೩೨ ಶಾಲೆಗಳಿಗೆ ಸಾಮೂಹಿಕ ಬೀಗ
---------------------------------
ಹುಳಿಯಾರು:ಹೋಬಳಿಯ ಗಡಿಭಾಗದ ಹೊಯ್ಸಳಕಟ್ಟೆ,ದಸೂಡಿ ಮತ್ತು ಗಾಣಧಾಳು ಕ್ಲಸ್ಟರ್ ಗೆ ಸೇರಿದ ಎಲ್ಲಾ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳಿಗೆ ಖಾಲಿಯಿರುವ ಹುದ್ದೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿ ಸ್ಥಳಕ್ಕೆ ಖುದ್ದು ಆಯುಕ್ತರೇ ಬರಬೇಕೆಂದು ಆಗ್ರಹಿಸಿ ಆ ಭಾಗದ ೩೨ ಸರ್ಕಾರಿ ಶಾಲೆಗಳಿಗೆ ಸಾಮೂಹಿಕ ಬೀಗ ಹಾಕುವ ಮೂಲಕ ಹೊಯ್ಸಳಕಟ್ಟೆಯ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರದಂದು ಅಹೋರಾತ್ರಿ ಧರಣಿ ಪ್ರಾರಂಭಿಸಲಾಯಿತು.
ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಮುಂದಾಳತ್ವದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಹೊಯ್ಸಳಕಟ್ಟೆ ಜಿಪಂ ಸದಸ್ಯ ಎಸ್.ಟಿ.ಮಹಾಲಿಂಗಯ್ಯ ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಪ್ರತಿಭಟನೆ ಪ್ರಾರಂಭವಾಗಿದ್ದು ಸ್ಥಳಕ್ಕೆ ಖುದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರೆ ಬಂದರು ಲೆಖ್ಖಿಸದೆ ಹೋರಾಟದ ಕಾವೇರಿದೆ.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಗಡಿ ಭಾಗದ ಶಾಲೆಗಳಿಗೆ ಸೂಕ್ತ ಶಿಕ್ಷಕರನ್ನು ನೇಮಿಸಲು ಆಗ್ರಹಿಸಿ ಕಳೆದ ಹದಿನೈದು ದಿನದ ಹಿಂದೆಯೇ ಹೋರಾಟ ಪ್ರಾರಂಭವಾಗಿದ್ದರು ಸಹ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರತಿಲ್ಲ.ಹಳ್ಳಿಗಳಲ್ಲಿನ ನಮ್ಮ ಮಕ್ಕಳಿಗೆ ಕಲಿಸಲು ಶಿಕ್ಷಕರು ಬರುತ್ತಿಲ್ಲದಿರುವುದಕ್ಕೆ ಶಿಕ್ಷಕರ ಮನಸ್ಥಿತಿಯೇ ಕಾರಣ ಎಂದರು.ಸರ್ಕಾರದಿಂದ ಒಳ್ಳೆ ಸಂಬಳ ಸವಲತ್ತು ಬಯಸುವ ಶಿಕ್ಷಕರು ಸರ್ಕಾರದ ಗ್ರಾಮೀಣ ಶಾಲೆಗಳಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ.ಕೌನ್ಸಿಲಿಂಗ್ ನಲ್ಲಿನ ನ್ಯೂನತೆ ಇದಕ್ಕೆ ಕಾರಣವಾಗಿದ್ದು ಶಿಕ್ಷಕರೇ ಆಯ್ಕೆ ಮಾಡಿಕೊಳ್ಳುವ ಶಾಲೆ ಕೊಡುವುದರ ಬದಲಾಗಿ ಗಡಿಭಾಗದಲ್ಲಿ ಎಲ್ಲಿ ಶಿಕ್ಷಕ ಹುದ್ದೆ ಖಾಲಿಯಿರುತ್ತದೊ ಅಲ್ಲಿ ಭರ್ತಿಯಾದ ನಂತರವೇ ಬೇರೆ ಶಾಲೆಗಳ ಆಯ್ಕೆಗೆ ಅವಕಾಶ ಮಾಡಿ ಎಂದು ಸಲಹೆ ನೀಡಿದರು.
ಶಾಲೆಗಳು ಪ್ರಾರಂಭವಾಗಿ ಒಂದೂವರೆ ತಿಂಗಳಾಗಿದ್ದು ಯಾವೊಂದು ಶಾಲೆಗಳಲ್ಲಿ ವಿಷಯಾಧಾರಿತ ಶಿಕ್ಷಕರಿಲ್ಲ. ಶಿಕ್ಷಕರ್ಯಾರು ಸ್ವಯಂಪ್ರೇರಿತರಾಗಿ ಹಳ್ಳಿ ಶಾಲೆಗಳಿಗೆ ಬರುವುದಿಲ್ಲ.ಹಾಗಾಗಿ ಶಿಕ್ಷಣ ಇಲಾಖೆ ತನ್ನ ನೇಮಕಾತಿ ಮಾನದಂಡವನ್ನು ಮಾರ್ಪಾಟು ಮಾಡಿಕೊಂಡಾಗ ಮಾತ್ರ ಹಳ್ಳಿಗಳ ಶಾಲೆಗಳಿಗೆ ಅನುಕೂಲವಾಗುತ್ತದೆ.ಸಧ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರ ಬಿಇಒ ಅವರಿಗಿದ್ದು ಕೂಡಲೇ ನೇಮಕಾತಿ ಮಾಡಿ ಸಮಸ್ಯೆ ಬಗೆಹರಿಸಿ ಎಂದರು.
ದಬ್ಬಗುಂಟೆ ರವಿಕುಮಾರ್ ಮಾತನಾಡಿ ಖಾಲಿ ಹುದ್ದೆ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿ ಎಂದರೂ ಸಹ ಅದನ್ನೂ ಕೂಡ ಮಾಡದಿದ್ದರೆ ನಮ್ಮ ಮಕ್ಕಳ ಗತಿಯೇನು.ಇದೇನಾ ಶಿಕ್ಷಣ ನೀತಿ.ಅರ್ಧದಷ್ಟು ಶಿಕ್ಷಕರು ಕೂಡ ಶಾಲೆಗಳಲಿಲ್ಲ.ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡಲು ಸರ್ಕಾರ ಶಿಕ್ಷಕರನ್ನು ನೇಮಿಸಲು ಮುಂದಾಗದಿದ್ದರೆ ನಮ್ಮ ಮಕ್ಕಳು ಕಲಿಯುವುದಾರೂ ಹೇಗೆ.ನಮ್ಮ ಮಕ್ಕಳ ಭವಿಷ್ಯ ಈ ರೀತಿ ಕಮರಿ ಹೋಗುವುದನ್ನು ಸಹಿಸಲಾಗುವುದಿಲ್ಲ.ಶಿಕ್ಷಕರ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.ಅದಕ್ಕಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕೂಡ ಹಿಂಜರಿಯುವುದಿಲ್ಲ ಎಂದು ಗುಡುಗಿದರು.
ಜಿಪಂ ಸದಸ್ಯ ಮಾಹಲಿಂಗಪ್ಪ ಮಾತನಾಡಿ ನಾನೀಗಾಗಲೇ ಸಮಸ್ಯೆ ಬಗ್ಗೆ ಸಿಇಒ ಗಮನಕ್ಕೆ ತಂದಿದ್ದು ಐದನೇ ತಾರೀಖಿನವರೆಗೆ ಗಡುವು ಕೊಡಿ ಅಷ್ಟರಲ್ಲ್ಲಿ ನೇಮಕ ಮಾಡೇಮಾಡುವುದಾಗಿ ಭರವಸೆ ನೀಡಿದ್ದಾರೆ.ಬಿಇಒ ಬಳಿ ಕೂಡ ಈ ಬಗ್ಗೆ ಮಾತನಾಡಿದ್ದು ಆಯ್ಕೆ ಪ್ರಕ್ರಿಯೆ ಮುಗಿದ ನಂತರ ನೇಮಕಾತಿ ಮಾಡುವುದಾಗಿ ಹೇಳಿದ್ದು ತಾವು ಅಲ್ಲಿಯವರೆಗೂ ಶಾಂತರೀತಿಯಲ್ಲಿ ಕಾಯಲು ಸಿದ್ಧರಿದ್ದು ಹಾಗೊಂದು ವೇಳೆ ನೇಮಕಮಾಡದಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನಸೌಧದಲ್ಲೂ ಈ ಬಗ್ಗೆ ಪ್ರಶ್ನಿಸುವುದಾಗಿ ಹೇಳಿದರು.
ಮೊದಲಿಗೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆ ನಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಬಂದರೂ ಕೂಡ ಇದಕ್ಕೊಪ್ಪದ ಪ್ರತಿಭಟನಕಾರರು ಆಯುಕ್ತರೇ ಸ್ಥಳಕ್ಕೆ ಬಂದು ಗ್ರಾಮೀಣ ಭಾಗದ ಶಾಲೆಗಳ ಸ್ಥಿತಿ ಕಣ್ಣಾರೆಕಂಡು ನೇಮಕಾತಿಗೆ ಆದೇಶ ಮಾಡುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡುವುದರ ಬದಲು ಇತರೆಡೆ ಶಾಲೆಗಳಿಂದ ಶಿಕ್ಷಕರನ್ನು ಇಲ್ಲಿಗೆ ವರ್ಗಾವಣೆ ಮೂಲಕ ಭರ್ತಿ ಮಾಡಿ ಎಂದರು.ಆಯುಕ್ತರೇ ಬರಬೇಕೆಂದು ಪಟ್ಟುಹಿಡಿದ ಪರಿಣಾಮ ಧರಣಿ ಮುಂದುವರಿದಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಅವರ ವಾಹನ ತಡೆದು ಕೂತಿರುವ ಪ್ರತಿಭಟನಕಾರರು. |
ದಸೂಡಿ ಕ್ಷೇತ್ರದ ತಾ.ಪಂ ಸದಸ್ಯ ಪ್ರಸನ್ನಕುಮಾರ್,ಹೊಯ್ಸಳಕಟ್ಟೆ ತಾ.ಪಂ ಸದಸ್ಯ ಆರ್.ಕೆ.ಪುಟ್ಟಣ್ಣ,ಸುವರ್ಣವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ,ರೈತ ಸಂಘದ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್,ತಾಲ್ಲೂಕ್ ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣಗ್ರಾ.ಪಂ ಸದಸ್ಯರುಗಳಾದ ಗಿರೀಶ್,ರಘುವೀರ್,ರಂಗನಾಥ್,ವಕೀಲರಾದ ಮೋಹನ್,ಗಾಣಧಾಳು ಗ್ರಾಪಂ ಸದಸ್ಯ ಮಧುಸೂದನ್ ,ದಸೂಡಿ ಗ್ರಾ.ಪಂ ಉಪಾಧ್ಯಕ್ಷ ಹನುಮಂತರಾಯಪ್ಪ,ಸದಸ್ಯ ಕಾಂತರಾಜು,ಯುವರಾಜು ಸೇರಿದಂತೆ ಎಸ್ಡಿಎಂಸಿ ಸದಸ್ಯರು,ಗ್ರಾಮಸ್ಥರು ಪಾಲ್ಗೊಂಡಿದ್ದರು.
-------------------
ಅತಿಥಿ ಶಿಕ್ಷಕರ ನೇಮಕಾತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.ವಾರ ಹದಿನೈದು ದಿನದೊಳಗೆ ಅತಿಥಿಶಿಕ್ಷಕರು ನೇಮಕಾತಿ ಆಗಲಿದೆ.ಸಮಸ್ಯೆ ಎಷ್ಟೆ ಇದ್ದರೂ ಅಲ್ಲಿಯವರೆಗೂ ಶಾಲೆಗಳನ್ನು ನಡೆಯಲು ಅವಕಾಶ ಮಾಡಿಕೊಡಿ.ನಮ್ಮ ತಾಲ್ಲೂಕಿನ ಶಿಕ್ಷಕರ ಕೊರತೆ ಹಾಗೂ ಸ್ಥಿತಿಗತಿ ಬಗ್ಗೆ ಆಯುಕ್ತರು ಹಾಗೂ ಉಪನಿರ್ದೇಶಕರ ಗಮನಕ್ಕೆ ತಂದಿದ್ದು ಇಲ್ಲಿನ ನಾಲ್ಕೈದು ಶಾಲೆಗಳಿಗೆ ಸೋಮವಾರ ಶಿಕ್ಷಕರು ಬರಲಿದ್ದಾರೆ.ಶಾಲೆಗಳಿಗೆ ಬೀಗ ಹಾಕಿರುವುದು ಸರಿಯಾದ ಕ್ರಮವಲ್ಲ.ಮುಷ್ಕರ ಕೈ ಬಿಟ್ಟು ಶಾಲೆ ನಡೆಸಲು ಅವಕಾಶ ಮಾಡಿಕೊಡಿ :ಕೃಷ್ಣಮುರ್ತಿ-ಕ್ಷೇತ್ರ ಶಿಕ್ಷಣಾಧಿಕಾರಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ