ಇಂದು ಸಾಹಿತ್ಯಪರಿಷತ್ ಅದರ ಮೂಲಉದ್ದೇಶದಿಂದ ವಿಮುಖವಾಗಿದ್ದು ,ಪ್ರಸ್ತುತ ಸಾಹಿತ್ಯ ಪರಿಷತ್ತು ನಡೆಯುತ್ತಿರುವ ಹಾದಿ ಪಂಡಿತರ ಹಾದಿಯಾಗಿದ್ದು ಜನಸಾಮಾನ್ಯರನ್ನು ಯುವ ಸಮುದಾಯದವರನ್ನು ದೂರವಿಡುವ ಕೆಲಸ ನಡೆದಿದೆ.ಕೇವಲ ಅಕ್ಷರ ಬಲ್ಲಂತ ಅಕ್ಷರ ಜೋಡಿಸುವಂತ ವ್ಯಕ್ತಿಗಳಿಗಷ್ಟೆ ಪರಿಷತ್ತು ಸೀಮಿತವಾಗಿದ್ದು ಅದನ್ನು ಹೋಗಲಾಡಿಸುವ ಚಳುವಳಿಯ ಭಾಗ ನಾನಾಗಿದ್ದು ಈ ನಿಟ್ಟಿನಲ್ಲಿ ನನ್ನದೆ ಆದ ಯೋಜನೆಗಳು ಹಾಗೂ ಆಲೋಚನೆಗಳಿದ್ದು ಸಾಂಸ್ಕೃತಿಕವಾಗಿ ಪರಿಷತ್ತನ್ನು ಕಟ್ಟಲು ಉತ್ಸುಕನಾಗಿದ್ದೇನೆ ಎಂದು ಚಿ.ನಾ.ಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್ ತಿಳಿಸಿದರು.
ಹುಳಿಯಾರಿನ ಮೈಸ್ ಕಂಪ್ಯೂಟರ್ ಸೆಂಟರ್‌ನಲ್ಲಿ ಜಿಲ್ಲಾ ಕಸಾಪಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು. ಪರಿಷತ್ ಕೇವಲ ಅಕ್ಷರದಲ್ಲಾಡುವವರ ಸಂಸ್ಥೆಯಾಗದೆ ಆಟೋಚಾಲಕರಿಂದ ಹಿಡಿದು ಶ್ರೀ ಸಾಮಾನ್ಯರ ತನಕ ಇದು ಎಲ್ಲರನ್ನೂ ತಲುಪುವ ಸಂಸ್ಥೆಯಾಗಬೇಕು.ಪರಿಷತ್ತು ಕೇವಲ ಹೆಸರಿಗಷ್ಟೆ ಸಂಸ್ಥೆಯಾಗದೆ ಇದು ನಿಜವಾಗಲೂ ಸಕಲ ಕನ್ನಡಿಗರ ಪ್ರಾತಿನಿಧ್ಯದ ಸಂಸ್ಥೆಯಾಗಬೇಕು.ಇದಕ್ಕಾಗಿ ತಳಮಟ್ಟದಲ್ಲಿ ಕೆಲಸವಾಗಬೇಕಿದೆ.ಯುವಸಮುದಾಯವನ್ನು ನಮ್ಮ ನಂತರದ ಪೀಳಿಗೆಯವರನ್ನು ಸಾಹಿತ್ಯಕ್ಕೆ ಕರೆತರುವ ಕೆಲಸಮಾಡಬೇಕಿದೆ ಎಂದರು.
ಕಸಾಪಕ್ಕೆ ವರ್ತಮಾನದ ಪೀಳಿಗೆಯನ್ನು ಜೋಡಿಸುವ ಬೆಳಸುವ ನಿಟ್ಟಿನಲ್ಲಿ ತಾಲ್ಲೂಕ್ ಹಾಗೂ ಹೋಬಳಿ ಘಟಕಗಳ ಮೂಲಕ ಗ್ರಾಮೀಣ ಭಾಗಕ್ಕೆ ಸಾಹಿತ್ಯ ಪರಿಷತ್ತನ್ನು ಕೊಂಡೊಯ್ದು ವಿದ್ಯಾರ್ಥಿ ಸಮುದಾಯಗಳನ್ನು ಜಾಗೃತಗೊಳಿಸಿ ಸಾಹಿತ್ಯದ ಒಲವನ್ನು ಬಿತ್ತುವ ಕಾರ್ಯಾಗಾರ,ಕಮ್ಮಟ,ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಶ್ರಮಿಕರ,ರೈತರ,ದಲಿತರ ನಡುವೆ ಸಾಹಿತ್ಯದ ಕೊಂಡಿಯಾಗುವೆ ಅಂದು ಭರವಸೆ ನೀಡಿದರು.
ತುಮಕೂರುಜಿಲ್ಲಾ ಕಸಾಪ ಕಟ್ಟಡ ಸೇರಿದಂತೆ ಚಿಕ್ಕನಾಯಕನಹಳ್ಳಿ,ಗುಬ್ಬಿ,ಪಾವಗಡ,ಕೊರಟಗೆರೆಯಲ್ಲಿ ಪರಿಷತ್ ಕಟ್ಟಡಗಳಾಗಬೇಕಿದ್ದು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕಟ್ಟಲು ನಾನು ಬದ್ದನಾಗಿರುವೆ ಎಂದರು.
ಯುವಕರ ಪ್ರತಿನಿಧಿಯಾಗಿ ಸಾಹಿತ್ಯ ಪರಿಷತ್‌ಗೆ ಬಂದಿದ್ದೇನೆ. ವಿದ್ಯಾರ್ಥಿಗಳ ಮಧ್ಯೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಸೃಷ್ಟಿಮಾಡಬೇಕಾಗಿದೆ. ಮುಚ್ಚಿ ರುವ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೂಂಡು ಮಾದರಿ ಶಾಲೆಗಳನ್ನಾಗಿ ಮಾಡಬೇಕಿದೆ. ಇದುವರೆವಿಗೂ ಸಾಹಿತ್ಯ ಪರಿಷತ್‌ನಲ್ಲಿ ನಿಜವಾದ ಕಾಳಜಿಯುಳ್ಳ ಕೆಲಸಗಳಾಗಿಲ್ಲ. ನಾನು ಅಧ್ಯಕ್ಷನಾದರೆ ಕಟ್ಟಡ ನಿರ್ಮಾಣ,ಶಾಶ್ವತ ದತ್ತಿ ಕಾರ್ಯಕ್ರಮ,ದತ್ತಿ ಸಂಗ್ರಹಣೆಗಳನ್ನು ಕೈಗೊಂಡು ಸಾಂಸ್ಕೃತಿಕವಾಗಿ ಕನ್ನಡ ಕಟ್ಟುವ ಜವಾಬ್ದಾರಿ ಹೊತ್ತುಕೊಂಡು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ನಿರೂಪ್ ರಾವತ್ ಮಾತನಾಡಿ ರವಿಕುಮಾರ್ ಕ್ರಿಯಾಶೀಲ ವ್ಯಕ್ತಿಯಾಗಿದ್ದು ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬೆಳೆದುಬಂದವರು.ಕಸಾಪವನ್ನು ತಾಲ್ಲೂಕಿನಲ್ಲಿ ಸಮರ್ಥವಾಗಿ ಕಟ್ಟಿದ್ದು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಪರಿಷತನ್ನು ರಚನಾತ್ಮಕವಾಗಿ ಕಟ್ಟಿ ಐದು ಹೋಬಳಿ ಘಟಕಗಳು ಅತ್ಯಂತ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡಿದ್ದಾರೆ.ಅವರ ಅವಧಿಯಲ್ಲಿ ಮೂರು ತಾಲ್ಲೂಕ್ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿಯವರಿಂದ ರಾಜ್ಯದಲ್ಲೆ ಪ್ರಥಮ ಕ್ರಿಯಾಶೀಲ ಘಟಕ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇವರನ್ನು ಆರಿಸಿಸಲ್ಲಿ ಪರಿಷತ್ತು ಮತ್ತಷ್ಟು ಬೆಳಯುವದರಲ್ಲಿ ಅನುಮಾನವಿಲ್ಲ ಎಂದರು.
ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಿದ್ದು.ಜಿ.ಕೆರೆ ಮಾತನಾಡಿ ತಾಲ್ಲೂಕ್ ಕೇಂದ್ರದ ಅಧ್ಯಕ್ಷರಾಗಿದ್ದುಕೊಂಡು ಜಿಲ್ಲಾ ಮಟ್ಟದ ಸಮ್ಮೇಳನವನ್ನು ಹೋಬಳಿ ಕೇಂದ್ರಗಳಲ್ಲಿ ಆಯೋಜಿಸುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದರು.
ಕಸಾಪ ತಾಲ್ಲೂಕ್ ಸಂಚಾಲಕ ಹುಳಿಯಾರು ಷಬ್ಬೀರ್ ಮಾತನಾಡಿ ರವಿಕುಮಾರ್ ತಾಲ್ಲೂಕ್ ಅಧ್ಯಕ್ಷರಾಗಿ ಸ್ಥಳಿಯ ಪ್ರತಿಭೆಗಳನ್ನು ಗುರ್ತಿಸಿದ್ದಾರೆ. ಕಲಾವಿದರನ್ನು ,ಕ್ರಿಯಾಶೀಲ ವ್ಯಕ್ತಿಗಳನ್ನು ಸಂಘಟಿಸಿ ಬೆಳಸಿದ್ದಾರೆ..ಜಿಲ್ಲಾ ಸಾಹಿತ್ಯದಲ್ಲಿ ಗಝಲ್ ಗೆ ಸ್ಥಾನ ಕೊಡಿಸಿಕೊಟ್ಟಿದ್ದಾರೆ ಎಂದರು.
ರಾಜಕುಮಾರ್ ಸಂಘದ ಸಿ.ಹೆಚ್.ರೂಪೇಶ್ ಮಾತನಾಡಿ ರವಿಕುಮಾರ್ ಹೋರಾಟದ ಮೂಲಕ ಬೆಳೆದು ಬಂದಿದ್ದಾರೆ,ಜಿಲ್ಲೆಯಲ್ಲಿ ಚಿನಾಹಳ್ಳಿ ತಾಲ್ಲೂಕಿನ ಕಸಾಪ ಗುರ್ತಿಸುವಂತೆ ಮಾಡಿದ್ದಾರೆ.
ಹುಳಿಯಾರು ಘಟಕದ ಪ್ರದಾನ ಕಾರ್ಯದರ್ಶಿ ಶ್ರೇಯಸ್ ಗೋಷ್ಠಿಯಲ್ಲಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ