ಸರ್ಕಾರದ ನಡೆ ಧರಣಿ ನಿರತರ ತಾಳ್ಮೆ ಕೆಣಕುತ್ತಿದೆ
ಹುಳಿಯಾರುಎಪಿಎಂಸಿ ಮುಂದೆ ನಡೆಯುತ್ತಿರುವ ಕೊಬ್ಬರಿ ಚಳುವಳಿ ಭಾನುವಾರಕ್ಕೆ ೩೧ ದಿನ ತುಂಬಿದ್ದು ಸರ್ಕಾರದ ನಿರ್ಲಕ್ಷ್ಯವನ್ನು ಧರಣಿನಿರತರು ಖಂಡಿಸಿದರು.
ಹುಳಿಯಾರು:ಸರ್ಕಾರದ ನಡೆ ಹಾಗೂ ನಿರ್ಲಕ್ಷ್ಯ ಮನೋಭಾವ ಕೊಬ್ಬರಿ ಹೋರಾಟಗಾರರ ತಾಳ್ಮೆಯನ್ನು ಕೆಣಕುತ್ತಿದ್ದು ಹುಳಿಯಾರು ಎಪಿಎಂಸಿಯಲ್ಲಿನ ಒಂದು ತಿಂಗಳಿನ ಪ್ರತಿಭಟನೆಗೆ ಯಾರೊಬ್ಬರು ಕಿವಿಗೊಡದ್ದರಿಂದ ನಾಳೆಯಿಂದ ನಮ್ಮ ಹೋರಾಟದ ದಿಕ್ಕನ್ನು ಬದಲಿಸುತ್ತಿರುವುದಾಗಿ ತಿಮ್ಮನಹಳ್ಳಿ ಲೋಕಣ್ಣ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಕೊಬ್ಬರಿ ಚಳುವಳಿಗೆ ಭಾನುವಾರದಂದು ೩೧ ದಿನ ತುಂಬಿದ್ದು, ಇಂದಿನ ಧರಣಿಯಲ್ಲಿ ಜಿಲ್ಲಾಉಸ್ತುವಾರಿ ಸಚಿವರ ತವರೂರಿನ ಜನ ಭಾಗವಹಿಸಿ ಅವರ ವಿರುದ್ಧ ಹರಿಹಾಯ್ದಿದ್ದು ವಿಶೇಷವಾಗಿತ್ತು.
ಸರ್ಕಾರದ ವಿರುದ್ಧ ತೀಕ್ಷವಾಗಿ ಹರಿಹಾಯ್ದ ಲೋಕಣ್ಣ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲನೇ ಬಜೆಟ್ ಸಮಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ಮುಖಂಡರನ್ನು ಕರೆಸಿ ಕೃಷಿ ಈಗ ಲಾಭದಾಯಕವಾಗಿ ಉಳಿಸಿಲ್ಲ,ನಿಮಗಾಗಿ ವಿಶೇಷ ಯೊಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದವರು ಇದುವರೆಗೂ ಇದರ ಸೊಲ್ಲೆತ್ತಿಲ್ಲದಿರುವುದು ವಿಪರ್ಯಾಸ.ಕೊಬ್ಬರಿ ಬೆಳೆಗಾರರಿಗೆ ಸರ್ಕಾರ ಭಿಕ್ಷೆಯಂತೆ ಒಂದು ಸಾವಿರ ರೂಪಾಯಿ ಸಹಾಯಧನ ನೀಡಿದ್ದು ಬಿಟ್ಟರೆ ರೈತರಿಗೆ ಏನೇನೂ ಸವಲತ್ತು ನೀಡಿಲ್ಲ.ಮುಖ್ಯಮಂತ್ರಿಗಳೇ ,ನೀವು ನೀಡಿರುವ ಒಂದು ಸಾವಿರ ರೂಪಾಯಿ ಭಿಕ್ಷೆ ನಮಗೆ ಬೇಕಿಲ್ಲ.ಕೃಷಿ ಉತ್ಪನ್ನ ಮಾರುಕಟ್ಟೆಯ ಆವರ್ತ ನಿಧಿಯಲ್ಲಿರುವ ಹಣದಲ್ಲೆ ಕೊಬ್ಬರಿ ಕೊಂಡುಕೊಂಡರು ಸಹ ರೈತರ ಸಮಸ್ಯೆ ತೀರಲಿದ್ದು ಈ ಬಗ್ಗೆ ಈಗಲಾದರು ಗಮನ ಹರಿಸಿ ಎಂದರು.
ಹಾಲಿ,ಮಾಜಿ ಶಾಸಕರುಗಳೇ ನಿಮಗೆ ನೈತಿಕತೆ ಏನಾದರೂ ಇದ್ದಲ್ಲಿ ಈ ಕೂಡಲೇ ನಮ್ಮ ಹೋರಾಟಕ್ಕೆ ಕೈ ಜೋಡಿಸಿರಿ.ಇಲ್ಲದಿದ್ದಲ್ಲಿ ಬರಲಿರುವ ಚುನಾವಣೆಯಲ್ಲಿ ನಿಮಗೆ ಛೀಮಾರಿ ಗ್ಯಾರಂಟಿ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ರೈತರ ಬಗ್ಗೆ ಗಮನ ಮಾಡದ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರ ವಿರುದ್ಧ ಧಿಕ್ಕಾರ ಕೂಗಿದರು.
ಇಂದಿನ ಧರಣಿಯಲ್ಲಿ ತಿಮ್ಮನಹಳ್ಳಿ ಗ್ರಾಮದ ಪ್ರಕಾಶ ಬಸ್ಸ್ ಮಾಲೀಕರಾದ ಜಯರಾಮಣ್ಣ, ಶೇಖರಣ್ಣ, ಟಿ.ಎಲ್.ರಂಗನಾಥ್, ಸುಧಣ್ಣ,ಮಂಜಣ್ಣ,ತಾಲ್ಲೂಕ್ ಗೌರವಾಧ್ಯಕ್ಷ ಕೆ.ಪಿ.ಮಲ್ಲೇಶ್,ತಮ್ಮಡಿಹಳ್ಳಿ ಮೂರ್ತಿ,ದಬ್ಬಗುಂಟೆ ರುದ್ರೇಶ್,ಹೂವಿನ ರಘು,ಲಕ್ಷ್ಮೀಪುರದ ಶಿವಣ್ಣ,ಕೆರೆಸೂರಗೊಂಡನಹಳ್ಳಿ ಗಂಗಣ್ಣ,ಮುನಿಯಪ್ಪ,ಎಣ್ಣೆ ರಂಗಸ್ವಾಮಿ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ