ನಫೆಡ್ ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವೆ ;ಕೃಷಿ ಬೆಲೆ ಅಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ
ಹುಳಿಯಾರು:ನಫೆಡ್ ಪ್ರಾರಂಭಿಸಲು ಉದ್ಭವವಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಖರೀದಿ ಕೇಂದ್ರದಲ್ಲಿ ಕೂಡಲೇ ಕೊಬ್ಬರಿ ಖರೀದಿಗೆ ಮುಂದಾಗುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಕನಾಟಕ ಕೃಷಿ ಬೆಲೆ ಅಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಪ್ರತಿಭಟನಕಾರರಿಗೆ ಭರವಸೆಯಿತ್ತರು.
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ರಾಜ್ಯ ಕೃಷಿ ಬೆಲೆ ಅಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಭೇಟಿ ನೀಡಿ ಚರ್ಚಿಸಿದರು. |
ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತಸಂಘದ ನೇತೃತ್ವವದಲ್ಲಿ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯನವರೊಂದಿಗೆ ಭೇಟಿಯಿತ್ತ ಅವರು ಧರಣಿ ನಿರತರ ಜೊತೆ ಕೊಬ್ಬರಿಯ ಸ್ಥಳಿಯ ಸಮಸ್ಯೆ ಬಗ್ಗೆ ಚರ್ಚಿಸಿದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಅಧಿಕ ಉತ್ಪಾದನೆಯಿಂದ ಕೊಬ್ಬರಿ,ಈರುಳ್ಳಿ,ಟೊಮೊಟೊ ಸೇರಿದಂತೆ ಕೆಲವು ಧಾನ್ಯಗಳ ಬೆಲೆಯಲ್ಲಿ ಏರಿಳಿತ ಕಂಡು ಸಹಜವಾಗಿಯೇ ಧಾರಣೆ ಕುಸಿತವಾಗುವುದರಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ಹನ್ನೊಂದು ಪ್ರಮುಖ ಕೃಷಿ ಮತ್ತು ತೋಟಗಾರಿಕ ಬೆಳೆಗಳ ಉತ್ಪಾದನೆ ಹಾಗೂ ಬೆಳೆಗಳಿಗೆ ಉತ್ಪಾದನಾ ವೆಚ್ಚ ಸೇರಿಸಿ ತಗುಲಲಿರುವ ಬೆಲೆ ನಿಗದಿಮಾಡಿ ಕೇಂದ್ರಸರ್ಕಾರಕ್ಕೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲಾಗಿದ್ದು ಅದರಂತೆ ತೆಂಗು ಬೆಳೆಗರರೊಂದಿಗೆ ಚರ್ಚಿಸಿ ಉತ್ಪಾದನಾ ವೆಚ್ಚ ಸೇರಿ ೧೧,೫೨೯ ರೂ ನಿಗದಪಡಿಸಲಾಗಿದ್ದು ಸರ್ಕಾರ ಈ ದರದಲ್ಲಿ ರೈತರಿಂದ ಕೊಬ್ಬರಿ ಖರೀದಿಸಲು ಮುಂದಾಗಬೇಕಿದೆ ಎಂದರು.
ಪ್ರಸ್ತುತ ಕೊಬ್ಬರಿಗೆ ರಾಜ್ಯ ಸರಕಾರ ಒಂದು ಸಾವಿರ ಸಹಾಯಧನ ನೀಡುವುದಾಗಿ ಹೇಳಿದ್ದು ಕೊಬ್ಬರಿ ಕೊಳ್ಳಲು ಗಡುವು ೩೦ ದಿನ ಎಂದು ತಿಳಿಸಿದ್ದು ಇದರ ಬದಲು ೯೦ ದಿನದವರೆಗೆ ವಿಸ್ತರಿಸುವಂತೆಯೂ ತಿಳಿಸಿದರು.
ಸಧ್ಯದ ಬೆಂಬಲಬೆಲೆ ೬೨೪೦ ಘೋಷಣೆಯಾಗಿದ್ದು ೨೦೧೬ -೧೭ನೇ ಸಾಲಿಗೆ ೧೧,೫೨೯ ರೂ ಗಳಂತೆ ದರ ನಿಗದಿಪಡಿಸಲು ಕೇಂದ್ರಸರ್ಕಾರದ ಮೇಲೆ ಒತ್ತಡ ತಂದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರಕಲು ಅನುಕೂಲವಾಗುತ್ತದೆ ಎಂದರು. ರಾಜ್ಯ ಸರಕಾರ ಸಧ್ಯ ಸಹಾಯಧನ ೧ ಸಾವಿರ ರೂ ಎಂದು ಘೋಷಿಸಿದ್ದು ಸಧ್ಯದ ಪರಿಸ್ಥಿತಿಯಲ್ಲಿ ಇದನ್ನು ಕನಿಷ್ಟ ಎರಡು ಸಾವಿರಕ್ಕೆ ಏರಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಉಪ ಸಮಿತಿ ಅಧ್ಯಕ್ಷ ಟಿ.ಬಿ.ಜಯಚಂದ್ರ ಅವರನ್ನ ಒತ್ತಾಯಿಸಲಾಗುವುದು ಎಂದರು.
ಧರಣಿ ಕುಳಿತ ತೆಂಗು ಬೆಳೆಗರರು ಸಮಸ್ಯೆ ಆಲಿಸಿದ ಅವರು ರೈತರ ಸಂಕಷ್ಟ ಹಾಗೂ ವಾಸ್ತವತೆಯ ಅರಿವು ಅರಿತು ಶ್ರೀಘ್ರ ನಾಫೆಡ್ ಕೇಂದ್ರ ತೆರೆಯುವಂತೆ ಕೃಷಿ ಉತ್ಪನ್ನ ಮಾರಾಟ ಮಂಡಳಿ ಸಹಾಯಕ ನಿರ್ದೇಶಕರಿಗೆ ತಾಕೀತು ಮಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಸರ್ಕಾರ ಕೂಡಲೇ ನಫೇಡ್ ಕೇಂದ್ರ ಪ್ರಾರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿಯೂ ಹಾಗೂ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಾಡಲು ಸಂಸದ ಮುದ್ಧಹನುಮೇಗೌಡರೊಂದಿಗೆ ರೈತರ ನಿಯೋಗ ಕರೆದೊಯ್ಯುವುದಾಗಿಯೂ ಭರವಸೆಯಿತ್ತರು.
ಸಹಜ ಕೃಷಿಕ ಪ್ರೋ. ಶಿವನಂಜಪ್ಪ ಬಾಳೆಕಾಯಿ, ಕೃಷಿ ಉತ್ಪನ್ನ ಮಾರಾಟ ಮಂಡಳಿ ಸಹಾಯಕ ನಿರ್ದೇಶಕ ಎಂ.ರಾಜಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಣ್ಣ,ರೈತಸಂಘದ ಕೆಂಕೆರೆ ಸತೀಶ್, ಎಪಿಎಂಸಿ ಅಧ್ಯಕ್ಷ ಬರಗೂರು ಬಸವರಾಜು, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ತಿಮ್ಮಹಳ್ಳಿ ಲೋಕಣ್ಣ, ಮಲ್ಲಿಕಾರ್ಜುನಯ್ಯ,ಚಿಕ್ಕಬಿದರೆ ಶಾಂತಣ್ಣ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ