ಜಿಲ್ಲೆಯ ಕೆಲವು ಭಾಗಗಳಿಗೆ ಹೇವಾವತಿ ನದಿ ನೀರು ಹರಿಸುವ ವಿಚಾರದಲ್ಲಿ ಭೂಮಿ ಕಳೆದು ಕೊಳ್ಳಲಿರುವವರಿಗೆ ಕೇಂದ್ರ ಸರ್ಕಾರ ಪರಿಹಾರದ ಮೊತ್ತದ ಬಗ್ಗೆ ಈಗಾಗಲೇ ಘೋಷಿಸಿದ್ದು, ರಾಜ್ಯ ಸರ್ಕಾರ ಪರಿಹಾರ ವಿತರಿಸುವ ಬಗ್ಗೆ ಸೂಕ್ತ ಕಾನೂನು ರಚಿಸಿ ಶೀಘ್ರವೇ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕು ಎಂದು ರೈತಸಂಘದ ಜಿಲ್ಲಾ ಸಂಚಾಲಕ ತಿಮ್ಲಾಪುರ ಶಂಕರಣ್ಣ ತಿಳಿಸಿದರು.
ಹುಳಿಯಾರಿನ ಗಾಂಧಿಭವನದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಜಿಲ್ಲಾ ಸಂಚಾಲಕ ತಿಮ್ಲಾಪುರ ಶಂಕರಣ್ಣ ಹಸಿರು ಶಾಲು ಹೊದಿಸುವ ಮೂಲಕ ರೈತರನ್ನು ಸಂಘಕ್ಕೆ ನೊಂದಾಯಿಸಿಕೊಂಡರು. |
ಪಟ್ಟಣದ ಗಾಂಧಿಭವನದಲ್ಲಿ ನಡೆದ ತಾಲ್ಲೂಕು ರೈತಸಂಘದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಹೇಮಾವತಿ ನದಿ ನೀರನ್ನು ಈ ಭಾಗಕ್ಕೆ ಶೀಘ್ರವೇ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ ಆದರೆ ಆ ಬಗ್ಗೆ ಇದುವರೆಗೂ ನಿರಾವರಿ ಸಚಿವರಾಗಲಿ, ಜಿಲ್ಲಾಉಸ್ತುವಾರಿ ಸಚಿವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಆ ಬಗ್ಗೆ ಶೀಘ್ರವೇ ಗಮನಗೊಡದೆ ಹೋದರೆ ರೈತಸಂಘ ಹಾಗೂ ಹಸಿರುಸೇನೆಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಾಲ ಮನ್ನಾ ಮಾಡಿ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದು, ಸಾವಿರಾರು ರೂ ಸಾಲ ರೈತರ ಮೇಲಿದ್ದು, ಆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿದರು. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ರೈತರೇ ತಾವು ಮಾಡಿರುವ ಸಾಲವನ್ನು ತೀರಿಸುತ್ತಾರೆ ಎಂದರು.
ಈ ವೇಳೆ ರಾಜ್ಯ ಹಸಿರು ಸೇನೆಯ ಸಂಚಾಲಕ ಕೆಂಕೆರೆ ಸತೀಶ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಪಿ.ಮಲ್ಲಪ್ಪ, ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ ಹಾಗೂ ಚಿ.ನಾ. ಹಳ್ಳಿ ಹಾಗೂ ಶಿರಾ ತಾಲ್ಲೂಕಿನ ಹೋಬಳಿ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಎತ್ತಿನಹೊಳೆ ಯೋಜನೆಯಿಂದ ರೈತರ ಕೆಲ ಹಳ್ಳಿಗಳು ಮುಳುಗಡೆಯಾಗುತ್ತವೆ ಎಂಬ ವದಂತಿ ಹರಡಿದ್ದು ಆ ಭಾಗದ ಹಳ್ಳಿಗಳ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಎತ್ತಿನಹೊಳೆ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕೆ ಹೊರತು ರೈತರ ಹಳ್ಳಿಗಳೆ ಮುಳುಗಡೆಯಾಗುವಂತಾಗಬಾರದು. ಒಂದು ವೇಳೆ ಹಳ್ಳಿಗಳು ಮುಳುಗಡೆಯಾದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡಲು ರೈತಸಂಘ ಹಾಗೂ ಹಸಿರುಸೇನೆ ಮುಂದಾಗುವುದಾಗಿ ಸಂಘದ ಸರ್ವಸದಸ್ಯರು ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ