ಹುಳಿಯಾರು ಹೋಬಳಿ ಯಳನಾದು ಪಂಚಾಯ್ತಿಯ ಕೆರೆಸೂರಗೊಂಡನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ರಾಗಿಬೆಳೆಯ ಪ್ರಾತ್ಯಕ್ಷಿಕೆ ಹಾಗೂ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಮಾತನಾಡಿದರು. |
ಹುಳಿಯಾರು: ಸರ್ಕಾರ ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇಲಾಖೆಯವರು ತಮ್ಮಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರವೇ ಸರ್ಕರದ ಉದ್ದೇಶ ಸಾರ್ಥಕವಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಸಲಹೆ ನೀಡಿದರು.
ಸಮೀಪದ ಕೆರೆಸೂರಗೊಂಡನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ೨೦೧೬-೧೭ ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಗಿ ಏಕ ಬೆಳೆಯ ಪ್ರಾತ್ಯಕ್ಷಿಕೆ ಹಾಗೂ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಉಚಿತ ಬೀಜ ಹಾಗೂ ಗೊಬ್ಬರವನ್ನು ಸದುಪಯೋಗ ಪಡಿಸಿಕೊಂಡು ಅಧಿಕ ಬೆಳೆ ಬೆಳೆಯಬೇಕೆಂದರು.
ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಇಲಾಖೆಯವರು ಬೀಜ ಹಾಗೂ ಗೊಬ್ಬರಕ್ಕಾಗಿ ರೈತರನ್ನು ಅಲೆಯುವಂತೆ ಮಾಡಬಾರದು.ದಾಳಿಂಬೆ,ತೆಂಗು ಮತ್ತಿತರ ಬೆಳಗಳ ಬಗ್ಗೆ ತೋಟಗಾರಿಕೆ ಇಲಾಖೆಯವರು ಹಾಗೂ ,ಜಾನುವಾರುಗಳಿಗೆ ಹಾಕಬೇಕಾದ ಲಸಿಕೆಗಳ ಬಗ್ಗೆ ಪಶುಪಾಲನ ಇಲಾಖೆಯವರು ಆಯಾ ಪಂಚಾಯ್ತಿ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ತೆರಳಿ ಇಲಾಖೆಯ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕೆಂದರು.ಕೇವಲ ಸವಲತ್ತು ಕೊಟ್ಟು ಜವಬ್ದಾರಿ ಮುಗಿಯಿತೆಂದು ಕಛೇರಿಯಲ್ಲಿ ಕೂರದೆ ಆಗಾಗ್ಗೆ ಹಳ್ಳಿಗಳಿಗೆ ತೆರಳಿ ಸೂಕ್ತ ಮಾರ್ಗದರ್ಶನ ಮಾಡಬೇಕೆಂದರು.
ಕೃಷಿ ಅಧಿಕಾರಿ ಕೆ.ಬಿ.ಉಮಾಶಂಕರ್ ಮಾತನಾಡಿ ಎಂಎಲ್ ೩೬೫ ವಿಶಿಷ್ಟ ತಳಿಯಾಗಿದ್ದು ಬರ ನಿರೋಧಕ ತಳಿಯಾಗಿರುವ ಈ ರಾಗಿ ಬೆಳೆಯನ್ನು ವರ್ಷದ ೩೬೫ ದಿನದಲ್ಲಿ ಯಾವಾಗಾ ಬೇಕಾದರೂ ಬಿತ್ತನೆ ಮಾಡಬಹುದೆಂದರು.ಪ್ರಾತ್ಯಕ್ಷಿಕೆಗೆ ಯಳನಾಡಿನ ಕೆರೆಸೂರಗೊಂದನಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಇಲಾಖೆ ಮಾರ್ಗದರ್ಶನದಲ್ಲಿ ಬೆಳೆ ಬೆಳಯಬೇಕೆಂದರು ಈ ರಾಗಿ ಬೆಳೆಯುವ ತಾಂತ್ರಿಕತೆ ಬಗ್ಗೆ ಇಲಾಖೆಯವರೇ ಮನೆ ಬಾಗಿಲಿಗೆ ಬಂದು ಬೆಳೆಯುವ ಬಗ್ಗೆ ಮೇಲುಸ್ತುವಾರಿ ಮಾಡಲಿದ್ದು ರೈತರು ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರವೇ ಸಮರ್ಪಕ ಬೆಳೆ ಬೆಳಯಬಹುದೆಂದರು.
ಯಳನಾಡು ಗ್ರಾಪಂ ಅಧ್ಯಕ್ಷ ಬಸವರಾಜು ,ತಾ.ಪಂ.ಸದಸ್ಯ ಯತೀಶ್ ಮಾತನಾಡಿ ರೈತರಿಗಾಗಿರುವ ಅನೇಕ ಯೋಜನೆಗಳ ಬಗ್ಗೆ ಅಧಿಕಾರಿಗಳು ಹಳ್ಳಿಗಳಲ್ಲಿ ಕೃಷಿ ಅರಿವು ಕಾರ್ಯಕ್ರಮ ಏರ್ಪಡಿಸಿ ಸರ್ಕಾರದ ಯೋಜನೆಗಳನ್ನು ತಿಳಿಹೇಳಬೇಕಿದೆ ಎಂದರು.
ಸಹಾಯಕ ಕೃಷಿ ಅಧಿಕಾರಿ ಹೆಚ್.ಬಿ.ಕರಿಬಸವಯ್ಯ ಯೋಜನೆ ಬಗ್ಗೆ ರೈತರಿಗೆ ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೈತ ಫಲಾನುಭವಿಗಳಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜ, ಜಿಪ್ಸಮ್,ಜಿಂಕ್, ಬೊರಾಕ್ಸ್, ಟ್ರೈಕೋಡರ್ಮ,ಎನ್.ಪಿ.ಕೆ ವಿತರಿಸಲಾಯಿತು.
ಯಳನಾಡು ಗ್ರಾಮಪಂಚಾಯ್ತಿ ಸದಸ್ಯ ರಮೇಶ್ ,ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ, ಕೆ.ಟಿ.ತಿಪ್ಪೇಸ್ವಾಮಿ, ರೈತ ಅನುವುಗಾರರಾದ ಜಯಣ್ಣ, ಬಸವರಾಜು,ಮಂಜುನಾಥ್,ಎಟಿಎಂ ಲತಾಮಣಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ