ಹುಳಿಯಾರು ಹೋಬಳಿಯ ದಮ್ಮಡಿಹಟ್ಟಿಯಲ್ಲಿ ಈರಬೊಮ್ಮಕ್ಕ ದೇವಿಯ ಕಾರ್ತಿಕದ ಅಂಗವಾಗಿ ಪೂಜಾರಿಯಿಂದ ಈಚಲು ಸೇವೆ ನೆರವೇರಿತು.
ಈರಬೊಮ್ಮಕ್ಕನ ಈಚಲು ಸೇವೆಗೆ ಮರ ಹತ್ತುವ ಮುನ್ನಾ ನಡೆದ ಮಣೇವು ಸೇವೆ. |
ಕಾರ್ತೀಕದ ಮೊದಲ ದಿನವಾದ ಪಾಡ್ಯ ದಮ್ಮಡಿಹಟ್ಟಿಯಲ್ಲಿ ವಿಶೇಷ ದಿನವಾಗಿದ್ದು , ಈರಬೊಮ್ಮಕ್ಕನ ಕೊಂಡ ಸೇವೆ ನಡೆಯುವುದಲ್ಲದೆ, ದೇವಿಯ ಅವಾಹನೆಗೆ ಒಳಗಾದ ಭಕ್ತನೊಬ್ಬ ಈಚಲು ಮರ ಏರುವ ಸೇವೆ ಸಹ ನಡೆಯುತ್ತದೆ. ಈರಬೊಮ್ಮಕ್ಕ ರಾಂಪುರ ಬಳಿಯ ಶಶಿವಾಳದ ದೇವತೆಯಾಗಿದ್ದು
ಅನಾದಿಕಾಲದಿಂದಲೂ ದಮ್ಮಡಿಹಟ್ಟಿಯಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬಂದು ನೆಲೆಸಿರುವ ಅಮ್ಮನವರಿಗಾಗಿ ಭಕ್ತಾಧಿಗಳೆಲ್ಲಾ ಸೇರಿ ಗ್ರಾಮದಲ್ಲಿ ದೇವಾಲಯಕಟ್ಟಿಸಿದ್ದು , ಅಮ್ಮನವರು ಹೇಳುವ ಹೇಳಿಕೆಗಳು ಸತ್ಯವಾದವೆಂದು ನಂಬಿರುವ ಅನೇಕ ಮಂದಿ ಇಲ್ಲಿಗೆ ನಡೆದುಕೊಳ್ಳುತ್ತಾರೆ.
ಕಾರ್ತೀಕದ ಸಮಯದಲ್ಲಿ ಕಳೆದ ಮೂರುವರ್ಷದಿಂದ ಈ ಆಚರಣೆ ನಡೆಸಿಕೊಂಡು ಬರುತ್ತಿದ್ದು, ಅಂತಯೇ ಈಬಾರಿಯೂ ಸಹ ಇದಕ್ಕೆ ಸಿದ್ದತೆ ನಡೆದಿದ್ದು , ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ ಹಾಗೂ ಮಲ್ಲಮ್ಮ ದೇವತೆಗಳ ಸಮ್ಮುಖದಲ್ಲಿ ಅಮ್ಮನವರ ಆಹಾವನೆಯಾದ ಪೂಜಾರಿಗಳಿಬ್ಬರು ಈಚಲು ಮರವನ್ನೇರುತ್ತಾರೆ.
ದೇವಿ ಆವಾಹನೆಯಾದ ಪೂಜಾರಿಗಳು ಈಚಲು ಮರ ಏರುತ್ತಾರೆ. ಅಂತಯೇ ಅದಕ್ಕೆ ಬೇಕಾದ ಪೂರಕ ಸಿದ್ದತೆಯನ್ನು ಗ್ರಾಮದವರು ಮಾಡಿಕೊಳ್ಳುತ್ತಾರೆ. ದಮ್ಮಡಿಹಟ್ಟಿಯ ಈರಬೊಮ್ಮಕ್ಕ ದೇವಿ ಹಾಗೂ ಮಲ್ಲಮ್ಮನವರನ್ನು ಪೂಜಿಸಿ ನಡೆಮುಡಿಯಲ್ಲಿ ಆರತಿ ಹಾಗೂ ಮಂಗಳವಾದ್ಯದೊಂದಿಗೆ ಲಿಂಗಪ್ಪನಪಾಳ್ಯ ಹಾಗೂ ಗೌಡಗೆರೆ ಮಧ್ಯದಲ್ಲಿರುವ ಈಚಲು ಮರವಿರುವ ಕೊಂಡದೋಣಿ ಸ್ಥಳದ ಬಳಿಗೆ ಕರೆತರುತ್ತಾರೆ. ನಂತರ ಅಲ್ಲಿ ಪೂಜೆ, ಪನಿವಾರ, ಮಣೇವು ಸಲ್ಲಿಸಿದ ಬಳಿಕ ಅಮ್ಮನವರ ಅವಾಹನೆಯಾದ ಇಬ್ಬರು ಪೂಜಾರಿಗಳು ಭಕ್ತರ ಉದ್ಘೋಷ ಹಾಗೂ ವಾದ್ಯದ ನಾದದೊಂದಿಗೆ ಮುಳ್ಳಿನಿಂದ ಅವೃತವಾದ ಈಚಲು ಮರವನ್ನು ಸರಸರನೇ ಏರಿ ಅದರ ತುದಿವರೆಗೆ ಹತ್ತಿ ಜನರತ್ತ ಒಮ್ಮೆ ನೋಡಿ ದೇವಿಯ ಜೈಕಾರ ಹಾಕಿ ಭಕ್ತರಿಗೆ ಆಶಿರ್ವದಿಸಿ ಬಳಿಕ ವಾಪಸ್ಸ್ ಇಳಿದು ಅಮ್ಮನವರ ತೀರ್ಥ ಪ್ರಸಾದ ಸ್ವೀಕರಿಸುವ ಮೂಲಕ ಕೊನೆಗೊಳ್ಳುತ್ತದೆ. ಮುಳ್ಳಿನಿಂದ ಅವೃತವಾದ ಈಚಲು ಮರ ಹತ್ತುವ ಕೌತುಕವನ್ನು ನೋಡಲು ಗೌಡಗೆರೆ,ದಮ್ಮಡಿಹಟ್ಟಿ,ಕುರಿಹಟ್ಟಿ,ಲಿಂಗಪ್ಪನಪಾಳ್ಯ ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಅಪಾರ ಸಂಖ್ಯೆ ಭಕ್ತರು ಇಲ್ಲಿ ಸೇರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ