ಹುಳಿಯಾರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಮಾಲಾಧಾರಿ ಸ್ವಾಮಿಗಳು ಇರುಮುಡಿ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. |
ಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಂಜಾನೆಯಿಂದ ಇನ್ನೂರಕ್ಕೂ ಹೆಚ್ಚು ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಲಾಯಿತು. ನಂತರ ಅಯ್ಯಪ್ಪಸ್ವಾಮಿಯ ಇರುಮುಡಿ ಹೊತ್ತ ಮಾಲಾಧಾರಿಸ್ವಾಮಿಗಳ ಉತ್ಸವ ವಿಜೃಂಭಣೆಯಿಂದ ನಡೆದು ಅವರುಗಳನ್ನು ಕುಟುಂಬವರ್ಗವರು ಹಾಗೂ ಭಕ್ತ ವೃಂದದವರು ಶಬರಿಮಲೆಗೆ ಬೀಳ್ಕೊಟ್ಟರು.
ಗುರುಸ್ವಾಮಿಗಳಾದ ಗೋಪಾಲರಾವ್ ಸ್ವಾಮಿ,ದಾನಿಸ್ವಾಮಿ, ರಮೇಶ್ ಸ್ವಾಮಿ,ಹೂವಿನ ತಿಮ್ಮಣ್ಣ ಸ್ವಾಮಿ,ಕುಮಾರ ಸ್ವಾಮಿ ಅವರುಗಳು ಅಯ್ಯಪ್ಪನ ಸನ್ನಿಧಾನದಲ್ಲಿ ೨೧೬ ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಿದರು. ಈ ವೇಳೆ ಮಾಲಾಧಾರಿ ಸ್ವಾಮಿಗಳ ಮನೆಯವರು ಸಂಬಂಧಿಕರು ಹಾಗೂ ಕುಟುಂಬವರ್ಗದವರು ಪಾಲ್ಗೊಂಡಿದ್ದು ಇರುಮುಡಿ ಚೀಲಕ್ಕೆ ತುಪ್ಪ ತುಂಬಿದ ಕಾಯಿ, ಅಕ್ಕಿ ಹಾಕಿದರು. ಸಂಜೆ ವೇಳೆಗೆ ಎಲ್ಲಾ ಮಾಲಾಧಾರಿಸ್ವಾಮಿಗಳು ಅಯ್ಯಪ್ಪನ ಸನ್ನಿದಿಯಿಂದ ಉತ್ಸವ ಪ್ರಾರಂಭಿಸಿ ಪಟ್ಟಣದ ಕೆಂಚಮ್ಮನ ದೇವಸ್ಥಾನ,ಹುಳಿಯಾರಮ್ಮ ದೇವಾಲಯದ ಮೂಲಕ ದುರ್ಗಾಪರಮೇಶ್ವರಿ ದೇವಾಲಯದಲ್ಲಿಗೆ ತೆರಳಿ ಈಡುಗಾಯಿ ಹೊಡೆದು ಪೂಜೆಸಲ್ಲಿಸಿ ಬಿಎಚ್ ರಸ್ತೆ ಮೂಲಕ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಆಂಜನೇಯಸ್ವಾಮಿಗೆ ಪೂಜೆಸಲ್ಲಿಸಿದರು. ನಂತರ ತಾವು ಯಾತ್ರೆಗೆ ಹೊರಡಲು ಸಿದ್ದ ಮಾಡಿದ್ದ ವಾಹನಗಳಿಗೆ ಗುರುಸ್ವಾಮಿಗಳಿಂದ ಪೂಜೆ ಮಾಡಿಸಿ ಅಯ್ಯಪ್ಪನ ಶರಣು ಘೋಷ ಕೂಗುತ್ತಾ ಶಬರಿಮಲೆಯತ್ತ ತಮ್ಮ ಪಯಣ ಬೆಳೆಸಿದರು.
ಅಯ್ಯಪ್ಪ ಮಾಲಾಧಾರಿಗಳನ್ನು ನೋಡಲು ಪಟ್ಟಣ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಆಗಮಿಸಿದ್ದು, ಮಾಲಾಧಾರಿ ಸ್ವಾಮಿಗಳಿಗೆ ನಮಸ್ಕರಿಸಿ ಕಾಣಿಕೆ ನೀಡಿ ಅಶೀರ್ವಾದ ಪಡೆದರು.
ಯಾತ್ರೆಗೆ ಹೊರಟ ಮಾಲಾಧಾರಿ ಸ್ವಾಮಿಗಳಿಗೆ ಹಾಗೂ ಆಗಮಿಸಿದ್ದ ಅಪಾರ ಭಕ್ತಾಧಿಗಳಿಗೆ ಆಂಜನೇಯಸ್ವಾಮಿ ದೇವಾಲಯದ ಹತ್ತಿರ ಜೈ ಮಾರುತಿ ಯುವಕ ಛಾರಿಟಬಲ್ ಟ್ರಸ್ಟ್ ನವರು ಬಾದಾಮಿಹಾಲು,ಹಾಗೂ ಬಿಸ್ಕತ್ ವಿತರಿಸಿ ಯಾತ್ರೆಗೆ ಶುಭಹಾರೈಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ