ಕಳದೊಂದು ವಾರದಿಂದ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಬಹುದಿನಗಳಿಂದ ಮಳೆ ನಿರೀಕ್ಷೆಯಲ್ಲಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದಾರೆ. ಹುಳಿಯಾರು ಪಟ್ಟಣದ ಅಸುಪಾಸಿನಲ್ಲಂತೂ ಕಳೆದ ಐದಾರು ವರ್ಷಗಳಿಂದ ಮಳೆ ಕಾಣದೆ ಕಂಗಾಲಾಗಿದ್ದ ಈ ಭಾಗದ ರೈತರಿಗೆ ಸದ್ಯ ಸುರಿಯುತ್ತಿರುವ ಮಳೆ ಜೀವಸೆಲೆ ತಂದಂತಾಗಿದೆ.
ಹುಳಿಯಾರು ಹೋಬಳಿ ಚಿಕ್ಕಬಿದರೆ ಭಾಗದಲ್ಲಿ ಮಳೆಗೆ ಕಟ್ಟೆಗಳಲೆಲ್ಲಾ ನೀರು ತುಂಬಿದೆ. |
ಬೋರನಕಣಿವೆ ವ್ಯಾಪ್ತಿಯಲ್ಲಿ ಬುಧವಾರ 62.4 ಮೀ.ಮೀ ಹಾಗೂ ಗುರುವಾರ 55.4 ಮೀ.ಮೀ ಮಳೆ ಪ್ರಯಾಣ ದಾಖಲಾಗಿದ್ದರೆ. ಹುಳಿಯಾರು ಭಾಗದಲ್ಲಿ ಬುಧವಾರದಂದು 24.3 ಮೀಮೀ ಹಾಗೂ ಗುರುವಾರದಂದು 45.1 ಮೀಮೀ ಮಳೆ ದಾಖಲಾಗಿದೆ. ಭಾರಿ ಮಳೆಯಾಗದಿದ್ದರು ರಾತ್ರಿ ಸಮಯ ಬರುತ್ತಿರುವ ಮಳೆಯಿಂದಾಗಿ ತೋಟತುಡಿಕೆಗಳು ನೀರು ತುಂಬಿ ಕೆರೆಕಟ್ಟೆಗಳಿಗೆ ನೀರಿನ ಹರಿವು ಬರುತ್ತಿದೆ. ಆವಳಗೆರೆ,ಚಿಕ್ಕಬಿದರೆ,ದೊಡ್ಡಬಿದರೆ,ಪೋಚಕಟ್ಟೆ ಕೆರೆಗಳಿಗೆ ಎರಡು ದಿನಗಳಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರುತ್ತಿದ್ದು, ಇದೇ ರೀತಿ ಇನ್ನೆರಡು ದಿನ ಮಳೆ ಬಂದಲ್ಲಿ ಕೋಡಿಬೀಳುವ ಸಾಧ್ಯತೆಗಳಿವೆ.
ಗಾಣಧಾಳು, ಹೊಯ್ಸಳಕಟ್ಟೆ, ದಸೂಡಿ, ದಬ್ಬಗುಂಟೆ, ಬೆಳ್ಳಾರ, ಕೆಂಕೆರೆ, ಯಳನಡು, ಕೋರಗೆರೆ, ಸೀಗೇಬಾಗಿ, ಶಿಡ್ಲಕಟ್ಟೆ,ಬರಕನಹಾಲ್ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು ರಾಗಿ ಬೆಳೆಗೆ ಅನುಕೂಲವಾಗಲಿದ್ದು, ಜೊತೆಗೆ ನೀರಿ ಕೊರತೆಯಿಂದ ಸೊರಗಿದ್ದ ಅಡಿಕೆ ಚೇತರಿಸಿಕೊಳ್ಳಲಿದೆ. ಕಳೆದ ಐದಾರು ವರ್ಷಗಳಿಂದ ನೀರಿಲ್ಲದೆ ತೆಂಗಿನ ಮರಗಳು ಸುಳಿ ಒಣಗಿ ಬೀಳುತ್ತಿದ್ದವು ಇದೀಗ ಉತ್ತಮ ಮಳೆ ಬಂದು ತೋಟಗಳೆಲ್ಲಾ ತುಂಬಿರುವುದರಿಂದ ಒಣಗಿ ಹೋಗುತ್ತಿದ್ದ ತೆಂಗು ತಕ್ಕಮಟ್ಟಿಗೆ ಉಳಿಯುವಂತಾಗಿದೆ.
ಕಳೆದ ವರ್ಷದಂತೆ ದನಕರುಗಳಿಗೆ ಮೇವಿಲ್ಲದೆ, ಕುಡಿಸಲು ನೀರಿಲ್ಲದೆ ಪರಿತಪಿಸಬೇಕೆಂಬ ಆತಂಕದಲ್ಲಿದ್ದ ರೈತರಿಗೆ ಈ ಮಳೆ ತುಸು ಚೇತರಿಕೆ ತಂದುಕೊಟ್ಟಿದ್ದು ದನಕರುಗಳಿಗೆ ಉತ್ತಮ ಮೇವು ಬರುತ್ತದೆ ಎಂಬ ನಂಬಿಕೆ ಅನ್ನದಾತನದ್ದಾಗಿದೆ.
ಮಳೆಯೋನೋ ಉತ್ತಮವಾಗಿದೆ ಆದರೆ ಈ ಮಳೆ ರಾಗಿ ಬಿತ್ತನೆ ಮಾಡಿದಾಗಿನಿಂದಲೇ ಬರುತ್ತಿದ್ದರೆ ಹಿಂಗಾರು ಚೆನ್ನಾಗಿ ಆಗುತ್ತಿತ್ತು ಆದರೆ ಈಗ ರಾಸುಗಳಿಗೆ ಮೇವಿನ ಭಯವೇನು ಇಲ್ಲ ಆದರೆ ರಾಗಿ ಮಾತ್ರ ಕಡಿಮೆ ಎನ್ನುತ್ತಾರೆ ರೈತರು. ಒಟ್ಟಾರೆ ಮಳೆ ಬರುತ್ತಿರುವುದರಿಂದ ರೈತರಲ್ಲಿ ನೆಮ್ಮದಿಭಾವ ಮೂಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ