ಹುಳಿಯಾರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿಗಿದ್ದ ಸುಮಾರು ಒಂದು ಶತಮಾನದಷ್ಟು ಹಳೆಯದಾದ ಮುಸಾಫಿರ್ ಖಾನೆ ಕಟ್ಟಡ ಅನ್ಯ ಉದ್ದೇಶಕ್ಕಾಗಿ ನೆಲಸಮವಾಗುವುದರ ಮುಖಾಂತರ ಪಟ್ಟಣದ ಇತಿಹಾಸಕ್ಕೆ ತಳುಕು ಹಾಕಿಕೊಂಡು ಸಾಕ್ಷಿಯಾಗಿದ್ದ ಕಟ್ಟಡವೊಂದು ನೆನಪಿನ ಪುಟ ಸೇರಿತು.
ಹುಳಿಯಾರಿನಲ್ಲಿದ್ದ ಶತಮಾನ ದಾಟಿದ್ದ ಮುಸಾಫಿರ್ ಖಾನೆ ನೆಲಸಮವಾಗಿರುವುದು. |
ಆ ಕಾಲದಲ್ಲಿ ಮುಸಾಫಿರ್ ಖಾನೆ ಎಂದರೆ ಪರಸ್ಥಳದವರು ಊರಿಂದೂರಿಗೆ ಬಂದಾಗ ಉಳಿದು ಕೊಳ್ಳಲು ಮಾಡಿದ್ದ ತಂಗುದಾಣವಾಗಿದ್ದು, ಅದನ್ನು ಹೀಗಿನ ಪ್ರವಾಸಿ ಮಂದಿರಗಳಿಗೆ ಹೋಲಿಸಬಹುದಾಗಿದೆ. ಈ ಕಟ್ಟಡ 1910ರ ಅಜುಬಾಜಿನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ಇಂದಿಗೂ ಗಟ್ಟಿಮುಟ್ಟಾಗಿದ್ದ ಕಟ್ಟಡ ಊರಿನ ಅನೇಕ ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿತ್ತು.
ಪರಸ್ಥಳದವರಿಗೆ ಛತ್ರವಾಗಿ ಉಪಯೋಗವಾಗಿದ್ದ ಕಟ್ಟಡ 45-46 ನೇ ಸಾಲಿನಲ್ಲಿ ಈ ಊರಿನ ಮೊಟ್ಟಮೊದಲ ಹೈಸ್ಕೂಲ್ ಪ್ರಾರಂಭಕ್ಕೆ ಕಾರಣವಾಯಿತು. ಈ ಹೈಸ್ಕೂಲ್ ಮೊದಲು ಜಿಲ್ಲಾಡಳಿತದ ವಶದಲ್ಲಿದ್ದರಿಂದ ಡಿಸ್ಟಿಕ್ ಬೋರ್ಡ್ ಹೈಸ್ಕೂಲ್ ಎಂದು ನಂತರ ತಾಲ್ಲೂಕು ಆಡಳಿತಕ್ಕೆ ಕೊಟ್ಟ ಮೇಲೆ ತಾಲ್ಲೂಕ್ ಬೋರ್ಡ್ ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು.
ಈ ಕಟ್ಟಡ ನೋಡಲು ಛತ್ರದಂತೆ ಇದ್ದು ,ಇದನ್ನು ನಿಂಗಣ್ಣ ಎಂಬಾತ ನೋಡಿಕೊಳ್ಳುತ್ತದ್ದರಿಂದ ನಿಂಗಣ್ಣನ ಛತ್ರ ಎಂದು ಸಹ ಕರೆಯುತ್ತಿದ್ದರು. ಇಲ್ಲಿ ಅನೇಕ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ, ನಿತ್ಯ ಪ್ರಾರ್ಥನೆಯ ಜಾಗ, 3 ಕೊಠಡಿಗಳಿದ್ದು ಅದರಲ್ಲೆ ಶಿಕ್ಷಕರು, ವಿಜ್ಞಾನ ಪ್ರಯೋಗಾಲಯವಿದ್ದು ಅಲ್ಲೆಯೇ ಮಕ್ಕಳಿಗೆ ಪಾಠಬೋಧನೆ ನಡೆಯುತ್ತಿತ್ತು. ವಿದ್ಯಾರ್ಥಿಗಳು ಹೆಚ್ಚಾಗಿದ್ದರಿಂದ ತೆಂಗಿನ ಗರಿಯ ಗುಡಿಸಲನ್ನು ಹಾಕಿ ಅದರಲ್ಲಿ ಮಕ್ಕಳನ್ನು ಕೂರಿಸಿ ಪಾಠಕಲಿಸಲಾಗುತ್ತಿತ್ತು, ಮಳೆಗಾಲದ ಗಾಳಿಯಿಂದಾಗಿ ಹೆಚ್ಚಿನ ಸಮಸ್ಯೆಗಳು ಉಂಟಾಗಿ ಮಕ್ಕಳ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತಿತ್ತು ಎಂದು ಈ ಶಾಲೆಯಲ್ಲೇ ಅಭ್ಯಾಸ ಮಾಡಿದ ಹುಳಿಯಾರಿನ ಪ್ರಕಾಶ್ ತಮ್ಮ ನೆನಪುಗಳನ್ನು ಬಿಚ್ಚಿಡುತ್ತಾರೆ.
ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಏರುತ್ತಿದ್ದರಿಂದ ಈ ಕಟ್ಟಡದಲ್ಲಿ ನಡೆಯುತ್ತಿದ್ದ ಹೈಸ್ಕೂಲ್‍ಗೆ ನೂತನ ಕಟ್ಟಡವನ್ನು ಹುಳಿಯಾರು-ಕೆಂಕೆರೆ ಮಧ್ಯ ಭಾಗದಲ್ಲಿ ನಿರ್ಮಿಸಲು 1951ರಲ್ಲಿ ಖುದ್ದು ಮೈಸೂರಿನ ಮಹಾರಾಜರಾದ ಶ್ರೀಜಯಚಾಮರಾಜ ಒಡೆಯರ್ ಅವರೇ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಿದ್ದು, ಆ ಸಮಯದಲ್ಲಿ ಬಂದಾಗ ಈ ಕಟ್ಟಡದಲ್ಲಿ ಉಳಿದಿದ್ದರು. ಹುಳಿಯಾರು-ಕೆಂಕೆರೆ ಮಧ್ಯ ಭಾಗದಲ್ಲಿದ್ದ ಹೈಸ್ಕೂಲ್ 1963ರಲ್ಲಿ ಪೂರ್ಣಗೊಂಡು 1964ರಲ್ಲಿ ಸರ್ಕಾರಕ್ಕೆ ಹಸ್ತಾಂತರವಾಗುವರೆಗೂ ಮುಸಾಫಿರ್ ಖಾನೆಯಲ್ಲಿ ಹೈಸ್ಕೂಲ್ ನಡೆಯುತ್ತಿತ್ತು.
ನೂರಾರು ಮಂದಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗ ಮಾಡಿದ್ದು, ಇಲ್ಲಿನ ಅನೇಕ ವಿದ್ಯಾರ್ಥಿಗಳು ಹೊರ ರಾಜ್ಯ ಹಾಗೂ ವಿದೇಶದಲ್ಲೂ ಕೂಡ ಉನ್ನತ ಹುದ್ದೆಯಲ್ಲಿದ್ದು , ಅವರೆಲ್ಲರಿಗೂ ಈ ಕಟ್ಟಡವೆಂದರೆ ಬಲು ಅಚ್ಚುಮೆಚ್ಚು.
ಈ ಕಟ್ಟಡದಲ್ಲಿ ನಡೆಯುತ್ತಿದ್ದ ಹೈಸ್ಕೂಲ್ ಸ್ಥಳಾಂತರವಾದ ಮೇಲೆ ಇದು ಶಾಲಾ ಮಕ್ಕಳಿಗೆ ಉಪ್ಪಿಟ್ಟು ತಯಾರಿಸುವ ಕೊಠಡಿಯಾಗಿ, ಶಿಶುವಿಹಾರ, ಹಾಸ್ಟೆಲ್ ನಂತರ ಆಸ್ಪತ್ರೆಯ ಹೆರಿಗೆ ಕೋಣೆಯಾಗಿ ಸಹ ಬಳಸಿಕೊಳ್ಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಇದರ ಸಮರ್ಪಕ ನಿರ್ವಹಣೆಯಿಲ್ಲದೆ ಯಾರಿಗೂ ಬೇಡವಾಗಿ ಉಳಿದಿತ್ತು. ಇದೀಗ ಈ ಕಟ್ಟಡವನ್ನು ಆಸ್ಪತ್ರೆಯ ಸಿಬ್ಬಂದಿಗಳಿಗೆ ಕ್ವಾರ್ಟಸ್ ನಿರ್ಮಿಸುವ ನಿಟ್ಟಿನಲ್ಲಿ ನೆಲಸಮ ಮಾಡಲಾಗಿದ್ದು, ಬೋಳುಬೋಳಾಗಿರುವ ಜಾಗ ತನ್ನ ಗತಕಾಲದ ಕಥೆ ಹೇಳುತ್ತಾ ಇತಿಹಾಸದ ಪುಟಕ್ಕೆ ಸೇರಿದೆ.
ಒಟ್ಟಾರೆ ಆಧುನಿಕತೆಯ ಬೆಳವಣಿಗೆಯ ನಡುವೆ ಪಟ್ಟಣದಲ್ಲಿದ್ದ ಶತಮಾನದಷ್ಟು ಹಳೆಯದಾದ ಅಂದಿನ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಕಟ್ಟಡವೊಂದು ಧರೆಗುರುಳಿದ್ದು, ಇಲ್ಲಿ ಅಭ್ಯಾಸಿಸಿದವರ ಹಾಗೂ ಸಾರ್ವಜನಿಕರಲ್ಲಿ ಬೇಸರವನ್ನುಂಟು ಮಾಡಿದೆ.
-------
ಮುಸಾಫಿರ್ ಖಾನ್ ಕಟ್ಟಡದಲ್ಲಿ ಪಟ್ಟಣ ಸೇರಿದಂತೆ ಸಾವಿರಾರು ಮಂದಿ ಓದಿದ್ದಾರೆ.ಅದರಲ್ಲಿ ತಾನು ಸಹ ಒಬ್ಬರಾಗಿದ್ದು ಇಲ್ಲಿ ನೀಡುತ್ತಿದ್ದ ಉಪಹಾರ ನೆನಪು ಮಾತ್ರ ಹಾಗೇ ಇದೆ :
ಗ್ರಾ.ಪಂ.ಸದಸ್ಯ ಗಂಗಾಧರ ರಾವ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ