ಹುಳಿಯಾರು: ಪ್ರಸ್ತುತದಲ್ಲಿ ಕೃಷಿಕರ ಜೀವನ ಸಂಕಷ್ಟದಲ್ಲಿದ್ದು ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಯಲ್ಲಿ ಹೆಚ್ಚು ಆದಾಯ ತರುವ ಬೆಳೆಗಳತ್ತ ಗಮನಹರಿಸಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಕಿವಿ ಮಾತು ಹೇಳಿದರು.
ಪಟ್ಟಣದಲ್ಲಿ ಸೋಮವಾರದಂದು ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಆದಾಯ ಹೆಚ್ಚಿಸುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಬೇಕಿದೆ ಎಂದರು.ಇಂದು ರೈತರು ಬೆಳೆಯುವ ರಾಗಿ ಜೋಳ ಮತ್ತೊಂದಕ್ಕೆ ಆದಾಯಕಿಂತ ಖರ್ಚೆ ಹೆಚ್ಚಾಗುತ್ತಿದ್ದು ಬೆಳೆಯುವ ಬದಲು ಕೊಂಡು ತಿನ್ನುವ ಪರಿಸ್ಥಿತಿ ಎದುರಾಗಿದೆ ಎಂದರು.
ಹುಳಿಯಾರಿನ ರೈತ ಸಂಪರ್ಕ ಕೇಂದ್ರದ ಉದ್ಘಾಟನೆಯನ್ನು ಶಾಸಕ ಸುರೇಶ್ ಬಾಬು ನೆರವೇರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ,ಜಿಪಂ ಸದಸ್ಯೆ ಮಂಜುಳಾ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯೆ ಬೀಬಿಫಾತಿಮಾ ಇತರರಿದ್ದರು. |
ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಂದು ೩೮ ಲಕ್ಷ ರೂ ವೆಚ್ಚದ ಸುಸ್ಸಜಿತ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದು ಇಲಾಖೆಯ ಎಲ್ಲಾ ಸವಲತ್ತುಗಳು ರೈತರಿಗೆ ದೊರೆಯಲಿದೆಯೆಂದರು.ಸರ್ಕಾರ ರೈತರಿಗೆ ಅನೇಕ ಯೋಜನೆಗಳು ಹಾಗೂ ಸವಲತ್ತುಗಳನ್ನು ಕಲ್ಪಿಸುವ ಮೂಲಕ ರೈತರ ಹಿತಕಾಯುತ್ತಿದ್ದು ಬೆಳೆಹಾನಿ ಸಂದರ್ಭದಲ್ಲಿ ಬೆಳೆ ವಿಮಾಯೋಜನೆ ಮೂಲಕ ಹಾಗೂ ಬೆಲೆ ಕನಿಷ್ಟ ಮಟ್ಟಕ್ಕೆ ಇಳಿದಾಗ ಬೆಂಬಲ ಯೋಜನೆಯಲ್ಲಿ ಖರೀದಿಸುವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ಹೇಳತೀರದಾಗಿದ್ದು ವಿದ್ಯುತ್ ಅಭಾವದಿಂದ ಬೆಳೆಗೆ ನೀರು ಕಟ್ಟುವುದಿಕ್ಕಾಗದೆ ಬೆಳೆ ಕೈಗೆ ಬಾರದಂತಾಗಿದೆ.ತಾಲ್ಲೂಕಿನ ಬರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರವಾಗಿ ಹೇಮಾವತಿ ನದಿ ನೀರು ಹರಿಸುವ ಅಗತ್ಯವಿದ್ದು ಶಾಸಕರು ಈ ಬಗ್ಗೆ ಗಮನಹರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ರಾಗಿ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆದ ರೈತ ಶಂಕರಪ್ಪ ಹಾಗೂ ನಾಗರಾಜು ಅವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಮೃತರಾದ ರೈತರ ಕುಟುಂಬ ವರ್ಗದವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯೆ ಬೀಬಿಫಾತಿಮಾ,ಎಪಿಎಂಸಿ ಅಧ್ಯಕ್ಷ ಯಳನಡು ಸಿದ್ದರಾಮಯ್ಯ,ತಿಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜು, ಮೋಹನ್ ಕುಮಾರ್, ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್, ನಿರ್ದೇಶಕರಾದ ಬಿ.ಎಲ್.ರೇಣುಕಪ್ರಸಾದ್, ವೆಂಕಟೇಶ್, ಕರ್ನಾಟಕ ರಾಜ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಆವಾರಿ, ಕಿರಣ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಯ್ಯ, ಮುಖಂಡ ನಂದಿಹಳ್ಳಿ ಶಿವಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಜಬಿವುಲ್ಲಾ, ಗೀತಾಬಾಬು ಇತರರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಎಚ್.ಹೊನ್ನದಾಸೇಗೌಡ ಸ್ವಾಗತಿಸಿ, ಕೃಷಿ ಅಧಿಕಾರಿ ಸೋಮಶೇಖರ್ ವಂದಿಸಿದರು.
------------------------------------------------------
ರೈತರ ಗೈರು:ರೈತರು ಮತ್ತು ಕೃಷಿಇಲಾಖೆ ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆಯಾಗಿರುವ ರೈತಸಂಪರ್ಕ ಕೇಂದ್ರದ ಉದ್ಘಾಟನೆಗೆ ರೈತರೇ ಇರದಿದ್ದು ವ್ಯಾಪಕ ಟೀಕೆಗೆ ಕಾರಣವಾಯಿತು.ಚುನಾವಣಾ ನೀತಿ ಸಂಹಿತೆ ಕಾರಣವೊಡ್ಡಿ ಆಹ್ವಾನ ಪತ್ರಿಕೆಯೂ ಮುದ್ರಿಸದೆ ತರಾತುರಿಯಲ್ಲಿ ಉದ್ಘಾಟಿಸಿದ ಇದರ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಟಿಕೇಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದಲೇ ಕೂಡಿದ್ದು ವಿಪರ್ಯಾಸವಾಗಿತ್ತು.
------------------------------------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ