ಶುಕ್ರವಾರದಿಂದಲೂ ೩೨ ಶಾಲೆಗಳಿಗೆ ಬೀಗ;ಮಕ್ಕಳಿಗೆ ಸಾಮೂಹಿಕ ರಜೆ
---------------------------------
ಹುಳಿಯಾರು:ಹೋಬಳಿಯ ಗಡಿಭಾಗದ ಶಾಲೆಗಳ ಶಿಕ್ಷಕರ ಸಮಸ್ಯೆ ನಿವಾರಿಸುವಂತೆ ಶುಕ್ರವಾರದಿಂದ ನಡೆಯುತ್ತಿರುವ ಧರಣಿ ಶನಿವಾರದಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಇಲಾಖೆಯ ಯಾರೊಬ್ಬ ಅಧಿಕಾರಿಗಳು ಇತ್ತ ತಲೆಹಾಕಿಲ್ಲದಿರುವುದು ಪ್ರತಿಭಟನೆಯ ಕಾವೇರಲೂ ಕಾರಣವಾಗಿದ್ದು ಇದೇ ಕಾರಣಕ್ಕೆ ಈ ಭಾಗದ ಎಲ್ಲಾ ೩೨ ಶಾಲೆಗಳಿಗೂ ಬೀಗ ಹಾಕಿದ್ದು ಮಕ್ಕಳಿಗೆ ರಜೆ ಘೋಷಿಸಲಾಗಿದೆ.ಸಧ್ಯ ಶಾಂತ ರೀತಿಯಲ್ಲಿ ಧರಣಿ ಮುಂದುವರೆದಿದೆ.
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ನಡೆದಿರುವ ಅಹೋರಾತ್ರಿ ಧರಣಿ |
ಪ್ರತಿಭಟನೆಯ ಇಂದಿನ ನೇತೃತ್ವ ವಹಿಸಿಕೊಂಡಿದ್ದ ಹೊಯ್ಸಳಕಟ್ಟೆ ಗ್ರಾಮಪಂಚಾಯ್ತಿ ಸದಸ್ಯ ಗಿರೀಶ್ ಮಾತನಾಡಿ ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದಲೂ ಶಿಕ್ಷಕರ ಕೊರತೆ ಇದ್ದೇಯಿದ್ದು ಸಮಸ್ಯೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು ಕೆಲವೊಂದು ಶಾಲೆಗಳು ಮುಚ್ಚಿದ ಉದಾಹರಣೆ ಕೂಡ ಇದೆ.ಹೊಯ್ಸಳಕಟ್ಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿನ ೭೩೧ ವಿದ್ಯಾರ್ಥಿಗಳಿಗೆ ೩೧ ಶಿಕ್ಷಕರಿದ್ದು ೧೦ ಶಿಕ್ಷಕರ ಕೊರತೆಯಿದೆ.ದಸೂಡಿ ಕ್ಲಸ್ಟರ್ ವ್ಯಾಪ್ತಿಯಲ್ಲಿನ ೮೫೦ ವಿದ್ಯಾರ್ಥಿಗಳಿಗೆ ೧೯ ಶಿಕ್ಷಕರಿದ್ದು ೨೦ ಶಿಕ್ಷಕರ ಕೊರತೆಯಿದೆ.ಅದೇರೀತಿ ೫೪೮ ವಿದ್ಯಾರ್ಥಿಗಳಿರುವ ಗಾಣಧಾಳು ಕ್ಲಸ್ಟರ್ ನಲ್ಲಿ ೨೭ ಶಿಕ್ಷಕರಿದ್ದು ೧೩ ಶಿಕ್ಷಕರ ಕೊರತೆಯಿದ ಎಂದು ಸಮಸ್ಯೆ ಬಿಚ್ಚಿಟ್ಟರು.
ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಇಲಾಖೆಯ ಕೌನ್ಸೆಲಿಂಗ್ ಸಮಸ್ಯೆ ಏನೇಯಿದ್ದರೂ ನಮಗದು ಬೇಡ. ಸ್ಥಳಕ್ಕೆ ಖುದ್ದು ಆಯುಕ್ತರೇ ಬರಬೇಕು.ಇಲ್ಲಿನ ಶಾಲೆಗಳಲ್ಲಿನ ಸ್ಥಿತಿಗತಿ ಅರಿಯಬೇಕು.ಎಲ್ಲಾ ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಬೇಕು. ಅಲ್ಲಿಯವರೆಗೂ ಎಲ್ಲಾ ೩೨ ಶಾಲೆಗಳನ್ನು ತೆರಯಲು ಬಿಡುವುದಿಲ್ಲ ಎಂದು ಖಡಕ್ಕಾಗಿ ನುಡಿದರು.
ನೇಮಕಾತಿ ಆದೇಶ ಬರುವವರೆಗೂ ಅಹೋರಾತ್ರಿ ಧರಣಿ ನಿಲ್ಲುವುದಿಲ್ಲವೆಂದು ಪಟ್ಟುಹಿಡಿದಿರುವ ಪ್ರತಿಭಟನಾಕಾರರು ಅಲ್ಲೆ ಊಟತಿಂಡಿ ಮಾಡಿ ರಾತ್ರಿ ಕಳೆದಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಕೊರೆಯುವ ಛಳಿಯಲ್ಲಿ ರಾತ್ರಿ ಕಳೆದ ಮುಖಂಡರುಗಳು |
ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ,ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಹೊಯ್ಸಳಕಟ್ಟೆ ತಾ.ಪಂ ಸದಸ್ಯ ಆರ್.ಕೆ.ಪುಟ್ಟಣ್ಣ,ರೈತ ಸಂಘದ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್, ಗ್ರಾಪಂ ಸದಸ್ಯರುಗಳಾದ ಮಧುಸೂದನ್ ,ರಘುವೀರ್,ಕಾಂತರಾಜು,ರಂಗನಾಥ್, ವಕೀಲರಾದ ಮೋಹನ್, ದಸೂಡಿ ಗ್ರಾ.ಪಂ ಉಪಾಧ್ಯಕ್ಷ ಹನುಮಂತರಾಯಪ್ಪ,ಸದಸ್ಯ ಕಾಂತರಾಜು, ಯುವರಾಜು ಸೇರಿದಂತೆ ಎಸ್ಡಿಎಂಸಿ ಸದಸ್ಯರು,ಗ್ರಾಮಸ್ಥರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ