಗಿ ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ರೈತರು ನುಕುನುಗ್ಗಲು ನಡೆಯಲಿದೆ.
ಗುಣಮಟ್ಟಕ್ಕೆ ಆದ್ಯತೆ: ಬೆಂಬಲ ಬೆಲೆ ಯೋಜನೆಯಡಿ ರಾಗಿಗೆ ಕ್ವಿಂಟಲ್ ಗೆ 2100ರಂತೆ ಖರೀದಿಸಲಾಗುತ್ತಾದರೂ ನಿಯಮಾವಳಿಯನ್ವಯ ರಾಗಿ ನಿಗದಿತ ಗುಣಮಟ್ಟ ದಲ್ಲಿರಬೇಕು.ಹುಳಿಯಾರು ರಾಗಿ ಹೆಸರಾವಾಸಿಯಾಗಿದ್ದರೂ ಈ ಭಾಗದಲ್ಲಿ ಮಳೆಗೆ ಸಿಕ್ಕು ರಾಗಿಯ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಅಲ್ಲದೆ ಗುಣಮಟ್ಟ ಕೂಡ ಕಡಿಮೆಯಿದೆ.ಉತ್ತಮ ಗುಣಮಟ್ಟದ ರಾಗಿ ಸದ್ಯ ಮಾರುಕಟ್ಟೆಗೆ ಯಾರು ತಾರದಿದ್ದು ರಾಗಿ ಗುಣಮಟ್ಟದ ವೈಫಲ್ಯದಿಂದಾಗಿ ಕೇಂದ್ರಗಳಲ್ಲಿ ಕೊಳ್ಳದಿರುವ ಸಾದ್ಯತೆಯಿದ್ದು ಆತಂಕದ ವಿಚಾರವಾಗಿದೆ.
ನಿಗಮದ ಅಸಡ್ಡೆ ಧೋರಣೆಯಿಂದ ನಿಗದಿತ ದಿನಾಂಕ ಜ.೧ ಕ್ಕಿಂತ ತಡವಾಗಿ ಪ್ರಾರಂಭವಾದರೂ ಸೋಮವಾರವೂ ಸಹ ಖರೀದಿ ಪ್ರಾರಂಭಿಸಿಲ್ಲ.ಖರೀದಿ ಇನ್ನೂ ಎಂದೋ ಎನೋ ಎನ್ನುವ ಸ್ಥಿತಿಯಿದೆ.ರೈತರು ಮಾರಲು ಎಡೆತಾಕುತ್ತಿದ್ದರೂ ಖರೀದಿ ಸಮಯದಲ್ಲಿರಬೇಕಾದ ಆಧಿಕಾರಿಗಳು,ಗ್ರೇಡರ್ ಗಳು, ವ್ಯವಸ್ಥಾಪಕರು ಕೇಂದ್ರದ ಬಳಿ ಕಾಣದಿದ್ದು ಬಲ್ಲ ಮೂಲಗಳ ಪ್ರಕಾರ ಸಂಕ್ರಾಂತಿ ನಂತರ ಖರೀದಿ ಪ್ರಾರಂಭಿಸುವ ಸೂಚನೆಯಿದೆ.
ರೈತರಿಗೆ ಖರೀದಿ ಕೇದ್ರದ ಬಗ್ಗೆ ಮಾಹಿತಿಯಿಲ್ಲದಿರುವುದರ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು. |
ಈಗಾಗಲೆ ರೈತರು ರಾಗಿಯನ್ನು ಕಡಿಮೆ ದರಕ್ಕೆಅಂದರೆ ಕ್ವಿಂಟಾಲ್ಗೆ ೧೨೦೦ ರ ಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದು ಖರೀದಿ ಕೇಂದ್ರ ತಡವಾದಲ್ಲಿ ಮಧ್ಯವರ್ತಿಗಳು ಹಾಗೂ ವರ್ತಕರು ರೈತರಿಂದ ರಾಗಿಯನ್ನು ಕಡಿಮೆ ದರಕ್ಕೆ ಖರೀದಿ ಮಾಡಿ, ಹೆಚ್ಚಿನ ಹಣಕ್ಕೆ ಖರೀದಿ ಕೇಂದ್ರಕ್ಕೆ ತಂದು ಮಾರುವ ಅಪಾಯವಿದೆ.ಈ ರೀತಿಯಾದಲ್ಲಿ ರೈತರಿಗಿಂತ ವರ್ತಕರುಗಳಿಗೆ ಖರೀದಿ ಕೇಂದ್ರದ ಲಾಭ ಸಿಕ್ಕಂತಾಗುತ್ತದೆ.
ರೈತರ ಗಮನಕ್ಕೆ:ಕೇಂದ್ರಕ್ಕೆ ರಾಗಿ ತರುವಾಗ ಪ್ರಸಕ್ತ ಸಾಲಿನ ಪಹಣಿ, ಕೃಷಿ ಇಲಾಖೆಯ ರಾಗಿ ಇಳುವರಿ ದೃಢೀಕರಣ ಪತ್ರದೊಂದಿಗೆ ರಾಗಿಯ ಸ್ಯಾಂಪಲ್ ತಂದು ಟೋಕನ್ ಪಡೆಯಬೇಕು.ರಾಷ್ಟ್ರೀಕೃತ ಬ್ಯಾಂಕ್‌ನ ಖಾತೆ ನಂಬರ್ ಒಳಗೊಂಡಿರುವ ಜೆರಾಕ್ಸ್ ಪ್ರತಿ ಹಾಜರುಪಡಿಸಬೇಕು.ನಿಗದಿಪಡಿಸಿದ ದಿನಾಂಕದಂದು 50 ಕೆಜಿ ಚೀಲದಲ್ಲಿ ರಾಗಿ ತುಂಬಿ ತರಬೇಕು. ರಾಗಿಯಲ್ಲಿ ಸ್ವಚ್ಚವಾಗಿರಬೇಕು, ಸೀಕಲು ಕಾಳು, ಕಪ್ಪು ಕಾಳುಗಳು ಸೇರಿರಬಾರದು.ಗುಣಮಟ್ಟವಿಲ್ಲದ ಯೋಗ್ಯವಲ್ಲದ ರಾಗಿಯನ್ನು ತಂದಲ್ಲಿ ತಿರಸ್ಕರಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವ ಸರ್ಕಾರದ ಯೋಜನೆಯಿಂದ ನಿಜವಾಗಲೂ ರೈತರಿಗೆ ಅನುಕೂಲವಾಗುವುದೆ ಎಂದು ಕಾದು ನೋಡಬೇಕಿದೆ.
----------------------------------
ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಗೋದಾಮಿಗೆ ಜಾಗ ಮಾತ್ರ ನೀಡಬೇಕಿದ್ದು ನಾವೀಗಾಗಲೆ ಸಾಕಷ್ಟು ವಿಶಾಲವಾದ ಗೋದಾಮು ಮತ್ತಿತರ ಅನುಕೂಲ ಕಲ್ಪಿಸಿದ್ದು ಖರೀದಿ ಪ್ರಾರಂಭ ಮಾಡುವುದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದವರ ಕೆಲಸ : ನಾಗರಾಜು,ಎಪಿಎಂಸಿ ಕಾರ್ಯದರ್ಶಿ .
--------------------------------------------
ಅಕಾಲಿಕ ಮಳೆಯಿಂದಾಗಿ ರಾಗಿಯ ಇಳುವರಿಯಲ್ಲಿ ಹಾಗೂ ಗುಣಮಟ್ಟದಲ್ಲಿ ಕೂಡ ಹಾನಿಯಾಗಿದ್ದು ಸರ್ಕಾರ ನಿಗದಿಪಡಿಸಿರುವ ಗುಣಮಟ್ಟದ ರಾಗಿ ತರಲು ಸಾಧ್ಯವಿಲ್ಲ.ಈ ಬಗ್ಗೆ ನಿಗಮದವರು ರಾಗಿ ಖರೀದಿಗೆ ಇರುವ ನಿರ್ಬಂಧಗಳನ್ನು ಸಡಿಲಿಸಬೇಕು:
ಸತೀಶ್ ಕೆಂಕೆರೆ.ರಾಜ್ಯ ರೈತ ಸಂಘದ ಸಂಚಾಲಕ
------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ