ಹುಳಿಯಾರಿನಲ್ಲಿ ಸಮಸ್ಯೆಗಳ ಸರಮಾಲೆ
------------------------
ಹುಳಿಯಾರು:ಜಿಲ್ಲೆಯ ಅತಿದೊಡ್ದ ಪಂಚಾಯ್ತಿಯೆಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರಿನ ಸಮಸ್ಯೆಗಳ ಸರಮಾಲೆ ಬಗ್ಗೆ ಕೇಳಿತಿಳಿದಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಅವರಿಗೆ ಈ ಬಗ್ಗೆ ಸ್ವತಹ ಅನುಭವವಾದ ಘಟನೆ ಜರುಗಿತು.
ಹುಳಿಯಾರಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೇಳಿಬಂದಿದ್ದ ದೂರು ಅನುಸರಿಸಿ ಆಸ್ಪತ್ರೆಗೆ ಮಂಗಳವಾರ ಸಂಜೆ ಭೇಟಿ ಇತ್ತ ಅವರಿಗೆ ಮುಚ್ಚಿದ ವೈದ್ಯರ ಕೊಠಡಿ ಸ್ವಾಗತಿಸಿತು. ವೈದ್ಯರೂ ಇಲ್ಲದೆ,ಸಿಬ್ಬಂದಿಯೂ ಇಲ್ಲದ ಕಡೆಗೆ ರೋಗಿಗಳು ಇಲ್ಲದ ಆಸ್ಪತ್ರೆಯ ವಾತಾವರಣದಿಂದ ಚಕಿತಗೊಂಡ ಅವರು ಸಿಬ್ಬಂದಿಯನ್ನು ಕರೆಸಿ ವೈದ್ಯರಿಗೆ ಹೇಳಿಕಳುಹಿಸುವಂತಾಯಿತು.
ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಔಷದಿ ದಾಸ್ತಾನು ರಿಜಿಸ್ಟರ್ ಪರಿಶೀಲಿಸಿದರು. |
ಕೋಟ್ಯಾಂತರ ರೂಪಾಯಿ ವೆಚ್ಚದ ಆಸ್ಪತ್ರೆ ವೈದ್ಯರಿಲ್ಲದ ಕಾರಣ ಸದುಪಯೋಗವಾಗದಿರುವ ಬಗ್ಗೆ ಜನಪ್ರತಿನಿಧಿಗಳು ಸಿಇಒ ಗಮನಕ್ಕೆ ತಂದರು.ಈ ಹಿಂದೆ ನಿತ್ಯ ಮೂರುನೂರಕ್ಕೂ ಅಧಿಕ ರೋಗಿಗಳು ಆಗಮಿಸುತಿದ್ದ ಆಸ್ಪತ್ರೆ ಇಂದು ಖಾಲಿ ಹೊಡೆಯುವಂತಾಗಿದೆ,ಇದಕ್ಕೆ ವೈದ್ಯರ ಕೊರತೆಯೇ ಕಾರಣವಾಗಿದ್ದು ಶೀಘ್ರ ಖಾಯಂ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದರು.
ವೈದ್ಯರ ಹಾಗೂ ಸಿಬ್ಬಂದಿ ಹಾಜರಾತಿ ಬಗ್ಗೆ ಪರಿಶೀಲಿಸಿದ ಸಿಇಒ ಹಾಜರಾತಿಯಲ್ಲಿರುವ ಯಾರೊಬ್ಬರು ಕಾಣದಿರುವ ಬಗ್ಗೆ ಚಕಿತಗೊಂಡರು.ಬಯೋಮ್ಯಾಟ್ರಿಕ್ಸ್ ಹಾಜರಾತಿ ಸರಿಯಿಲ್ಲದ್ದರ ಬಗ್ಗೆ,ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಕುಡಿಯಲು ನೀರಿಲ್ಲದ್ದರ ಬಗ್ಗೆ ,ಪೂರೈಕೆಯಾಗಿರುವ ಔಷದಿ ಬಗ್ಗೆಯಾಗಲಿ ಬಳಕೆಯಾಗಿರುವ ಬಗ್ಗೆಯಾಗಲಿ, ದಾಸ್ತಾನು ಎಷ್ಟಿದೆ ಎಂಬ ಬಗ್ಗೆಯಾಗಲಿ ರಿಜಿಸ್ಟರ್ ಇಡದಿರುವುದನ್ನು ಗಮನಿಸಿದರು. ಕಡೆಗೆ ಒಪಿಡಿ ರಿಜಿಸ್ಟರ್ ಕೂಡ ನಿರ್ವಹಿಸದಿರುವ ಬಗ್ಗೆ ವೈದ್ಯರ ಸ್ಪಷ್ಟನೆ ಪಡೆದುಕೊಂಡು ಕರ್ತವ್ಯ ಲೋಪದ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚನೆ ನೀಡುವಂತೆ ತಿಳಿಸಿದರು.
ರೋಗಿಗಳಿಲ್ಲದಿದ್ದರೂ ನಿತ್ಯ ಮೆಡಿಸಿನ್ ಇಶ್ಯೂ ಆಗಿರುವ ಬಗ್ಗೆ ವಿವರಣೆ ಕೋರಿದರು.ಈ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ಇರುವ ಇಬ್ಬರೇ ಬರುವ ನೂರಕ್ಕೂ ಹೆಚ್ಚು ರೋಗಿಗಳನ್ನು ನೋಡಬೇಕಿದ್ದು ಯಾವುದೇ ರಿಜಿಸ್ಟರ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದ ವೈದ್ಯರ ಮಾತಿಗೆ ಸಿಡಿಮಿಡಿಗೊಂಡ ಅವರು ನಿಯಮಾನುಸಾರ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.ಆಸ್ಪತ್ರೆಯ ಆವರಣದಲ್ಲಿ ವಾರ್ಡುಗಳಲ್ಲಿ ಸ್ವಚ್ಚತೆಯಿಲ್ಲದಿರುವುದರ ಬಗ್ಗೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಅವರು ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹೇಗೆ ನಿಭಾಯಿಸುತ್ತಿರಿ ಎಂದು ಪ್ರಶ್ನಿಸಿದರು.
ರೋಗಿಗಳಿಗೆ ಕುಡಿಯಲು ನೀರಿಲ್ಲದಿರುವ ಬಗ್ಗೆ ,ಹೊಸ ಕಟ್ಟಡ ನಿರ್ಮಿಸುವ ಸಮಯದಲ್ಲಿನ ಸಾಮಗ್ರಿಗಳನ್ನು ನಿತ್ಯ ಕದೊಯ್ಯುತ್ತಿರುವ ಬಗ್ಗೆ ಕೂಡಲೇ ಗಮನ ಹರಿಸುವಂತೆ ಗ್ರಾಮ ಪಂಚಾಯ್ತಿ ಸದಸ್ಯ ಧನುಷ್ ರಂಗನಾಥ್ ತಿಳಿಸಿದರು.ಇಲ್ಲಿನ ಸಮಸ್ಯೆಗಳ ಬಗ್ಗೆ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ,ಗ್ರಾಪಂ ಅಧ್ಯಕ್ಷೆ ಗೀತಾ ಸದಸ್ಯ ಧನುಷ್ ರಂಗನಾಥ್,ಅಹ್ಮದ್ ಖಾನ್,ಶಂಕರ್ ಮೊದಲಾದರು ಗಮನ ಸೆಳೆದರು.
ಜಲ ಸಂಗ್ರಹಗಾರ:ಬೋರನಕಣಿವೆ ಮೂಲಕ ಹುಳಿಯಾರಿಗೆ ಸರಬರಾಜಾಗುವ ನೀರು ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿದ ಅವರು ಸ್ವತಹ ತಾವೇ ಏಣಿ ಮೂಲಕ ಟ್ಯಾಂಕ್ ಮೇಲೆ ಹತ್ತಿ ಪರಿಶೀಲಿಸಿದರು.ದುರ್ವಾಸನೆ ಬೀರುತ್ತಿರುವ ನೀರನ್ನು ಕಂಡು ನಿಬ್ಬೆರಗಾದರು.ಪಾಚಿಕಟ್ಟಿ ರಾಡಿಯಾಗಿದ್ದ ನೀರು ಬಳಕೆಗೆ ಯೋಗ್ಯವಿಲ್ಲದಿದ್ದು ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಶುದ್ಧಿಕರಣ ಘಟಕದ ಸಮಸ್ಯೆ ಬಗ್ಗೆ ಪಂಚಾಯ್ತಿ ಅಧ್ಯಕ್ಷರು ಮನವರಿಕೆ ಮಾಡಿಕೊಟ್ಟ ನಂತರ ಕೂಡಲೇ ದುರಸ್ತಿ ಮಾಡಲು ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿಕೊಟ್ಟಲ್ಲಿ ತುರ್ತಾಗಿ ಅನುಮೋದನೆ ಮಾಡುವುದಾಗಿ ಹೇಳಿದರು.
ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಔಷದಿ ದಾಸ್ತಾನು ರಿಜಿಸ್ಟರ್ ಪರಿಶೀಲಿಸಿದರು. |
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಸಿದ್ಧರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಈಗಾಗಲೇ ೬೦ ಲಕ್ಷದ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಹೊಸ ಶುದ್ಧಿಕರಣ ಘಟಕ ಸ್ಥಾಪಿಸಲು ಭರವಸೆ ನೀಡಿದ್ದು ಇದನ್ನೆ ಅನುಮೋದನೆ ದೊರಕಿಸಿಕೊಡುವಂತೆ ಆಗ್ರಹಿಸಿದರು.ಈ ಸಂಬಂಧ ತಜ್ಞರ ಸಲಹೆ ಪಡೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆಯಿತ್ತರು.
ಇಒ ಕೃಷ್ಣಮೂರ್ತಿ,ಗ್ರಾಪಂ ಮಾಜಿ ಅಧ್ಯಕ್ಷೆ ಪುಟ್ಟಿಬಾಯಿ,ಸದಸ್ಯರುಗಳಾದ ಸಿದ್ಧಗಂಗಮ್ಮ. ಅಶೋಕ್ ಬಾಬು,ಗೀತಾಬಾಬು,ಪಿಡಿಒ ಸಿದ್ದರಾಮಣ್ಣ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ