ತಾಲ್ಲೂಕಿನಾದ್ಯಂತ ಅಂತರ್ಜಲದ ಮಟ್ಟ ದಿನೆದಿನೆ ಕುಸಿಯುತ್ತಿದ್ದು ಕೊಳವೆ ಬಾವಿಗಳ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ನೈಟ್ರೇಟ್ ಅರ್ಸೆನಿಕ್ ಮತ್ತಿತರ ಅನುಪಯುಕ್ತ ಖನಿಜಗಳು ಸೇರಿ ನೀರು ಅಶುದ್ಧವಾಗಿದ್ದು ಜನ ಫ್ಲೋರೈಡ್ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಪಂಚಾಯ್ತಿಯಲ್ಲಿ ಶುದ್ಧಗಂಗಾ ಯೋಜನೆ ಪ್ರಾರಂಭಿಸಿ, 20 ಲೀ. ಮಿನರಲ್ ನೀರಿಗೆ ಕೇವಲ ರು. 2 ಗೆ ಮಾರುವ ವ್ಯವಸ್ಥೆ ಕಲ್ಪಿಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ನುಡಿದರು.
ಅವರು ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಗ್ರಾಪಂ ಸಹಯೋಗದಲ್ಲಿ ಪಂಚಾಯ್ತಿ ಆವರಣದಲ್ಲಿ ಶುದ್ದಗಂಗಾ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಶುದ್ಧ ನೀರಿನ ಸೇವನೆಯಿಂದ ಮನುಷ್ಯ ಉತ್ತಮ ಆರೋಗ್ಯ ಪಡೆಯಬಲ್ಲ.ಈ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರು ನೀಡುವ ದೃಷ್ಠಿಯಲ್ಲಿ ಗ್ರಾಮೀಣ ಪ್ರದೇಶದ ನೀರಿನ ಸಮಸ್ಯೆಗಳಿಗೆ ಸಂಸ್ಥೆಯು ಶ್ರಮಿಸುತ್ತಿರುವುದು ಪ್ರಶಂಸನೀಯ. ಇಂದಿನ ಯಾಂತ್ರಿಕ ದಿನದಲ್ಲಿ ಬಾಂಧವ್ಯ ಕಳೆದುಕೊಳ್ಳುತ್ತಿರುವ ಭಾವನೆ ಎದುರಾಗುತ್ತಿದ್ದು ಧರ್ಮಸ್ಥಳ ಸಂಸ್ಥೆಯು ಸಹಕಾರ ಸಂಘಗಳ ಮೂಲಕ ಎಲ್ಲರಲ್ಲೂ ಹೊಂದಾಣಿಕೆ ಸಹಬಾಳ್ವೆಗೆ ಮುನ್ನುಡಿಹಾಡುತ್ತಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಗಣೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ಸಮುದಾಯದ ಅಭಿವೃದ್ಧಿಗಾಗಿ ಸಂಸ್ಥೆಯು ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ.ಕಳೆದ ಐದು ವರ್ಷಗಳಿಂದ ಸಂಸ್ಥೆಯು ಸಮುದಾಯ ಅಭಿವೃದ್ಧಿ ಯೋಜನೆಯಡಿ ೨೮೫ ನೀರಿನ ಘಟಕವನ್ನು ಸ್ಥಾಪಿಸಿದ್ದು ಪ್ರತಿ ಘಟಕದಲ್ಲೂ ೫೦೦ಕ್ಕೂ ಹೆಚ್ಚು ಕುಟುಂಬಗಳು ಶುದ್ದ ಕುಡಿಯುವ ನೀರನ್ನು ಬಳಕೆ ಮಾಡಿಕೊಳುತ್ತಿದ್ದಾರೆ.ಹೋಬಳಿಯಲ್ಲಿ ಹೊಯ್ಸಳಕಟ್ಟೆ ಹಾಗೂ ಹುಳಿಯಾರಿನಲ್ಲಿ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದ್ದು ಪ್ರತಿ ಲೀಟರ್ ನೀರಿಗೆ ಹತ್ತು ಪೈಸೆಯಂತೆ ಮಾರಾಟ ಮಾಡಲಾಗುತ್ತಿದ್ದು ಸದಸ್ಯತ್ವ ನೋಂದಣಿಮಾಡಿಸಿಕೊಳ್ಳುವ ಮೂಲಕ ನೀರನ್ನು ಪಡೆಯಬಹುದು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಮುತುವಲ್ಲಿ ಜಬೀಉಲ್ಲಾಸಾಬ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಪೂರೈಕೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನೀರಿನ ಘಟಕ ಸ್ಥಾಪಿಸಿರುವುದು ಅನುಕೂಲಕರ.ಪಟ್ಟಣದಲ್ಲಿ ಶಾಸಕರು ಎಂಟು ಬೋರ್ ಗಳನ್ನು ಹೊಸದಾಗಿ ಕೊರೆಸಿದ್ದು ಸಮೃದ್ಧಿಯಾಗಿ ನೀರಿದ್ದು ಇದನ್ನು ಬಳಸಿಕೊಂಡು ಇನ್ನು ಐದು ಕುಡಿಯುವ ನೀರಿನ ಘಟಕಕ್ಕೆ ಸ್ಥಾಪಿಸಿದಲ್ಲಿ ನೀರಿನ ಕೊರತೆ ನೀಗುತ್ತದೆ ಎಂದರು.
ಸಮಾರಂಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷೆ ಗೀತಾಪ್ರದೀಪ್.ಜಿಲ್ಲಾಪಂಚಾಯ್ತಿ ಸದಸ್ಯೆ ಮಂಜುಳ,ಗ್ರಾಪಂಉಪಾಧ್ಯಕ್ಷ ಗಣೇಶ್,ಚಿಕ್ಕನಾಯಕನಹಳ್ಳಿ ತಾಲೂಕು ಯೋಜನಾಧಿಕಾರಿ ರೋಹಿತಾಕ್ಷ ವಲಯದ ಮೇಲ್ವಿಚಾರಕ ಕಮಲಾಕರ್,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಣ್ಣ,ಕಾರ್ಯದರ್ಶಿ ಉಮಾಮಹೇಶ್ ಹಾಗೂ ಗ್ರಾ,ಪಂ ಸದಸ್ಯರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ