ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಬಿಟ್ಟುಬಿಡದೆ ಬರುತ್ತಿದ್ದ ಮಳೆ ಹಾಗೂ ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ತುಂಬಿರದ ಕೆರೆ, ಕಟ್ಟೆ, ಪಿಕಫ್ ಗಳು, ತೋಟ-ತುಡಿಕೆಗಳೆಲ್ಲಾ ತುಂಬಿ ಹರಿದಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ.
![]() |
ಬಳ್ಳೆಕಟ್ಟೆ ಸೇತುವೆ ಬಳಿ ಬೋರನಕಣಿವೆ ಜಲಾಶಯಕ್ಕೆ ಹರಿದು ಹೋಗುತ್ತಿರುವ ನೀರು.
ಸ್ವಾತಿ ಮಳೆ ಕಳೆದ ಎರಡು ಮೂರದಿನದಿಂದ ಬರುತ್ತಲೇ ಇತ್ತು ಆದರೆ ಭಾನುವಾರ ಸಂಜೆಯಿಂದ ಪ್ರಾರಂಭವಾದ ಮಳೆ ಎಡಬಿಡದೆ ರಾತ್ರಿ ಪೂರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ನೆರವಾಗಿದೆ.
|
![]() |
ಹುಳಿಯಾರಿನ ಅಪ್ಪಸಾಬಿ ಅಣೆ ಕೋಡಿ ಬಿದ್ದು ಹರಿಯುತ್ತಿರುವುದು |
ಅಪ್ಪಸಾಬಿ ಅಣೆ : ಪಟ್ಟಣಕ್ಕೆ ಹೊಂದಿಕೊಂಡಿರುವ ಅಪ್ಪಸಾಬಿ ಅಣೆ ನಾಲ್ಕು ವರ್ಷದ ನಂತರ ಭಾನುವಾರ ರಾತ್ರಿ ಮಳೆಗೆ ಕೋಡಿಬಿದಿದ್ದು ಮುಂಜಾನೆಯಿಂದ ಇದನ್ನು ನೋಡಲು ಜನಜಾತ್ರಯೇ ಉಂಟಾಗಿದೆ. ಈ ಅಣೆ ತುಂಬ ಬೇಕೆಂದರೆ ಸಮೀಪದ ತಿರುಮಲಾಪುರ ಕೆರೆ ಕೋಡಿಬಿದ್ದು ಅಲ್ಲಿಂದ ಹರಿಯುವ ನೀರಿನಿಂದ ಈ ಅಣೆಗೆ ನೀರು ಶೇಖರಣೆಯಾಗುತ್ತಿತ್ತು. ಈಗ ತಿರುಮಲಾಪುರ ಕೆರೆ ಕೋಡಿ ಬೀಳದಿದ್ದರೂ ಸಹ ಸುತ್ತಮುತ್ತಲ ಹೊಲಗಳ ಭಾಗದ ಹರಿವಿನಿಂದಾಗಿ ಈಅಣೆ ಕೋಡಿ ಬಿದ್ದಿದೆ. ಕೋಡಿ ನೀರಿನಲ್ಲಿ ಮಹಿಳೆಯರು, ಯುವಕರೆನ್ನದೆ ಆಟವಾಡುತ್ತಿದ್ದು . ಈ ಕೋಡಿ ನೀರು ಮುಂದೆ ಹರಿದು ಬೋರನಕಣಿವೆ ಸೇರಲಿದೆ.
ದೊಡ್ಡಬಿದರೆ ಕೆರೆ : ಹೋಬಳಿಯ ದೊಡ್ಡಬಿದರೆ ಕೆರೆಗೆ ಕಳೆದ ಮೂರ್ನಾಲ್ಕು ದಿನದ ಹಿಂದೆ ಬಂದ ಮಳೆಗೆ ಕೆರೆಯ ಗುಂಡಿಗಳು ತುಂಬಿದ್ದವು ಆದರೆ
ಭಾನುವಾರ ರಾತ್ರಿ ಬಂದ ಮಳೆಯಿಂದಾಗಿ ಈ ಕೆರೆಯು ಕೋಡಿಬಿದ್ದಿರುವುದು ಗ್ರಾಮಸ್ಥರಲ್ಲಿ ಸಂತಸ ಹಾಗೂ ರೈತರಲ್ಲಿ ಭತ್ತ ಬೆಳೆಯುವ ಕನಸನ್ನು ಬಿತ್ತಿದೆ. ಕೆರೆ ಕೋಡಿ ಬಿದ್ದಿದನ್ನ ಕಂಡ ಮಹಿಳೆಯರು ಕೆರೆಗೆ ಗಂಗಮ್ಮನ ಪೂಜೆ ಸಹ ಮಾಡಿದ್ದು, ಕೋಡಿ ಮುಖಾಂತರ ಹೊರಹೋಗುವ ನೀರು ಪೋಚಕಟ್ಟೆ ಕೆರೆ ಮುಖಾಂತರ ಬೋರನಕಣಿವೆಗೆ ತಲುಪಲಿದೆ.
ಮಳೆಯಿಂದಾಗಿ ಅವಳಗೆರೆ ಕೆರೆ, ಭೈರಾಪುರ ಕೆರೆ, ದೊಡ್ಡಬಿದರೆ ಕೆರೆ, ಪೋಚಗಟ್ಟೆಕೆರೆ, ಅಪ್ಪಸಾಬಿ ಅಣೆ , ಬಿದರೆಹೊಳೆಯಲ್ಲಾ ತುಂಬಿದ್ದು ಭೀಮಮ್ಮನ ಗುಡಿ ಎದುರಿನ ರಸ್ತೆಯ ಮೇಲೆ ಅಡ್ಡಲಾಗಿ ಸೋಮವಾರ ಬೆಳಿಗ್ಗಿನಿಂದ ಸಂಜೆಯವರೂ ನೀರು ಹರಿಯುತ್ತಿದ್ದು, ನೀರೆಲ್ಲಾ ಬೋರನಕಣಿವೆ ಜಲಾಶಯ ಸೇರಲಿದೆ.
ಬೋರನಕಣಿವೆಗೆ ನೀರು : ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಿಲ್ಲದೆ ಬರಿದಾಗಿದ್ದ ಬೋರನಕಣಿವೆ ಜಲಾಶಯಕ್ಕೆ ಈಗ ಐದಾರು ಅಡಿಯಷ್ಟು ನೀರು ಶೇಖರಣೆಯಾಗಿದೆ. ಕೋಡಿ ಬಿದ್ದು ನೀರು ಹರಿದ ಪರಿಣಾಮ ಹಾಗೂ ಪಿಕಫ್‍ಗಳೆಲ್ಲಾ ತುಂಬಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಡ್ಯಾಂನತ್ತ ಬಂದು ಸಂಗ್ರಹಣೆಯಾಗಿದೆ.
ಒಟ್ಟಾರೆ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳಿಂದ ಕಂಡಿರದಂತ ಮಳೆಯಾಗಿದ್ದು , ನೀರಿಲ್ಲದೆ ಸುಳಿಯಲ್ಲಾ ಒಣಗಿ ಹೋಗಿದ್ದ ತೆಂಗಿಗೆ ಹೆಚ್ಚಿನ ಅನುಕೂಲವಾಗಿದೆ. ಕೆರೆಗಳಲ್ಲಿ ನೀರಿಲ್ಲದೆ ಅಂತರ್ಜಲವೆಲ್ಲಾ ಬತ್ತಿ, ಬೋರ್ ಗಳೆಲ್ಲಾ ನಿಂತುಹೋಗಿದ್ದವು, ಈಗ ಕೆರೆಕಟ್ಟೆ ತುಂಬಿರುವುದರಿಂದ ಕೊಳವೆಬಾವಿಯಲ್ಲಿ ಪುನ: ನೀರು ಬರುತ್ತವೆ ಎಂಬ ಅಶಾಭಾವನೆ ರೈತರಲ್ಲಿ ಮೂಡಿದೆ. ಹುಳಿಯಾರಿಗೆ ಕುಡಿಯುವ ನೀರು ಬೋರನಕಣಿವೆಯಿಂದ ಸರಬರಾಜಾಗುತ್ತಿದ್ದು ಬೋರನಕಣಿವೆ ತುಂಬಿದಲ್ಲಿ ಮುಂದಿನ ಐದಾರು ವರ್ಷ ಪಟ್ಟಣದ ನೀರಿನ ಸಮಸ್ಯೆ ತೀರಲಿದೆ ಎಂಬ ಸಂತಸ ಪಟ್ಟಣಿಗರಲ್ಲಿ ಮನೆ ಮಾಡಿದರೆ, ಮೀನುಗಾರಿಕೆ ನಡೆಸಬಹುದು ಎಂಬುದು ಜಯಚಂದ್ರನಗರ ನಿವಾಸಿಗಳ ನಂಬಿಕೆಯಾಗಿದೆ.
![]() |
ಹುಳಿಯಾರು ಸಮೀಪದ ಭೀಮಮ್ಮನ ಗುಡಿ ಎದುರಿನ ಹುಳಿಯಾರು-ಶಿರಾ ರಸ್ತೆಯಲ್ಲಿ ಸೊಮಜ್ಜನಪಾಳ್ಯದ ಕಡೆಯಿಂದ ಬರುತ್ತಿರುವ ನೀರು ಹರಿಯುತ್ತಿದ್ದು ಆ ನೀರ ನಡುವೆಯೇ ವಾಹನಗಳು ಚಲಿಸುತ್ತಿದ್ದವು. |
ಮುಂಗಾರಲ್ಲಿ ರೈತರ ಕೈಹಿಡಿಯಬೇಕಾಗಿದ್ದ ಮಳೆಗಳು ಬಾರದೆ ರೈತರನ್ನು ಕಂಗಾಲಾಗುವಂತೆ ಮಾಡಿದ್ದವು. ಆದರೆ ಹಿಂಗಾರಿನ ಮೊದಲಲ್ಲಿ ಬರುವ, ಹೆಚ್ಚಿನ ನೀರು ಶೇಖರಣೆಗೆ ಕಾರಣವಾಗುವ ಮಳೆಗಳು ಸಹ ತಕ್ಕಮಟ್ಟಿಗೆ ಬಾರದೆಯಿದ್ದು ರೈತರಲ್ಲಿ ಈ ವರ್ಷವೂ ಬರಗಾಲ ಆವರಿಸಿ ಕುಡಿಯಲು,ಜಾನುವಾರುಗಳಿಗೆ ನೀರಿಲ್ಲದಂತಾಗುತ್ತದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿತ್ತು. ಇದೀಗ ಸ್ವಾತಿ ಮಳೆ ಉತ್ತಮವಾಗಿ ಬಂದಿರುವುದು ರೈತರಲ್ಲಿ ಮೂಡಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಸುರಿದಿದ್ದು, ಈ ವರ್ಷ ನೆಮ್ಮದಿಯಿಂದಿರಬಹುದು ಎಂಬ ಭರವಸೆ ಮೂಡಿಸಿದೆ.
-------
ಈ ಸಲದ ಸ್ವಾತಿಮಳೆ ಚೆನ್ನಾಗಿ ಬಂದಿದ್ದು , ಹೊಲ,ತೋಟ-ತುಡಿಕೆಗಳೆಲ್ಲಾ ತುಂಬಿ ತೋಟ-ಹೊಲದಲ್ಲಿ ಓಡಾಡಲು ಆಗುತ್ತಿಲ್ಲ ಭೂಮಿ ಚೆನ್ನಾಗಿ ನೀರು ಕುಡಿದಿದ್ದು ಕಾಲಿಳಿಯುವಂತಾಗಿದೆ. ಈ ಹಿಂಗಾರುಮಳೆ ರಾಗಿ ಬಿತ್ತಿದಾಗಲೇ ಬಂದಿದ್ದರೆ ರಾಗಿ ಹೆಚ್ಚಿನ ಪ್ರಮಾಣದಲ್ಲಾಗುತ್ತಿತ್ತು : ಸೋಮಶೇಖರಯ್ಯ ರೈತ.
----------
ಭಾನುವಾರ ಸುರಿದ ಮಳೆಯಿಂದ ತೋಟ,ಕೆರೆಗಳೆಲ್ಲಾ ತುಂಬಿ ಕೋಡಿ ಬಿದ್ದಿದ್ದು, ನೀರಿಲ್ಲದೆ ಸೊರಗಿದ್ದ ತೆಂಗಿಗೆ ನೆರವಾದಂತಾಗಿದ್ದು, ಮುಂದಿನ ಮಳೆಗಳು ಸಹ ಇದೇ ರೀತಿ ಬಂದರೆ ಇನ್ನೂ ಉತ್ತಮ : ರಮೇಶ್ , ದೊಡ್ಡಬಿದರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ