ಹೋಬಳಿಯ ಲಿಂಗಪ್ಪನಪಾಳ್ಯದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು , ಕುಡಿಯುವ ನೀರಿಗೂ ಸಹ ತತ್ವಾರ ಎದುರಾಗಿದ್ದು, ಈ ಬಗ್ಗೆ ಗ್ರಾ.ಪಂ.ಯಿಂದ ಹಿಡಿದು ಶಾಸಕರವರೆಗೂ ತಿಳಿಸಿದ್ದರೂ ಸಹ ಗಮನಗೊಡದೆ ಮೌನವಹಿಸಿದ್ದಾರೆಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಹುಳಿಯಾರಿನ ಲಿಂಗಪ್ಪನಪಾಳ್ಯದಲ್ಲಿ ಕುಡಿಯಲು ಬಳಸುತ್ತಿದ್ದ ಪ್ಲೋರೈಡ್ ಮಿಶ್ರಿತ ನೀರು ಬರುವ ಕೈ ಪಂಪ್ ಪರಿಶೀಲಿಸುತ್ತಿರುವ ಇಓ ಕೃಷ್ಣಮೂರ್ತಿ . |
ನೀರಿನ ಸಮಸ್ಯೆ ಬಗ್ಗೆ ಲಿಂಗಪ್ಪನಪಾಳ್ಯದ ನಿವಾಸಿಗಳು ಎರಡು ದಿನಗಳ ಹಿಂದೆ ನಡೆದ ಪಿಂಚಣಿ ಆದಾಲತ್ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಕಾಮಾಕ್ಷಮ್ಮ ಅವರುಗಳಿಗೆ ಸಮಸ್ಯೆ ವಿವರಿಸಿ ಬಗೆಹರಿಸುವಂತೆ ಪಟ್ಟುಹಿಡಿದಿದ್ದರು. ಶಾಸಕರ ಸೂಚನೆಯ ಮೇರೆಗೆ ಸಭೆಯಲ್ಲಿದ್ದ ಇಓ ಕೃಷ್ಣಮೂರ್ತಿಯವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಬಂದಿದ್ದರು.
ಆ ಗ್ರಾಮದಲ್ಲಿನ ಕುಡಿಯುವ ನೀರಿಗಾಗಿ ಪಂಚಾಯ್ತಿಯವರು ಹಾಕಿಸಿದ್ದ ಕೈ ಪಂಪ್ ನಲ್ಲಿ ಬರುವ ನೀರಿನಲ್ಲಿ ಅಧಿಕ ಪ್ರಮಾಣದ ಪ್ಲೋರೈಡ್ ಇದ್ದು, ಈ ನೀರು ಕುಡಿಯಲಿಕ್ಕೆ ಯೋಗ್ಯವಿಲ್ಲವಾಗಿದೆ ಕೂಡಲೇ ಗ್ರಾ.ಪಂ.ಗೆ ತಿಳಿಸಿ ಬದಲಿ ವ್ಯವಸ್ಥೆ ಕಲ್ಪಿಸುವೆ ಎಂದಿದ್ದ ಇಓ ಕೃಷ್ಣಮೂರ್ತಿ ಆ ಕಡೆ ತಲೆಹಾಕಿಲ್ಲ . ಇಓ ಅವರು ಕ್ರಮಕೈಗೊಳ್ಳದೆ ಹೋದರೆ ಅವರ ಕಛೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ನಿವಾಸಿಗಳು ಎಚ್ಚರಿಸಿದರು.
ಭರವಸೆ : ನೀರಿನ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಇಓ ಈ ನೀರಿನಲ್ಲಿ ಪ್ಲೋರೈಡ್ ಸೇರಿದಂತೆ ಅನೇಕ ಲವಣಗಳು ಅಧಿಕಪ್ರಮಾಣದಲ್ಲಿದ್ದು ನೀರಿನಲ್ಲಿ ನೊರೆ ಕೂಡ ಉತ್ಪತ್ತಿಯಾಗುತ್ತಿದೆ. ಕುಡಿದವರಿಗೆ ಗಂಟಲು ಕೆರೆತ,ಕೆಮ್ಮು,ಜ್ವರ ಸೇರಿದಂತೆ ಇನ್ನಿತರ ಖಾಯಿಲೆಗಳು ಬಂದು ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದುಬಂದಿದೆ. ಈ ಭಾಗದ ಬೋರ್ ವೆಲ್ ಗಳಲ್ಲಿ ಈ ಪ್ರಮಾನ ಅಧಿಕವಾಗಿರುವುದು ತಮ್ಮಗಮನಕ್ಕೆ ಬಂದಿದೆ ಇನ್ನೆರಡೆ ದಿನದಲ್ಲಿ ಗ್ರಾಮಕ್ಕೆ ಬೇರೆಡೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ಇತ್ತಿದ್ದಲ್ಲದೆ, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೊಮ್ಮೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ