ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತಸಂಘ ಶನಿವಾರದಂದು ಕರೆನೀಡಿದ್ದ ಬಂದ್ ಯಶಸ್ವಿಯಾಯಿತು. ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವ್ಯಾಪಾರಸ್ಥರು ಅಂಗಡಿಮುಗ್ಗಟ್ಟುಗಳು,ಹೋಟೆಲ್ ಗಳನ್ನು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ಮುಖಾಂತರ ಹೋರಾಟಕ್ಕೆ ಕೈಜೋಡಿಸಿದ್ದರು.
ಪಟ್ಟಣದ ರಾಂಗೋಪಾಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರೂ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಿಂದ ಮತ್ತೆ ಉತ್ತರ ಕರ್ನಾಟಕ ಜನತೆಗೆ ಮೋಸವಾಗಿದೆ.ರಾಜ್ಯ ಸರ್ಕಾರ ನೀರಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಧೀಕರಣದ ಮುಂದೆ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗುತ್ತಿದೆ.ರಾಜಕೀಯ ಕಾರಣಗಳಿಂದಲೂ ಸಹ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಮಹದಾಯಿ ನ್ಯಾಯಾಧೀಕರಣ ತೀರ್ಪಿನ ಬಗ್ಗೆ ತಕ್ಷಣ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸಂಸತ್ತಿನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು. ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡಿ ಪಕ್ಷ ಬೇಧ ಮರೆತು ಹೋರಾಟಕ್ಕಿಳಿದು ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಧಾನಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ನಾಡಕಚೇರಿ ಯವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಿದರು.
ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್,ಜಿಲ್ಲಾ ರೈತಸಂಘದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ, ತಾಲ್ಲೂಕ್ ರೈತ ಸಂಘದ ತಿಮ್ಮನಹಳ್ಳಿ ಲೋಕಣ್ಣ,ಉಪಾಧ್ಯಕ್ಷ ತಮ್ಮಡಿಹಳ್ಳಿ ಮಲ್ಲೀಕಣ್ಣ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ,ಕಲಾವಿದ ಗೌಡಿ,ಬಾಳೆಕಾಯಿ ಲಕ್ಷ್ಮೀಕಾಂತ್ ಮಾತನಾಡಿದರು.
ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಕೆ ಎಸ್ ಆರ್ಟಿಸಿ ಬಸ್‌ಗಳು ಕೂಡ ರಸ್ತೆಗಿಳಿಯದಿದ್ದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿ ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಮೆಡಿಕಲ್ ಸ್ಟೋರ್,ಆಸ್ಪತ್ರೆ ಎಂದಿನಂತೆ ತೆರದಿತ್ತು.
ಕರ್ನಾಟಕ ರಕ್ಷಣ ವೇದಿಕೆ ಪದಾಧಿಕಾರಿಗಳು,ಜಯಕರ್ನಾಟಕ ,ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣ,ಜಿಲ್ಲಾ ರೈತಸಂಘದ ಚಂದ್ರಪ್ಪ ಬಣ,ಕಾಮನ ಬಿಲ್ಲು ಫೌಂಡೇಷನ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮೋಹನ್ ಕುಮಾರ್,ಹುಳಿಯಾರು ಹೋಬಳಿ ರೈತ ಸಂಘದ ಕೆಂಕೆರೆ ಶಿವಣ್ಣ,ತಾಲ್ಲೂಕ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಇಂದಿರಾ ರಾಜಶೇಖರ್, ಎಪಿಎಂಸಿಯ ಬಾಲಾಜಿ,ಆಂಜನೇಯ ದೇವಸ್ಥಾನ ಸಮಿತಿಯ ಟ್ರಾಕ್ಟರ್ ಮಂಜಣ್ಣ ಮುಂತಾದವರಿದ್ದರು.
ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ