ಹುಳಿಯಾರು ಸೇರಿದಂತೆ ಬಳ್ಳೆಕಟ್ಟೆ,ಕಂಪನಹಳ್ಳಿ,ಯಳನಾಡು,ಯಾಕೂಬ್ ಸಾಬ್ ಪಾಳ್ಯ,ಯಗಚೀಹಳ್ಳಿ ಮುಂತಾದೆಡೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಗುರುವಾರದಂದು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಹುಳಿಯಾರಿನಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಮುಸ್ಲಿಂ ಬಾಂಧವರು |
ಮುಂಜಾನೆಯೇ ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳಿಗ್ಗೆ ಹತ್ತರ ವೇಳೆಗೆ ಈದ್ಗಾಮೈದಾನದಲ್ಲಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಮೌಲಾನ ಹಜರತ್ ಆಸೀಫ್ ಅಲಿ ಅವರ ಧಾರ್ಮಿಕ ಭೋದನೆಯಲ್ಲಿ ಹಬ್ಬದ ಸಂದೇಶ ನೀಡಿ ರಂಜಾನ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ಜಬೀಉಲ್ಲಾ, ನೂರಾನಿ ಮಸೀದಿಯ ಮುತುವಲ್ಲಿ ಬೈಜು ಸಾಬ್, ಮುಸ್ಲಿಂ ಸಮುದಾಯದ ಮುಖಂಡರುಗಳು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಉಪಸ್ಥಿತರಿದ್ದರು.
ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.ಮಕ್ಕಳು, ಮಹಿಳೆಯರು ಮೆಹಂದಿ ಹಾಕಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರಲ್ಲದೆ ವಿಶೇಷ ಹಬ್ಬದೂಟ ಸವಿಯುವ ಮೂಲಕ ಕಳೆದ ಇಪ್ಪತ್ತೆಂಟು ದಿನಗಳ ಉಪವಾಸ ವ್ರತ ಕೊನೆಗೊಳಿಸಿದರು.
ಈ ವೇಳೆ ಜಾಮೀಯ ಮಸೀದಿಯ ಮುತುವಲ್ಲಿ ಜಬೀಉಲ್ಲಾ ,ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಣ್ಣ, ನಂದಿಹಳ್ಳಿ ಶಿವಣ್ಣ,ಪಿಎಸೈ ಪ್ರವೀಣ್ ಕುಮಾರ್ ಮಾತನಾಡಿ ಶುಭಾಶಯ ತಿಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ