ಕಾರೇಹಳ್ಳಿ ಗೋಶಾಲೆಗೆ ಭೇಟಿ:ರೈತರ ಸಮಸ್ಯೆಗೆ ಸ್ಪಂದಿಸುವ ಭರವಸೆ
ಹುಳಿಯಾರು:ಹೋಬಳಿಯ ಕಾರಹಳ್ಳಿಯಲ್ಲಿನ ಗೋಶಾಲೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗೋಶಾಲೆಯಲ್ಲಿನ ಮೇವಿನ ಸಮಸ್ಯೆಗಳ ಬಗ್ಗೆ ನೇರವಾಗಿ ರೈತರನ್ನೆ ಪ್ರಶ್ನಿಸಿದಲ್ಲದೆ ಹಾಗೂ ನನ್ನಿಂದ ಏನಾಗಬೇಕು ಎಂದು ಕೇಳಿದರಲ್ಲದೆ ಅಲ್ಲಿನ ಸಮಸ್ಯೆಯನ್ನು ಖುದ್ದು ವೀಕ್ಷಿಸಿ ಮೇವು ಬ್ಯಾಂಕ್ ತೆರೆಯಲು ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ಬರಪೀಡೀತ ಪ್ರದೇಶದ ಪ್ರವಾಸದ ಅಂಗವಾಗಿ ಹುಳಿಯಾರು ಹೋಬಳಿಯ ಕಾರೇಹಳ್ಳಿಯ ಗೋಶಾಲೆಗೆ ಭೇಟಿಯಿತ್ತ ಯಡಿಯೂರಪ್ಪನವರಿಗೆ ರೈತರು ಗೋಶಾಲೆಯ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಗೋಶಾಲೆತೆರೆದಿರುವುದು ಈಗಾಗಲೇ ತಡವಾಗಿದೆ.ಇಲ್ಲಿ ವ್ಯವಸ್ಥೆಯಿದ್ದರೂ ಸಹ ೧೦, ೧೫ಕಿಮೀ ದೂರದಿಂದ ದನ ಕರುಗಳು ಮತ್ತು ಹಸುಗಳನ್ನು ಈ ಗೋಶಾಲೆಗೆ ಹೊಡೆದುಕೊಂಡು ಪುನ: ವಾಪಸ್ ಹಿಂದುರುಗಿ ಹೋಗಲು ತುಂಬಾ ಕಷ್ಟಕರವಾಗಿದೆ. ಅಲ್ಲದೆ ೮ ರಿಂದ ೧೦ಲೀಟರ್ ಹಾಲು ಕೊಡುವ ಹಸುಗಳು ಇಲ್ಲಿದ್ದು ಈ ಹಸುವಿನ ಹಾಲು ಕರೆದು ದೂರದ ಡೈರಿಗೆ ತೆಗೆದುಕೊಂಡು ಹೋಗಿ ಹಾಕುವುದು ಸಮಸ್ಯೆಯಾಗುತ್ತಿದೆ. ಇದರ ಬದಲು ಪ್ರತಿಹಳ್ಳಿಗಳಲ್ಲೂ ಮೇವು ಬ್ಯಾಂಕ್ ತೆರೆದು ಹಳ್ಳಿಗಳಲ್ಲಿನ ಪಶು ಆಸ್ಪತ್ರೆಯ ವೈದ್ಯರ ಬಳಿಯಿರುವ ರೈತರ ಹಸುಗಳ ಮಾಹಿತಿಪಟ್ಟಿಯಂತೆ ರೈತರುಗಳಿಗೆ ಗುರುತಿನ ಚೀಟಿ ನೀಡಿ ಆ ಪ್ರಕಾರವಾಗಿ ಈಗ ನೀಡುತ್ತಿರುವ ೫ ಕೆಜಿ ಮೇವನ್ನು ರೈತರಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಸಮಸ್ಯೆ,ಕಷ್ಟನಷ್ಟಗಳು ನನಗೆ ಅರ್ಥವಾಗಿದೆ. ದೂರದ ಹಳ್ಳಿಗಳಿಂದ ಕೆಲಸ ಕಾರ್ಯ ಬಿಟ್ಟು ಮುಂಜಾನೆಯೇ ಹಸು ಹೊಡೆದುಕೊಂಡು ಗೋಶಾಲೆಯಿಂದ ಮೇವು ಪಡೆದು ಹೋಗುವುದು ಕಷ್ಟವಾಗುತ್ತಿರುವುದು ಸತ್ಯ. ರೈತರು ನೀಡಿರುವ ಸಲಹೆಯಂತೆ ಪ್ರತಿ ಹಳ್ಳಿಯಲ್ಲಿಯೂ ಸಹಾ ಮೇವು ಬ್ಯಾಂಕನ್ನು ತೆರೆದು ಈಗ ನೀಡುತ್ತಿರುವ ೫ಕೆಜಿ ಮೇವಿನ ಬದಲು ೧೦ಕೆಜಿ ನೀಡುವಂತೆ ಸರಕಾರದೊಂದಿಗೆ ಚರ್ಚಿಸಿ ರೈತರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ರಾಜ್ಯ ಸರಕಾರದ ಮಂತ್ರಿಗಳಿಗೆ ಹಳ್ಳಿಗಳಿಗೆ ಬಂದು ರೈತರ ಸಮಸ್ಯೆಗಳನ್ನ ಕೇಳುವ ಮನಸಿಲ್ಲ. ರೈತರ ಕಷ್ಟಗಳನ್ನ ಅರಿಯಲು ಈಗಾಗಲೆ ನಮ್ಮ ಪಕ್ಷದಿಂದ ತಂಡಗಳನ್ನು ರಚಿಸಿ ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆ ,ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಈ ವೇಳೆ ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ಚನ್ನಬಸಪ್ಪ ಮನವಿ ಸಲ್ಲಿಸಿ ಮಾತನಾಡಿ ಇಂದು ಮಳೆ ಬೆಳೆ ಇಲ್ಲದೆ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ತಾಪಕ್ಕೆ ರೈತ ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳೊಂದಿಗೆ ಚರ್ಚಿಸಿ ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಮಾಜಿ ಸಚಿವೆ ಶೋಭಾಕರಂದ್ಲಾಜೆ,ಶಾಸಕ ಸುರೇಶ್ ಗೌಡ,ಮಾಜಿ ಸಂಸದ ಬಸವರಾಜ್, ಮಾಜಿ ಶಾಸಕರಾದ ಜೆ.ಸಿ,ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್,ಹುಲಿನಾಯ್ಕರ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ