ಕಾರ್ತೀಕ ಮಾಸದ ದೀಪಾವಳಿಯಂದು ಪ್ರಾರಂಭವಾದ ಸ್ವಾತಿ ಮಳೆ ಶನಿವಾರದಂದು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ದಿನಪೂರ್ತಿ ಎಡಬಿಡದೆ ತುಂತುರು ತುಂತುರಾಗಿ ಸುರಿಯಿತು.
ಸ್ವಾತಿ ಮಳೆ ಶುಕ್ರವಾರ ಸಂಜೆ ಸೊನೆಯಂತೆ ಪ್ರಾರಂಭವಾಗಿ ಶನಿವಾರ ಬೆಳಿಗ್ಗಿನಿಂದಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ವೇಳೆಯಷ್ಟರಲ್ಲಿ ಗುಡುಗು ಸಹಿತ ಜೋರು ಮಳೆ ಸುರಿಯಲಾರಂಭಿಸಿ ಸಂಜೆವರೆವಿಗೂ ಜಿನುಗುಡುತ್ತಲೇ ಸಂಪೂರ್ಣ ಮೋಡದಿಂದ ಆವೃತವಾಗಿತ್ತು.
ಶನಿವಾರ ಸುರಿದ ಮಳೆಯಿಂದಾಗಿ ಹುಳಿಯಾರು ಬಸ್ ನಿಲ್ದಾಣದಲ್ಲಿ ಕೆರೆಯಂತೆ ನೀರು ನಿಂತಿರುವುದು. |
ಒಂದೇ ಸಮನೆ ಸುರಿದ ಮಳೆಯಿಂದಾಗಿ ಪಟ್ಟಣದ ರಸ್ತೆ, ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯುಂಟಾಗಿತ್ತು. ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆ ಹರಿಯುತ್ತಿದ್ದು ಕಂಡುಬಂತು. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಳೆ ನೀರು ಹರಿದು ಹೋಗಲು ತಾವಿಲ್ಲದೆ ಅಲ್ಲೇ ಸುತ್ತುಗಟ್ಟಿ ಕರೆಯೋಪಾದಿಯಲ್ಲಿ ನಿಂತಿದ್ದು, ಅದರಲ್ಲೇ ಜನ ಓಡಾಡುವಂತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ನಿಲ್ದಾಣಕ್ಕೆ ಬಸ್ ಬಂದರೆ ಸಾಕು ಅಲ್ಲಿ ನಿಂತಿದ್ದ ನೀರು ಪಕ್ಕದ ಅಂಗಡಿ ಒಳಗೆ ನುಗ್ಗುತ್ತಿತ್ತು.
ಬಸ್ ನಿಲ್ದಾಣದಲ್ಲಿ ಈ ಸಮಸ್ಯೆ ಇಂದು ನೆನ್ನೆಯದಲ್ಲಾ ಮಳೆಬಂದರೆ ಸಾಕು ಸಮಸ್ಯೆ ತನ್ನಷ್ಟಕ್ಕೆ ತಾನೇ ಬಿಗಡಾಯಿಸುತ್ತದೆ. ಕೆಲವೆಡೆ ನಿಂತ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ನಿಲ್ದಾಣವೆಲ್ಲಾ ನೀರಿನಿಂದ ಅವೃತವಾದರೆ ಮತ್ತೆ ಕಲವು ಕಡೆ ಇರುವ ಚರಂಡಿಯಲ್ಲೂ ಹೂಳು,ಕಸಕಡ್ಡಿ ತುಂಬಿ ನೀರು ಹರಿದು ಹೋಗಲು ಆಸ್ಪದವಿಲ್ಲದಂತಾಗಿ ಸಮಸ್ಯೆ ಬಿಗಡಾಯಿಸಿದೆ. ಈ ನಿಂತ ನೀರಲ್ಲೇ ಬಸ್ ಹತ್ತಿ ಹೋಗಬೇಕಾಗಿದ್ದು ಪ್ರಯಾಣಿಕರು ಮೈಕೈಗೆಲ್ಲಾ ಕೆಸರು ನೀರು ಮೆತ್ತಿಸಿಕೊಂಡು ಹೋಗುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಗ್ರಾ.ಪಂ. ಹಾಗೂ ಜನಪ್ರತಿನಿಧಿಗಳ ವಿರುದ್ದ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸದಾ ಗಿಜಿಗುಟ್ಟುವ ಬಸ್ ನಿಲ್ದಾಣ ಮಳೆಯಿಂದಾಗಿ ಜನ ಸಂಚಾರ ವಿರಳವಾಗಿತ್ತು. ಒಟ್ಟಾರೆ ಈ ಬಾರಿ ಬಂದ ಮಳೆಯಿಂದಾಗಿ ಪಟಾಕಿ ಅಂಗಡಿಯವರಿಗೂ ಹಾಗೂ ಪಟಾಕಿ ಹೊಡೆಯುವವರಿಗೂ ನಿರಾಸೆ ಮೂಡಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ