ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸುವ ಭರವಸೆ
ಹುಳಿಯಾರು: ಸರ್ಕಾರ ಕೂಡಲೇ ನಫೇಡ್ ಕೇಂದ್ರ ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹಾಗೂ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯಾಡಲು ಸಂಸದ ಮುದ್ಧಹನುಮೇಗೌಡರೊಂದಿಗೆ ರೈತರ ನಿಯೋಗ ಕರೆದೊಯ್ಯುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಭರವಸೆಯಿತ್ತರು.
ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತಸಂಘದ ಧರಣಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ಭೇಟಿಕೊಟ್ಟು ರೈತರೊಂದಿಗೆ ಚರ್ಚಿಸಿದರು. |
ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತಸಂಘವು ನಡೆಸುತ್ತಿರುವ ಅಹೋರಾತ್ರಿ ೨೧ನೇ ದಿನವಾದ ಗುರುವಾರದ ಧರಣಿಯಲ್ಲಿ ಭೇಟಿಕೊಟ್ಟ ಅವರು ನಮ್ಮ ತಾಲ್ಲೂಕಿನ ರೈತರು ಕಳೆದ ಇಪ್ಪತ್ತು ದಿನಗಳಿಂದ ನಡೆಸುತ್ತಿರುವ ಧರಣಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.ಅಲ್ಲದೆ ಇಂದು ಸಂಜೆಯೊಳಗೆ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮರಡಿಯವರನ್ನು ಧರಣಿ ಸ್ಥಳಕ್ಕೆ ಕರೆಸಿ ಅವರಿಗೆ ಕೊಬ್ಬರಿ ಬೆಳಗಾರರ ವಸ್ತುಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ಸಾವಯವ ಕೃಷಿಕರಾದ ಪ್ರೋ.ಬಾಳೆಕಾಯಿ ಶಿವನಂಜಪ್ಪ ಮಾತನಾಡಿ ರೈತರು ಬೆಳೆದ ಬೆಳೆಗೆ ಸಮಪರ್ಕವಾದ ಬೆಲೆ ದೊರೆಯಲು ಪ್ರತಿಯೊಂದು ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ಇ-ಟೆಂಡರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿದರು.ರೈತರು ಶ್ರಮ ಪಟ್ಟು ಬೆಳೆಯುವ ಬೆಳೆಗೆ ಯೋಗ್ಯವಾದ ಬೆಲೆಯನ್ನ ನಿರ್ಧರಿಸುವ ಅಧಿಕಾರ ರೈತರಿಗಿಲ್ಲದಿರುವುದು ವಿಪರ್ಯಾಸವಾಗಿದೆ ಎಂದರು.
ಎಲ್ಲಾ ಮಾರುಕಟ್ಟೆಗಳಲ್ಲೂ ಸೆಕೆಂಡ್ಸ್ ದಂಧೆ ಮಿತಿಮೀರಿದ್ದು ಈ ಬಗ್ಗೆ ಎಪಿಎಂಸಿ ಕಡಿವಾಣ ಹಾಕುವಂತೆ ಸರಕಾರ ಹೆಚ್ಚಿನ ಗಮನ ಹರಿಸಬೇಕೆಂದರು. ರೈತರ ಹಿತದೃಷ್ಟಿಯಿಂದ ಕೊಬ್ಬರಿ ಸೇರಿದಂತೆ ರೈತರ ಪ್ರತಿಯೊಂದು ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಕೃಷಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದ ನ್ಯಾಮೇಗೌಡರನ್ನು ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾಯದರ್ಶಿಯಾಗಿ ಪುನಃ ತಿಪಟೂರು ಕೃಷಿ ಮಾರುಕಟ್ಟೆಗೆ ನಿಯೋಜಿಸುವಂತೆ ಒತ್ತಾಯಿಸಿದರು.
ಸಾಹಿತಿ ಪ್ರೋ.ಬಿಳಿಗೆರೆ ಕೃಷ್ಣಮೂರ್ತಿ, ದಬ್ಬಗುಂಟೆ ರವಿಕುಮಾರ್, ರೈತಸಂಘದ ಸಂಚಾಲಕ ಕೆಂಕೆರೆ ಸತೀಶ್, ತಿಮ್ಮನಹಳ್ಳಿ ಲೋಕಣ್ಣ, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ಗಂಗಣ್ಣ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ