ಜಯಚಂದ್ರ ರಾಜೀನಾಮೆಗೆ ಹುಟ್ಟೂರಿನ ಜನರಿಂದಲೇ ಆಗ್ರಹ
ಹುಳಿಯಾರು: ಹುಳಿಯಾರು ಎಪಿಎಂಸಿ ಬಳಿ ರೈತ ಸಂಘದಿಂದ ಹಮ್ಮಿಕೊಂಡಿರುವ ಕೊಬ್ಬರಿ ಹೋರಾಟ ೨೦ ನೇ ದಿನಕ್ಕೆ ಕಾಲಿಟ್ಟಿದ್ದು ಸಚಿವ ಟಿ.ಬಿ.ಜಯಚಂದ್ರ ಅವರ ಹುಟ್ಟೂರಾದ ಕಾಯಿತಿಮ್ಮನಹಳ್ಳಿಯ ನೂರಾರು ರೈತರು ಬುಧವಾರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಜಯಚಂದ್ರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಕಾಯಿತಿಮ್ಮನಹಳ್ಳಿಯ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಅವರು ಮತನಾಡಿ ಜಯಚಂದ್ರ ಅವರು ಸಚಿವರಾ ದಾಗ ಇಡೀ ಊರಿಗೆ ಊರೆ ಸಂಭ್ರಮಿಸಿತ್ತು. ನಮ್ಮೂರಿನ ರೈತನ ಮಗ ಸಚಿವರಾಗುತ್ತಿದ್ದು ಕೃಷಿ ಸಮಸ್ಯೆಗೆ ಪರಿಹಾರ ಕೊಡುವ ಅತಿಯಾದ ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ ಕೊಬ್ಬರಿ ಬೆಲೆ ಕುಸಿದಿದ್ದು ಜಯಚಂದ್ರ ಉತ್ತಮ ಬೆಲೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲ ಜಯಚಂದ್ರ ಅವರು ಸಚಿವ ಸಂಪುಟದಲ್ಲಿದ್ದೂ ರೈತರು ಬೆಲೆಗಾಗಿ ಹೋರಾಡುತ್ತಿರುವುದು ಜಯಚಂದ್ರ ಅವರಿಗೆ ಅವಮಾನದ ಸಂಗತಿ. ಕಾವೇರಿ ಸಮಸ್ಯೆ ಬುಗಿಲೆದ್ದಾಗ ಕೇಂದ್ರ ಸರ್ಕಾರದಿಂದ ಸಮಸ್ಯೆಗೆ ಪರಿಹಾರ ಕೊಡಿಸಲಾಗದೆ ಅಂಬರೀಶ್ ರಾಜೀನಾಮೆ ಕೊಟ್ಟ ರೀತಿ ಸಿದ್ಧರಾಮಯ್ಯ ಅವರ ಮನವೊಲಿಸಿ ಕೊಬ್ಬರಿಗೆ ಬೆಲೆ ಕೊಡಿಸಲಾಗದಿದ್ದರೆ ರಾಜೀನಾಮೆ ಕೊಟ್ಟು ರೈತರೊಂದಿಗೆ ಹೋರಾಟಕ್ಕೆ ಧುಮುಕಬೇಕು ಎಂದು ಆಗ್ರಹಿಸಿದರು.
ಭಾರತ ಕೃಷಿ ದೇಶ ಎನ್ನುತ್ತಾರೆ, ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ನಾವೂ ರೈತನ ಮಕ್ಕಳು ಎಂದು ಕಿವಿಗೆ ಹೂ ಇಡುತ್ತಾರೆ. ಆದರೆ ಎರಡೂ ಸದನಲ್ಲಿ ರೈತನ ಬಗ್ಗೆ ಹತ್ತು ನಿಮಿಷ ಚರ್ಚೆ ಮಾಡುವುದಿಲ್ಲ. ಅಧಿಕಾರಿಗಳ ಸಾವಿನ ಬಗ್ಗೆ, ದುಬಾರಿ ವಾಚಿನ ಬಗ್ಗೆ, ಅಶ್ಲೀಲ ಚಿತ್ರ ವೀಕ್ಷಣೆ ಬಗ್ಗೆ ದಿನಗಟ್ಟಲೆ ಮಾತನಾಡುತ್ತದೆ. ಇದೇ ವಿಚಾರಕ್ಕೆ ಸದನವನ್ನೇ ಬಲಿಕೊಡುತ್ತಾರೆ. ಆದರೆ ಬೀದಿಗೆ ಬಿದ್ದಿರುವ ರೈತನ ಬಗ್ಗೆ ಮಾತನಾಡುವುದಿಲ್ಲ. ರೈತನ ಬೆಳೆಗಳ ಬೆಲೆ ಕುಸಿತವಾಗಿರುವ ಬಗ್ಗೆ ಮಾತನಾಡುವುದಿಲ್ಲ. ರೈತನಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ಬಗ್ಗೆ ಮಾತನಾಡುವುದಿಲ್ಲ. ಹೋಗಲಿ ರೈತನ ಸರಣಿ ಆತ್ಮಹತ್ಯೆಗಳ ಬಗ್ಗೆಯೂ ಗಂಭೀರ ಚರ್ಚೆ ಮಾಡುವುದಿಲ್ಲ. ರಾಜಕಾರಣಿಗಳ ರೈತ ವಿರೋಧಿ ಧೋರಣೆ ಹೀಗೆಯೇ ಮುಂದುವರಿದರೆ ಎಲ್ಲಾ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸೋಲಿಸಿ ರೈತರೆ ವಿಧಾನಸೌಧ ಪ್ರವೇಶ ಮಾಡುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತನ ಆತ್ಮಹತ್ಯೆಗಳಿಗೆ ಸರ್ಕಾರದ ಪಾಲಿಸಿಗಳು ಕಾರಣ. ಒಂದರ್ಥದಲ್ಲಿ ಸರ್ಕಾರಗಳೇ ರೈತನನ್ನು ಕೊಲ್ಲುತ್ತಿವೆ ಎಂದರೂ ತಪ್ಪಿಲ್ಲ. ರೈತನ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲ ತೀರಿಸಲಾಗದೆ ಸಾವಿಗೆ ಶರಣಾಗುತ್ತಾನೆ. ಕರ್ತವ್ಯ ನಿರತ ಯೋಧ ಗುಂಡಿಗೆ ಬಲಿಯಾದರೆ ಹುತಾತ್ಮ ಎಂದು ಕರೆಯುತ್ತಾರೆ. ದೇಶಕ್ಕೆ ಅನ್ನ ಕೊಡಲು ಸಾಲ ಮಾಡಿ ತೀರಿಸಲಾಗದೆ ಸಾಯುವ ರೈತನಿಗೆ ಆತ್ಮಹತ್ಯೆ ಎಂದು ಅವಮಾನದ ಪಟ್ಟ ಕಟ್ಟುತ್ತಾರೆ. ರೈತ ಬೆಂಬಲ ಬೆಲೆ ಕೇಳುತ್ತಿರುವುದು ಅವರ ಬೆವರಿಗೆ ಬೆಲೆ ಕೇಳುತ್ತಿದ್ದಾನೆ. ಹಾಗಾಗಿ ಕೊಬ್ಬರಿಗೆ ೧೫ ಸಾವಿರ ಬೆಲೆ ಕೊಡಬೇಕು. ಇನ್ನಾದರೂ ರಾಜಕಾರಣಿಗಳು ಬದಲಾಗಿ ರೈತನನ ಬೆವರಿಗೆ ನ್ಯಾಯಯುತ ಬೆಲೆ ಕೊಡಿ. ೧೦ ವರ್ಷ ರೈತನ ಪರ ಕಾನೂನು ರಚಿಸಿ ಮುಂದಿನ ೧೦೦ ವರ್ಷ ರೈತ ಇಡೀ ದೇಶವನ್ನು ಸಾಕುತ್ತಾನೆ ಎಂದರು.
ರೈತ ಸಂಘದ ಕೆಂಕೆರೆ ಸತೀಶ್, ತಿಮ್ಮನಹಳ್ಳಿಲೋಕೇಶ್, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ಕಾಡಿನರಾಜ ನಾಗರಾಜು, ಜಯರಾಂ, ಸೀತಾರಾಮಯ್ಯ, ಕಟ್ಟೆ ಸುಬ್ಬಣ್ಣ, ಬಂಡಿಮನೆ ಮಂಜುನಾಥ್, ನೀಲಕಂಠಪ್ಪ, ಗಂಗಾಧರ್, ರಾಮಯ್ಯ, ಡಾ.ಬಾಬು, ಗ್ರಾಪಂ ಗುರು, ಗೋಪಾಲಕೃಷ್ಣ, ಸಿದ್ದನಕಟ್ಟೆಗೋಪಾಲಯ್ಯ, ರಾಜಣ್ಣ, ರಾಮಯ್ಯ, ಚಂದ್ರಣ್ಣ, ಪುರದಯ್ಯ, ಟಿ.ಆರ್.ತನು, ಕೇಶವಣ್ಣ ಸೇರಿದಂತೆ ಕಾಯಿತಿಮ್ಮನಹಳ್ಳಿ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ