ಹುಳಿಯಾರು:ಸದ್ಯ ಆರಂಭವಾಗಿರುವ ಸಂಸತ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿಗಳನ್ನು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ ೧೫ ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಸ್ಥಾಪಿಸಲು ಅನುಕೂಲ ಕಲ್ಪಿಸಿಕೊಡಿ ಎಂದು ಹುಳಿಯಾರು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಸಂಸದ ಮುದ್ದಹನುಮೇಗೌಡರಿಗೆ ಮನವಿ ಸಲ್ಲಿಸಿದರು.
ಹುಳಿಯಾರು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಸಂಸದ ಮುದ್ದಹನುಮೇಗೌಡರಿಗೆ ಮನವಿ ಸಲ್ಲಿಸಿದರು. |
ಸಂಸದರನ್ನು ತುಮಕೂರಿನಲ್ಲಿ ಭೇಟಿ ಮಾಡಿ ಕೊಬ್ಬರಿ ಬೆಳೆಗಾರರ ಸಮಸ್ಯೆ ಬಗ್ಗೆ ಸಂಸದರಿಗೆ ಮನವರಿಕೆ ಮಾಡಿಕೊಟ್ಟ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಬಸವರಾಜು ಮಾತನಾಡಿ ರಾಜ್ಯದಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಲ್ಪತರು ನಾಡಾದ ತಿಪಟೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ತೆಂಗು ನಂಬಿ ಜೀವನ ಸಾಗಿಸುತ್ತಿರುವ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು ಕಳೆದ ಸಾಲಿನಲ್ಲಿ 19ಸಾವಿರ ರೂ (ಹತ್ತೊಂಬತ್ತು ಸಾವಿರ) ಮುಟ್ಟಿದ್ದ ಕೊಬ್ಬರಿ ಬೆಲೆ ಈ ಬಾರಿ ತೀವ್ರ ಕುಸಿತ ಕಂಡು 7500 ರೂ ತಲುಪಿ ರೈತರು ಗುಳೆ ಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದೊದಗಿದೆ. ಕೇಂದ್ರ ಸರ್ಕಾರ ಕ್ವಿಂಟಲ್ ಕೊಬ್ಬರಿಗೆ ನೀಡುತ್ತಿರುವ ಬೆಂಬಲ ಬೆಲೆ ರೂ 7 ಸಾವಿರದ ಬದಲು ರೂ ೧೫ ಸಾವಿರಕ್ಕೆ ಹೆಚ್ಚಿಸಲು ಕೇಂದ್ರ ಮುಂದಾಗಬೇಕೆಂದರು.
ಮನವಿ ಸ್ವೀಕರಿಸಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಾವೀಗಾಗಲೇ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಚರ್ಚಿಸಿದ್ದು ಅಲ್ಲದೆ ಬೆಳೆಗಾರರ ಸಮಸ್ಯೆ ಬಗ್ಗೆ ಸಂಸತ್ತಿನ ಪ್ರಶ್ನೊತ್ತರ ಕಾಲದಲ್ಲೂ ಪ್ರಶ್ನೆ ಮಾಡಿ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ನಾನು ಕೂಡ ಇದೇ ಜಿಲ್ಲೆಯವನಾಗಿದ್ದು ತೆಂಗು ಬೆಳೆಗಾರರ ಸಮಸ್ಯೆ ಅರಿತಿದ್ದೇನೆ.ಕೃಷಿಸಚಿವರು ಈ ಬಗ್ಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದು ಹಾಗೊಂದು ವೇಳೆ ನೆರವಿಗೆ ಬರದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿ ನ್ಯಾಯ ದೊರೆಕಿಸಿಕೊಡುವುದಾಗಿ ಭರವಸೆಯಿತ್ತರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿಅಧ್ಯಕ್ಷ ಸಣ್ಣಯ್ಯ,ದೊರೆಸ್ವಾಮಿ,ಡಿ.ಆರ್.ರುದ್ರೇಶ್,ಹಂದನಕೆರೆ ರಾಜಣ್ಣ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ