ಸ್ವಚ್ಚ ಭಾರತ ಅಭಿಯಾನದಡಿ ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಮಕ್ಕಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡರೆ, ವಾಸವಿ ಶಾಲೆಯ ಮಕ್ಕಳು ರಾಜ್ ಕುಮಾರ್ ರಸ್ತೆಯಲ್ಲಿ ಶ್ರಮದಾನ ನಡೆಸಿದರು.
ಹುಳಿಯಾರು ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾವಾರಿಧಿ ಶಾಲಾಮಕ್ಕಳು ಕಾರ್ಯದರ್ಶಿ ಕವಿತಾಕಿರಣ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. |
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯ ಮಕ್ಕಳು ಕಾರ್ಯದರ್ಶಿ ಕವಿತಾ ನೇತೃತ್ವದಲ್ಲಿ ಹುಳಿಯಾರು ಸ್ವಚ್ಚತೆ ವಿದ್ಯಾವಾರಿಧಿ ಕನಸು ಎಂದು ಘೋಷವಾಕ್ಯ ಕೂಗುತ್ತಾ ಸ್ಚಚ್ಚತಾ ಆಂದೋಲನ ನಡೆಸಿದರು. |
ಗಾಂಧಿಜೀಯವರ ಜನ್ಮ ದಿನದಂದು ಸ್ವಚ್ಚ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರಮೋದಿ ಕರೆ ನೀಡಿದ್ದರ ಹಿನ್ನಲೆಯಲ್ಲಿ ಪ್ರತಿ ಶಾಲೆಗಳಲ್ಲೂ ಮಕ್ಕಳು ಶ್ರಮದಾನಕ್ಕೆ ಮುಂದಾಗಿದ್ದರು. ಪ್ರತಿ ಶಾಲೆಗಳಲ್ಲಿ ಮಕ್ಕಳು ಶಾಲಾವರಣದ ಸ್ವಚ್ಚತೆ ಮಾಡಿಕೊಂಡರೆ ಪಟ್ಟಣದ ವಿದ್ಯಾವಾರಿಧಿ ಶಾಲೆ ಹಾಗೂ ವಾಸವಿ ಶಾಲಾ ಮಕ್ಕಳು ವಿಭಿನ್ನವಾಗಿ ಪಟ್ಟಣದ ಬಸ್ ನಿಲ್ದಾಣ ಹಾಗೂ ರಸ್ತೆಯಲ್ಲಿ ಬಿದ್ದ ಕಸಕಡ್ಡಿಯನ್ನು ಬೇರೆಡೆ ತೆರವು ಮಾಡುವ ಮೂಲಕ ತಮ್ಮ ಶ್ರಮದಾನ ಕೈಗೊಂಡರು.
ಶಾಲೆಯಲ್ಲಿ ಗಾಂಧಿಜಯಂತಿ ಮುಗಿಸಿಕೊಂಡು ನಂತರ ಬಸ್ ನಿಲ್ದಾಣದಲ್ಲಿಗೆ ಆಗಮಿಸಿದ ವಿದ್ಯಾವಾರಿಧಿ ಶಾಲಾಮಕ್ಕಳು "ಹುಳಿಯಾರಿನ ಸ್ವಚ್ಚತೆ ವಿದ್ಯಾವಾರಿಧಿಯ ಕನಸು" ಎಂಬ ಸ್ಲೋಗನ್ ಘೋಷಣೆ ಕೂಗುತ್ತಾ ಕೈಯ್ಯಲ್ಲಿ ಪೊರಕೆ, ಬಾಂಡ್ಲಿ, ಗುದ್ದಲಿ ಹಿಡಿದು ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ , ಪೇಪರ್, ಕೊಳೆತ ತ್ಯಾಜ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆರವು ಮಾಡಿ, ಟ್ಯಾಕ್ಟರ್ ಮೂಲಕ ಸಾಗಿಸಿದರು. ಅಲ್ಲದೆ ಮಳೆ ಬಂದಾಗ ಸದಾ ನೀರು ನಿಂತು ಕೆಸರು ಗದ್ದೆಯಾಗುತ್ತಿದ್ದ ಬಸ್ ನಿಲ್ದಾಣಕ್ಕೆ ಜೆಲ್ಲಿ,ಮಣ್ಣು ಹಾಕಿ ನೀರು ಹರಿದು ಹೋಗುವಂತಹ ವ್ಯವಸ್ಥೆ ಮಾಡಿದರಲ್ಲದೆ, ಅಲ್ಲಿನ ಅಂಗಡಿಯವರಿಗೆ ಸ್ವಚ್ಚತೆ ಕಾಪಾಡಿಕೊಳ್ಳುವುದರಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಿದರು. ಈ ಕಾರ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಕಾರ್ಯದರ್ಶಿ ಕವಿತಾಕಿರಣ್, ಪ್ರಾಂಶುಪಾಲ ರವಿ ಸೇರಿದಂತೆ ಶಾಲಾ ಶಿಕ್ಷಕರು ಇಂಬು ನೀಡಿದ್ದರಲ್ಲದೆ, ಗ್ರಾ.ಪಂ.ನ ಪಿಡಿಓ ಅಡವೀಶ್, ಕಂದಾಯ ಇಲಾಖೆಯ ನಾರಾಯಣ್, ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಗದೀಶ್, ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್,ವಸಂತಯ್ಯ, ಗ್ರಾ.ಪಂ.ಸದಸ್ಯರಾದ ರಾಘವೇಂದ್ರ ಸೇರಿದಂತೆ ಇತರರು ಮಕ್ಕಳೊಂದಿಗೆ ಕೈಜೋಡಿಸುವ ಮೂಲಕ ಸುಮಾರು ಎರಡು ತಾಸು ಸ್ವಚ್ಚತಾ ಕಾರ್ಯ ನಡೆಸಿದರು.
ವಾಸವಿ ಶಾಲೆಯ ಸ್ಕೌಟ್ ಅಧಿಕಾರಿ ಗಂಗಾಧರಯ್ಯ ನೇತೃತ್ವದಲ್ಲಿ ವಾಸವಿ ಶಾಲಾ ಮಕ್ಕಳು ರಾಜ್ ಕುಮಾರ್ ರಸ್ತೆಯಲ್ಲಿ ಸ್ವಚ್ಚತಾಕಾರ್ಯ ಪ್ರಾರಂಭಿಸಿ ರಸ್ತೆ ಬದಿಯಲ್ಲಿ,ಅಂಗಡಿ ಮುಂದೆ ಬಿದಿದ್ದ ಕಸವನ್ನು ಚೀಲಕ್ಕೆ ಹಾಕಿಕೊಳ್ಳುತ್ತಿದ್ದಲ್ಲದೆ ಸಾರ್ವಜನಿಕರಿಂದಲೂ ತ್ಯಾಜ್ಯವಸ್ತುಗಳನ್ನು ಪಡೆಯುತ್ತಾ ಅದನ್ನು ಬೇರೆಡೆಗೆ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮುಖ್ಯಶಿಕ್ಷಕ ರಮೇಶ್, ದೈಹಿಕಶಿಕ್ಷಕ ಮಂಜುನಾಥ್ ಹಾಗೂ ಸಹಶಿಕ್ಷಕರಿದ್ದರು.
ಎಪಿಎಂಸಿಯಲ್ಲಿ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾಜಿಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್ ಹಾಗೂ ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ,ಕಾರ್ಯದರ್ಶಿ ನಾಗರಾಜು ಸೇರಿದಂತೆ ಸದಸ್ಯರುಗಳೊಂದಿಗೆ ಮಾರುಕಟ್ಟೆಯ ಆವರಣದಲ್ಲಿನ ತ್ಯಾಜ್ಯವನ್ನು ತೆರವು ಗೊಳಿಸುವ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ