ಹುಳಿಯಾರು ಹೋಬಳಿಯ ದೊಡ್ಡಬಿದರೆ ಕೆರೆಯ ತೂಬಲ್ಲಿ ನೀರು ಸೋರಿಕೆಯಾಗಿ ಗದ್ದೆಬಯಲಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದು ಈ ಬಗ್ಗೆ ಯಾರೊಬ್ಬರು ಗಮನ ನೀಡಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ತೂಬಿನ ಮೂಲಕ ವ್ಯರ್ಥವಾಗಿ ಹೊರ ಹೋಗುತ್ತಿರುವ ನೀರು. |
ತೂಬಿನ ಕಾಲುವೆ ಮೂಲಕ ಹರಿದ ನೀರು ಗದ್ದೆಯೆಲ್ಲಾ ಆವರಿಸಿರುವುದು |
ಕಳೆದ ನಾಲ್ಕೈದು ವರ್ಷದಿಂದ ಬರಿದಾಗಿದ್ದ ದೊಡ್ಡಬಿದರೆ ಕೆರೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸೋಮವಾರದಂದು ಕೆರೆ ಕೋಡಿ ಬಿದ್ದಿದ್ದು ಇಲ್ಲಿನ ಜನರಲ್ಲಿ ಹರ್ಷವನ್ನುಂಟು ಮಾಡಿತ್ತು. ಆದರೆ ಈಗ ಅದರ ಬೆನ್ನಲೇ ತೂಬಿನ ಮೂಲಕ ನೀರು ಸೋರಿಕೆಯಾಗುತ್ತಿದ್ದು, ಒಂದುವಾರದಿಂದ ನೀರು ಹರಿಯುತ್ತಲೇ ಇದ್ದು ಕೆರೆನೀರು ವ್ಯರ್ಥವಾಗಿ ಹರಿಯುತ್ತಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ತೂಬಿನಿಂದ ಹೊರ ಬರುವ ನೀರು ಗದ್ದೆಬಯಲಿನ ಮೂಲಕ ಹರಿದು ಪೋಚಕಟ್ಟೆ ಕೆರೆಗೆ ಹೋಗುತ್ತಿರುವುದರಿಂದ ದಿನೇ ದಿನೇ ಕೆರೆಯಲ್ಲಿನ
ನೀರಿನ ಪ್ರಮಾಣ ಕ್ಷಿಣಿಸುತ್ತಿದೆ, ಹೊರ ಹೋಗುವ ನೀರಿನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ನೀರುಗಂಟಿ ಮುಖಾಂತರ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿಗಳು.
ಬೇಸಿಗೆ ಸಮಯದಲ್ಲಿ ಕೆರೆಏರಿ ಹಾಗೂ ತೂಬುಗಳ ದುರಸ್ಥಿ ಕೆಲಸ ಮಾಡಬೇಕಾಗಿದ್ದ ನೀರಾವರಿ ಇಲಾಖೆಯವರು ಯಾವುದೇ ಕಾರ್ಯಗಳನ್ನು ಮಾಡದೆ ಕೈಕಟ್ಟಿ ಕೂತಿದ್ದರ ಪರಿಣಾಮ ಇಂತಹ ಅವಗಢಗಳು ಉಂಟಾಗುತ್ತಿವೆ. ಇದರಿಂದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗುವಂತಾಗಿದೆ.
ಇಲಾಖೆ ನಿರ್ಲಕ್ಷ: ನೀರಾವರಿ ಇಲಾಖೆಯವರ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದ್ದು ಹೋಬಳಿಯಲ್ಲಿನ ಅನೇಕ ಕೆರೆಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ ಜೋಡಿತಿರುಮಲಾಪುರ ಕೆರೆಯ ತೂಬನ್ನು ದುರಸ್ಥಿ ಮಾಡದ ಪರಿಣಾಮ ಕೆರೆಗೆ ಬರುವ ನೀರೆಲ್ಲಾ ತೂಬಿನ ಮೂಲಕ ವ್ಯರ್ಥವಾಗುವಂತಾಗಿದೆ. ಕೆರೆ ಅಭಿವೃದ್ದಿಗೆ ಅಂತ ಲಕ್ಷಾಂತರ ರೂ ವೆಚ್ಚಮಾಡಿರುವುದಾಗಿ ತಿಳಿಸುತ್ತಾರಾದೂ ಯಾವುದೇ ಕಾರ್ಯಗಳು ಆಗಿರುವುದು ಕಂಡುಬರುತ್ತಿಲ್ಲ.
ಕೆರೆಯಲ್ಲಿ ನೀರು ಶೇಖರಣೆಯಾಗುವುದರಿಂದ ಬೇಸಿಗೆಕಾಲದಲ್ಲಿ ದನಕರುಗಳಿಗೆ ನೀರುಕುಡಿಸಲು ನೆರವಾಗುವುದರ ಜೊತೆಗೆ ಅಂತರ್ಜಲವೃದ್ದಿಗೆ ಸಹಕಾರಿಯಾಗಲಿದೆ. ಆದರೆ ಈರೀತಿ ತೂಬಿನ ಮೂಲಕ ನೀರು ಹರಿದರೆ ಯಾವುದಕ್ಕೂ ಪ್ರಯೋಜನವಿಲ್ಲದಂತಾಗುತ್ತದೆ. ಈಗಲಾದರೂ ಇದಕ್ಕೆ ಸಂಬಂಧಪಟ್ಟವರು ಎಚ್ಚೆತು ತೂಬಿನ ದುರಸ್ಥಿ ಕಾರ್ಯ ಮಾಡುವ ಮೂಲಕ ಕೆರೆನೀರು ಪೋಲಾಗುವುದನ್ನು ತಪ್ಪಿಸಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ