ಹುಳಿಯಾರು : ಸಮೀಪದ ಜೋಡಿತಿರುಮಲಾಪುರ ಕೆರೆಯಲ್ಲಿನ ತೂಬುಗಳ ಸೂಕ್ತ ನಿರ್ವಹಣೆಯಿಲ್ಲದೆ ಕೆರೆಗೆ ಬಂದಿದ್ದ ಅಲ್ಪಸ್ವಲ್ಪ ನೀರು ಕೂಡ ಕಳೆದೆರಡು ದಿನ ತೂಬಿನ ಮೂಲಕ ಹರಿದುಪೋಲಾಗಿದ್ದು ಈ ಬಗ್ಗೆ ನೀರಾವರಿ ಇಲಾಖೆಯವರ ನಿರ್ಲಕ್ಷ ಎದ್ದುಕಾಣುತ್ತಿದೆ.
ಕೆರೆ ತೂಬಿನಲ್ಲಿ ಪ್ಲೇಟ್ ಕಾಣೆಯಾಗಿರುವುದು. |
ಜೋಡಿತಿರುಮಲಾಪುರಕ್ಕೆ ಈ ಕೆರೆಯ ನೀರೆ ಆಸರೆಯಾಗಿದ್ದು, ಈ ಕೆರೆ ತುಂಬಿದಲ್ಲಿ ಈ ಭಾಗದ ಜನರ ಭತ್ತ ಬೆಳೆಯುವ ಕನಸು ಚಿಗುರೊಡೆಯುತ್ತದೆ. ಅಲ್ಲದೆ ಅಂತರ್ಜಲದ ಮಟ್ಟ ಏರಿಕೆಯಾಗಿ ಭತ್ತಿಹೋಗಿರುವ ಕೊಳವೆಬಾವಿಗಳು ಕೂಡ ಉತ್ತಮಗೊಳ್ಳುತ್ತದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಕೆರೆಗೆ ನೀರು ಬರುತ್ತಿದ್ದು, ಕೆರೆ ಒಳಗಿನ ಗುಂಡಿಗೊಟರುಗಳೆಲ್ಲಾ ತುಂಬಿದ್ದು ಇನ್ನೊಂದೆರಡು ದಿನ ಭರ್ತಿ ಮಳೆಯಾದಲ್ಲಿ ಕೆರೆ ತುಂಬುವ ಸ್ಥಿತಿಯಲ್ಲಿದೆ . ಇಂತಹ ಸಂದರ್ಭದಲ್ಲಿ ಕೆರೆ ತೂಬೂ ಸರಿಯಾಗಿ ನಿರ್ವಹಿಸದ ಪರಿಣಾಮ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ತೊಡಕಾಗಿ ಪರಿಣಮಿಸಿದೆ.
ಹೋಬಳಿಯಲ್ಲಿ ಉತ್ತಮ ಮಳೆಯಾದಲ್ಲಿ ಗೋಪಾಲಪುರದ ನಂತರ ಮೊದಲಿಗೆ ತುಂಬುತ್ತಿದ್ದ ಕೆರೆ ಇದಾಗಿದ್ದು ಈ ಹಿಂದೆ ವರ್ಷ ವರ್ಷವೂ ತುಂಬುತ್ತಿದ್ದ ಕೆರೆಯಿಂದಾಗಿ ಈ ಭಾಗ ಭತ್ತದ ಬೆಳೆಗೆ ಹೆಸರುವಾಸಿಯಾಗಿತ್ತು. ಕಳೆದ ನಾಲ್ಕುವರ್ಷಗಳ ಹಿಂದೆ ತುಂಬಿದ ಕೆರೆ ಇತ್ತೀಚೆಗೆ ಒಣಗಿ ನಿಂತಿತ್ತು. ಕೆರೆಯಲ್ಲಿ 5 ತೂಬುಗಳಿದ್ದು, ಕೆರೆ ಉಸ್ತುವಾರಿಗೆ ಯಾರು ಇಲ್ಲದ್ದರಿಂದ ಕೆಲವೊಂದು ತೂಬುಗಳ ಕೊಂತದ ರಾಡು ಮತ್ತು ಪ್ಲೇಟನ್ನು ಕದೊಯ್ದಿದ್ದರು ಸಹ ಇಲಾಖೆಯವರು ಇದುವರಗೂ ಈ ಬಗ್ಗೆ ಗಮನಹರಿಸಿರಲಿಲ್ಲ.
ಭಾನುವಾರ ಬಂದ ಉತ್ತಮ ಮಳೆಯಿಂದಾಗಿ ಕೆರೆಗೆ ನೀರಿನ ಹರಿವು ಹೆಚ್ಚಿ ಕೆರೆ ತುಂಬುವ ಲಕ್ಷಣಗಳು ಗೋಚರಿಸಿದರೆ ಮತ್ತೊಂದೆಡೆ ತೂಬಿನ ಮೂಲಕ ಸ್ವಲ್ಪ ಮಟ್ಟಿನ ನೀರು ಹರಿದು ವ್ಯರ್ಥವಾಯಿತು. ಇದನ್ನು ಆಕೂಡಲೇ ಗಮನಿಸಿದ ಗ್ರಾಮಸ್ಥರು ತಾತ್ಕಾಲಿಕವಾಗಿ ಮರಳಿನ ಚೀಲ ಮತ್ತೊಂದು ಹಾಕಿ ತೂಬಿನಿಂದ ಹರಿದು ಹೋಗುವ ನೀರನ್ನು ತಡೆದಿದ್ದಾರೆ.
ಸದ್ಯ ಮಳೆ ಬಿಡುವು ಕೊಟ್ಟಿದ್ದು ಕೆರೆಯಲ್ಲಿ ತೂಬಿನ ಬಳಿ ನೀರಿನ ಪ್ರಮಾಣ ಕಡಿಮೆಯಿದ್ದು ಈ ಕೂಡಲೇ ಅಧಿಕಾರಿಗಳು ತೂಬುಗಳನ್ನು ಸರಿ ಮಾಡುವ ಕಾರ್ಯವನ್ನು ಕೈಗೊಳ್ಳಬೇಕಿದೆ ಇಲ್ಲವಾದರೆ ಮಳೆಬಂದು ತೂಬಿನ ಬಳಿ ನೀರು ನಿಂತು ಯಾವುದೇ ದುರಸ್ಥಿಕಾರ್ಯ ಮಾಡಲು ಅವಕಾಶವಾಗುವುದಿಲ್ಲ.
ಜೋಡಿತಿರುಮಲಾಪುರ ಕೆರೆಏರಿಮೇಲೆ ಮುಳ್ಳುಗಿಡಗಳು ದಟ್ಟವಾಗಿ ಬೆಳೆದು ಸಂಚಾರಕ್ಕೆ ಅಡ್ಡಿಯಾಗಿರುವುದು. |
ಕೆರೆಏರಿ ತುಂಬೆಲ್ಲಾ ಜಾಲಿಗಿಡ : ಜನಸಂಚಾರಕ್ಕೆ ಯೋಗ್ಯವಾಗಿದ್ದ ಹಾಗೂ ವಾಯುವಿಹಾರಕ್ಕೆ ಸೂಕ್ತವಾಗಿದ್ದ ತಿರುಮಲಾಪುರ ಕೆರೆಏರಿ ಮೇಲೆ ಜಾಲಿಗಿಡ , ಪೊದೆ, ಬೇಲಿ ಬೆಳೆದು ಇಲ್ಲಿ ತಿರುಗಾಡುವವರಿಗೆ ಹೆಚ್ಚಿನ ತೊಂದರೆಯಾಗಿದೆ. ಕೆರೆ ಅಕ್ಕಪಕ್ಕದ ತೋಟಗಳಿಗೆ ಹೋಗುವವರಿಗೂ ಸಹ ತೊಂದರೆಯಾಗಿದೆ. ಕಳೆದ ಕೆಲ ದಿನಗಳಹಿಂದೆ ಸೂರಗೊಂಡನಹಳ್ಳಿ ಕಡೆಯ ಕೆರೆಕೋಡಿ ಕಡೆಯಿಂದ ಅಡ್ಡೇರಿಯವರೆಗೆ ಮಾತ್ರ ಮುಳ್ಳುಗಿಡಗಳನ್ನು ಅಲ್ಲಲ್ಲಿ ತೆರವು ಮಾಡಿ ಅಲ್ಲಿಂದ ಮುಂದೆ ಹುಳಿಯಾರುಕಡೆಯ ಕೋಡಿಯವರೆಗಿನ ಏರಿ ಮೇಲಿನ ಒಂದು ಗಿಡವನ್ನು ತೆರವು ಮಾಡದೆ ಕೈಬಿಟ್ಟಿದ್ದಾರೆ,
ಕೆರೆತುಂಬಿದಾಗ ಮಾತ್ರ ನಾಲ್ಕು ತಿಂಗಳ ಕಾಲ ನೀರುಗಂಟಿಯನ್ನು ನೇಮಕ ಮಾಡುವ ಇಲಾಖೆ ನಂತರ ವರ್ಷಾನುಗಟ್ಟಲೇ ಇತ್ತ ತಿರುಗಿ ನೋಡದಿರುವುದು ಸಮಸ್ಯೆಗೆ ಕಾರಣವಾಗಿದೆ.
ಒಂದೆಡೆ ತೂಬುಗಳ ನಿರ್ವಹಣೆಯಿಲ್ಲದೆ ಕೆರೆಯಲ್ಲಿ ನಿಲ್ಲಬೇಕಾಗಿದ್ದ ನೀರು ವ್ಯರ್ಥವಾಗುತ್ತಿದ್ದರೆ, ಕೆರೆ ಏರಿ ಮೇಲೆ ದಟ್ಟವಾಗಿ ಬೆಳೆದಿರುವ ಮುಳ್ಳುಗಿಡಗಳು ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸ್ಥಳಿಯರಲ್ಲಿ ಹಾಗೂ ಇಲ್ಲಿ ವಾಯುವಿಹಾರ ಮಾಡುವವರಲ್ಲಿ ಇಲಾಖೆಯ ಬಗ್ಗೆ ಬೇಸರ ಮೂಡುವಂತೆ ಮಾಡಿದೆ.
ಇನ್ನಾದರೂ ಕೆರೆಅಭಿವೃದ್ದಿಗೆ ಸಂಬಂಧಿಸಿದಂತ ನೀರಾವರಿ ಇಲಾಖೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಗಲಿ ಎಂಬುದು ಇಲ್ಲಿನ ರೈತರ,ಸಾರ್ವಜನಿಕರ, ಅಚ್ಚುಕಟ್ಟುದಾರರ ಒಕ್ಕೊರಲಿನ ಬೇಡಿಕೆಯಾಗಿದೆ. ಈ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಾರೋ,ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
__________
ಕೆರೆ ದುವ್ರ್ಯವಸ್ಥೆ ನೋಡಿದರೆ ಕಳೆದೆರಡು ವರ್ಷಗಳ ಹಿಂದೆ ಲಕ್ಷಾಂತರ ರೂ ಕೆರೆ ಅಭಿವೃದ್ಧಿಗೆ ಖರ್ಚು ಮಾಡಿದ್ದಾಗಿ ಹೇಳುವ ಇಲಾಖೆ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಕೆರೆಗೆ ನೀರು ಬಂದಾಗ ಎಚ್ಚೆತ್ತುಕೊಳ್ಳುವ ಇಲಾಖೆ, ನೀರು ಬರುವ ಮೊದಲೇ ಕಾಮಗಾರಿಗಳನ್ನು ನಡೆಸಿದರೆ ಒಳಿತು: ಮೋಹನ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ