ಅಂತ್ಯಗೊಂಡ ಧರಣಿ : ೩೩ ಶಾಲೆಗಳ ಪುನರಾರಂಭ
--------------------------------------
ಹುಳಿಯಾರು: ಹುಳಿಯಾರು ಹೋಬಳಿ ಗಡಿ ಗ್ರಾಮಗಳ ಶಾಲೆಗಳಿಗೆ ಸೋಮವಾರದಂದು ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ೧೮ ಶಿಕ್ಷಕರನ್ನು ನೇಮಿಸಿರುವ ಆದೇಶ ಹೊರಬೀಳುತ್ತಿದ್ದಂತೆಯೇ ಹೊಯ್ಸಲಕಟ್ಟೆ ಸರ್ಕಲ್‌ನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ ಧರಣಿ ಮಂಗಳವಾರದಂದು ಅಂತ್ಯಗೊಂಡಿತು.
ಹುಳಿಯಾರು ಹೋಬಳಿಯ ಗಡಿಭಾಗದ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಆ ಭಾಗದ ೩೩ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕುವ ಮೂಲಕ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿತ್ತು.
ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಮುಂದಾಳತ್ವದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ,ತಾಪಂ ಅಧ್ಯಕ್ಷೆ ಹೊನ್ನಮ್ಮ,ರೈತ ಸಂಘದ ಕೆಂಕೆರೆ ಸತೀಶ್ ಸೇರಿದಂತೆ ಆ ಭಾಗದ ಎಲ್ಲಾ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಆರಂಭವಾದ ಪ್ರತಿಭಟನೆ ದಿನೇದಿನೇ ತೀವ್ರವಾಗುತ್ತಿದ್ದಂತೆಯೇ ಎಚ್ಚೆತ್ತ ಇಲಾಖೆ ಸಮಸ್ಯೆ ಪರಿಹರಿಸಲು ಮುಂದಾಯಿತು. ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರೆ ಬಂದು ಅತಿಥಿ ಶಿಕ್ಷಕರ ಹುದ್ದೆ ನೀಡುವ ಮೂಲಕ ಉಂಟಾಗಿರುವ ಶಿಕ್ಷಕರ ಕೊರತೆ ನಿವಾರಿಸುವುದಾಗಿ ಭರವಸೆ ನೀಡಿದ್ದರು.
ಅಂತೆಯೇ ಸೋಮವಾರದಂದು ಚಿಕ್ಕನಾಯಕನಹಳ್ಳಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೆಚ್ಚುವರಿ ಕೌನ್ಸಿಲಿಂಗ್ ಮಾಡಿ ೧೮ ಶಿಕ್ಷಕರನ್ನು ಆ ಭಾಗಕ್ಕೆ ಆಯ್ಕೆ ಮಾಡಿಕೊಂಡು ಸ್ಥಳ ನಿಯುಕ್ತಿ ಆದೇಶ ಕೂಡ ಹೊರಡಿಸಿದ್ದಾರೆ.ಈ ಬಗ್ಗೆ ಧರಣಿನಿರತರಿಗೆ ಮಾಹಿತಿ ನೀಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಉಳಿದ ಹುದ್ದೆಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕೌನ್ಸಿಲಿಂಗ್ ನಲ್ಲಿ ಕರೆಯಲಾಗುವುದು.ಅಲ್ಲದೆ ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ಮುಗಿಯ್ಯುತ್ತಿದ್ದಂತೆ ರಾಜ್ಯಮಟ್ಟದಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವ ಭರವಸೆಯಿತ್ತು ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದರೊಟ್ಟಿಗೆ ಧರಣಿನಿರತರ ಸಮಸ್ಯೆಗೆ ಸ್ಪಂದಿಸಿದ ಸಾಸಲು ಸತೀಶ್ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಸರ್ಕಾರದ ಹಣಕಾಸು ಇಲಾಖೆಯ ಅನುಮತಿ ಪಡೆದಿದ್ದು ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಅನುಕೂಲವಾಗಿ ಕೌನ್ಸಿಲಿಂಗ್ ಯಶಸ್ವಿಯಾಗಿ ನಡೆಯಲು ಸಹಕಾರಿಯಾಯಿತು ಎನ್ನಲಾಗಿದೆ..
ಒಟ್ಟಾರೆ ಶಿಕ್ಷಣ ಇಲಾಖೆಯ ಕ್ರಮದಿಂದಾಗಿ ಕಳೆದ ನಾಲ್ಕು ದಿನಗಳಿಂದ ಸರ್ಕಾರಿ ಶಾಲೆಗಳು ಇಂದು ತೆರೆದು ಪಾಠ ಪ್ರವಚನ ಎಂದಿನಂತೆ ಶುರುವಾಯಿತು.
ಮಂಗಳವಾರ ಮಧ್ಯಾಹ್ನ ಜನಪ್ರತಿನಿಧಿಗಳು,ಪೋಷಕರು,ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆದು ಧರಣಿ ಹಿಂಪಡೆಯಲು ಒಪ್ಪಲಾಯಿತು .ದಸೂಡಿ ಕ್ಷೇತ್ರದ ತಾ.ಪಂ ಸದಸ್ಯ ಪ್ರಸನ್ನಕುಮಾರ್, ಹೊಯ್ಸಳಕಟ್ಟೆ ತಾ.ಪಂ ಸದಸ್ಯ ಆರ್.ಕೆ.ಪುಟ್ಟಣ್ಣ,ಸುವರ್ಣವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ,ರೈತ ಸಂಘದ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್,ಗ್ರಾ.ಪಂ ಸದಸ್ಯರುಗಳಾದ ಗಿರೀಶ್,ರಘುವೀರ್,ರಂಗನಾಥ್,ವಕೀಲರಾದ ಮೋಹನ್,ಗಾಣಧಾಳು ಗ್ರಾಪಂ ಸದಸ್ಯ ಮಧುಸೂದನ್ ,ಸದಸ್ಯ ಕಾಂತರಾಜು,ಯುವರಾಜು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ