ಹುಳಿಯಾರು :ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಸುಗ್ಗಿಹಬ್ಬವಾದ ಸಂಕ್ರಾಂತಿಯನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ.
ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸುವುದಿದ್ದು ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆಯಾಗಿದೆ.
ಹುಳಿಯಾರು ಹೋಬಳಿ ಸೀಗೆಬಾಗಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರುಗಳ ಸಮ್ಮುಖದಲ್ಲಿ ಮೊಲ ಹಿಡಿದುನಿಂತಿರುವ ಗ್ರಾಮಸ್ಥರು. |
ಈ ಗ್ರಾಮದ ವರದರಾಜಸ್ವಾಮಿ ಉದ್ಭವ ಮೂರ್ತಿಯಾಗಿದ್ದು ಇದೇ ದೇವಾಲಯದಲ್ಲಿ ಊರಿನಲ್ಲಿದ್ದ ಆಂಜನೇಯಸ್ವಾಮಿಯನ್ನು ಸಹ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ್ದರಿಂದ ವರದಾಂಜನೇಯಸ್ವಾಮಿ ಎಂದು ಪ್ರಸಿದ್ದಿಯಾಗಿದೆ.
ಮೊಲ ಬಿಡುವುದು : ಮೊಲ ಹಿಡಿದು ಮತ್ತೆ ಕಾಡಿಗೆ ಬಿಡುವ ವಿಶಿಷ್ಠ ಪದ್ಧತಿ ಇಲ್ಲಿ ಆಚರಣೆಯಲ್ಲಿದೆ. ಜಾನಪದ ಹಿನ್ನಲೆಯ ಕಥೆಯಂತೆ ಸಂಕ್ರಾಂತಿಯಂದು ಲಕ್ಷ್ಮಿತವರಿಗೆ ಹೊರಟಿದ್ದರಿಂದ ಕೋಪಗೊಂಡ ವಿಷ್ಣುವು ಬೇಟೆ ಆಡುವ ನೆಪದಲ್ಲಿ ಕಾಡಿಗೆ ತೆರಳುತ್ತಾನೆ. ಗಂಡನನ್ನು ತಡೆಯಲು ಲಕ್ಷ್ಮಿಯು ಕಾಡಿನಲ್ಲಿ ಮೊಲವನ್ನು ಆತನ ದಾರಿಗೆ ಅಡ್ಡವಾಗಿ ಬರುವಂತೆ ಮಾಡಿದ್ದರಿಂದ ಮೊಲ ಅಡ್ಡ ಬಂದಿದ್ದು ಅಪಶಕುನ ಎಂದು ಭಾವಿಸಿದ ವಿಷ್ಣುವು ವಾಪಸ್ಸ್ ನಾಡಿಗೆ ತೆರಳುತ್ತಾನೆ.ಈ ಹಿನ್ನಲೆಯೂ ಮೊಲ ಬಿಡುವ ಸಂಪ್ರದಾಯಕ್ಕೆ ಕಾರಣವಾಗಿದೆ.
ಮಕರ ಸಂಕ್ರಮಣದ ಹಿಂದಿನ ದಿನ ಕಾಡಿಗೆ ತೆರಳಿ ಮೊಲ ಹಿಡಿದು ತಂದು ಸಂಕ್ರಮಣದ ಮಾರನೆ ದಿನ ಕಾಡಿಗೆ ವಾಪಸ್ಸ್ ಬಿಡುವುದು ಅನುಚಾನವಾಗಿ ಆಚರಣೆಯಲ್ಲಿದೆ. ಬಹುದಿನಗಳಿಂದಲೂ ಈ ಮೊಲ ಬಿಡುವುದನ್ನು ವರದರಾಜಸ್ವಾಮಿ, ದುರ್ಗಮ್ಮದೇವಿ ಹಾಗೂ ಮುಳ್ಳಲಗೆ ಬೂತರಾಯಸ್ವಾಮಿಯ ಸಮ್ಮುಖದಲ್ಲಿ ಚನ್ನಜ್ಜನ ವಂಶಸ್ಥರು,ಒಕ್ಕಲಿನವರು ನಡೆಸಿಕೊಂಡು ಬರುತ್ತಿದ್ದಾರೆ.ವಿಷ್ಣುವಿನ ಅಪರಾವತಾರ ಎನ್ನುವ ಮೊಲಕ್ಕೆ ವರದರಾಜ ಸ್ವಾಮಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಕಿವಿಗೆ ಮುರು ಚುಚ್ಚಿ ವಾದ್ಯ ಮೇಳದೊಂದಿಗೆ ದೇವರುಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮೊಲ ಬಿಡಲಾಗುತ್ತದೆ.ಈ ಮೊಲ ಯಾವ ದಿಕ್ಕಿನ ಕಡೆ ಜಿಗಿದು ಹೋಗುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ,ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ.
ಹುಳಿಯಾರು ಹೋಬಳಿ ಸೀಗೆಬಾಗಿಯ ವರದರಾಜಸ್ವಾಮಿ ದೇವಾಲಯದಲ್ಲಿ ನಡೆದ ನೂರೊಂದೆಡೆ ಸೇವೆ. |
ಈ ಹಿನ್ನಲೆಯಲ್ಲಿ ಸಂಕ್ರಾತಿಯು ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಯಿತು.ಹಬ್ಬದ ದಿನದಂದು ಗ್ರಾಮದವರು ತಮ್ಮ ಮನೆಯಲ್ಲಿ ಸಿದ್ದ ಮಾಡಿದ ಎಡೆಯನ್ನು ತಂದು ವರದರಾಜ ಸ್ವಾಮಿಗೆ ಅರ್ಪಿಸುವ ಮೂಲಕ ಎಡೆಗೆಸೇವೆ ಹಾಗೂ ಪೂಜಾ ಕೈಂಕರ್ಯ ನಡೆಸಿದರು. ಹಬ್ಬದ ಮಾರನೇ ದಿನ ಶನಿವಾರ ಮುಂಜಾನೆ ವರದರಾಜ ಸ್ವಾಮಿ ದೇವಾಲಯದಲ್ಲಿ ಸಂಪ್ರದಾಯ ಉಡುಗೆ ತೊಟ್ಟು ದಾಸಪ್ಪಗಳು ನೂರೊಂದೆಡೆ ಸೇವೆ ಸಲ್ಲಿಸಿ ನಂತರ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ಸಾಂಕೇತಿಕವಾಗಿ ಪಡಿ ಬೇಡಿದರು.ಸಂಜೆ ಗ್ರಾಮಸ್ಥರು ದುರ್ಗಮ್ಮ ದೇವಿಗೆ ಮಡಲಕ್ಕಿ ಹಾಕಿ ಪೂಜೆ ಸಲ್ಲಿಸಿದ ಬಳಿಕ ಸ್ವಾಮಿ ಹಾಗೂ ಅಮ್ಮನವರನ್ನು ಹೊರಡಿಸಿ ಮತ್ತೆ ಮೊಲವನ್ನು ಕಾಡಿಗೆ ಬಿಡುವ ಮೂಲಕ ಸಂಕ್ರಾಂತಿಗೆ ತೆರೆ ಎಳೆಯಲಾಯಿತು.
----------------
ವಿಷ್ಣುವಿನ ಹೆಸರಿನಲ್ಲಿ ಸಾಂಕೇತಿಕವಾಗಿ ಮೊಲ ಹಿಡಿದು ಬಿಡುವುದು ಇಲ್ಲಿ ರೂಢಿಗತವಾಗಿದ್ದು ಗುಡ್ಡಬೆಟ್ಟಗಳೆಲ್ಲ ಬಯಲಾಗಿ ಮೊಲ ಸಿಗುವುದೇ ಕಷ್ಟಕರವಾಗಿದ್ದರೂ ಸಹ ಸಂಪ್ರದಾಯವನ್ನು ಬಿಡದೆ ಪಾಲಿಸಿಕೊಂಡು ಬರಲಾಗುತ್ತಿದೆ: ಭಕ್ತೇಶ್,ಅರ್ಚಕರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ