ಯಡಿಯೂರಪ್ಪ ಎದುರಿಗೆ ಬಯಲಾಯ್ತು ಬಿಜೆಪಿ ಭಿನ್ನಮತ
ವಿಶೇಷ ವರದಿ : ಹೆಚ್.ಬಿ.ಕಿರಣ್ ಕುಮಾರ್
ಹುಳಿಯಾರು: ಚಿಕ್ಕನಾಯಾಕನಹಳ್ಳಿ ತಾಲೂಕಿನಲ್ಲಿರುವ ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್ ಹಾಗೂ ಜೆ.ಸಿ.ಮಾಧುಸ್ವಾಮಿ ಅವರಿಬ್ಬರಲ್ಲಿ ೨೦೧೮ ರ ವಿಧಾನಸಭಾ ಚುನಾವಣಾ ಅಭ್ಯರ್ಥಿ ಯಾರೆಂದು ಘೋಷಿಸುವಂತೆ ಬರ ವೀಕ್ಷಣೆಗಾಗಿ ಹುಳಿಯಾರು ಸಮೀಪದ ಕಂಪನಹಳ್ಳಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಒತ್ತಾಯಿಸಿದ ಘಟನೆ ಬುಧವಾರ ಜರುಗಿತು.
ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ತೆಂಗಿನ ತೋಟದ ವೀಕ್ಷಣೆಗೆ ಹೋದಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಚಿ.ನಾ.ಹಳ್ಳಿ ಬಿಜೆಪಿ ಅಭ್ಯರ್ಥಿ ಯಾರೆಂದು ಪ್ರಶ್ನಿಸುತ್ತಿರುವುದು. |
ಯಡಿಯೂರಪ್ಪನವರ ಬರ ವೀಕ್ಷಣಾ ಪ್ರವಾಸದ ಪಟ್ಟಿಯಲ್ಲಿ ಹುಳಿಯಾರು ಹೋಬಳಿಯ ಕಾರೆಹಳ್ಳಿ ಗೋಶಾಲೆ ಹಾಗೂ ಎಪಿಎಂಸಿ ಕೊಬ್ಬರಿ ಧರಣಿ ಸ್ಥಳ ಪೂರ್ವ ನಿಗದಿಯಾಗಿತ್ತು. ಆದರೆ ನೂರಾರು ಕಾರ್ಯಕರ್ತರು ಕಂಪನಹಳ್ಳಿಯ ತೋಟದ ಮನೆಯ ಹೆಂಜಾರಪ್ಪ ಅವರ ತೆಂಗಿನ ತೋಟ ಸಂಪೂರ್ಣ ಒಣಗಿದ್ದು ವೀಕ್ಷಿಸುವಂತೆ ಮಾರ್ಗ ಮದ್ಯೆ ಒತ್ತಡ ತಂದು ಅಲ್ಲಿಗೆ ಯಡಿಯೂರಪ್ಪನವರನ್ನು ಬರಮಾಡಿಕೊಂಡು ಆಗಮಿಸಿದ ಸಂದರ್ಭದಲ್ಲಿ ಯಡಿಯೂರಪ್ಪನವರೆ, ಚಿಕ್ಕನಾಯ್ಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಮುಂದಿನ ಚುನಾವಣಾ ಅಭ್ಯರ್ಥಿ ಯಾರು ಎಂದು ತಾವು ಈಗಲೇ ಘೋಷಿಸಬಬೇಕೆಂದು ಕಾರ್ಯಕರ್ತರು ಪ್ರಶ್ನಿಸಿದ್ದು ಗೊಂದಲಕ್ಕೆ ಕಾರಣವಾಯಿತು.
ಯಡಿಯೂರಪ್ಪನವರ ಬಳಿ ಸಮಸ್ಯೆ ಬಿಚಿಟ್ಟ ಕಾರ್ಯಕರ್ತರುಗಳು ನಾವೆಲ್ಲ ಸ್ವಂತ ಹಣದಲ್ಲಿ ಮನೆ ಮಠ ಬಿಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟಿದ್ದೇವೆ. ಹತ್ತನ್ನೆರಡು ವರ್ಷವಾಯ್ತು ಬಿಜೆಪಿಗೆ ಇಲ್ಲಿ ಅಧಿಕಾರ ಬಂದು. ಕಾರ್ಯಕರ್ತರನ್ನು ಕ್ಯಾರೆ ಎನ್ನುವವರಿಲ್ಲ. ನಿಮ್ಮಂತ ನಾಯಕರುಗಳು ಆಗಮಿಸುವ ಸಮಯದಲ್ಲಿ ಮಾತ್ರ ಬನ್ನಿ ಎಂದು ಪೋನ್ ಕರೆ ಮಾಡುತ್ತಾರೆ. ೨ ಚುನಾವಣೆಯಲ್ಲೂ ಒಂದೆ ಜಾತಿಗೆ ಸೇರಿದ ಇಬ್ಬರು ಮಾಜಿ ಶಾಸಕರು ಒಂದೊಂದು ಪಕ್ಷದಿಂದ ಅಭ್ಯರ್ಥಿಗಳಾಗಿ ಜೆಡಿಎಸ್ ಅನಾಯಾಸ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದಾರೆ. ಈಗ ಈ ಇಬ್ಬರೂ ಮಾಜಿ ಶಾಸಕರೂ ಬಿಜೆಪಿಯಲ್ಲಿದ್ದು ಇಬ್ಬರೂ ಒಂದೊಂದು ಕಡೆ ಮುಖ ಮಾಡಿಕೊಂಡು ತಿರುಗುತ್ತಿದ್ದಾರೆ. ಒಬ್ಬರು ತಾಲೂಕು ಬಿಜೆಪಿ ಅಧ್ಯಕ್ಷರನ್ನಾಗಿ ಶಶಿಧರ್ ಅವರನ್ನು ಘೋಷಿಸಿದರೆ, ಮತ್ತೊಬ್ಬರು ಶ್ರೀನಿವಾಸಮೂರ್ತಿ ಎಂದು ಘೋಷಿಸುತ್ತಾರೆ. ಹೀಗೆ ಇವರಿಬ್ಬರೆ ಕಿತ್ತಾಡಿದರೆ ನಮ್ಮ ಗತಿ ಏನು ಸ್ವಾಮಿ ಎಂದು ಸಮಸ್ಯೆ ವಿವರಿಸಿದರು.
ಒಬ್ಬ ರಾಜ್ಯಧ್ಯಕ್ಷ ತಾಲೂಕಿಗೆ ಬರುತ್ತಾರೆಂದರೆ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಅಭ್ಯರ್ಥಿಗಳ ಬಗ್ಗೆ ಗೊಂದಲಕ್ಕೀಡಾಗಿ ಪಕ್ಷ ಸಂಘಟನೆಯಿಂದ ದೂರಾಗಿರುವ ಕಾರ್ಯಕರ್ತರುಗಳು ಒಂದೇ ಒಂದು ಪಕ್ಷದ ಬಾವುಟವನ್ನು ಕೂಡ ಕಟ್ಟದಂತಾಗಿದ್ದಾರೆ. ಇದು ಹೀಗೆಯೇ ಚುನಾವಣೆಯವರೆಗೂ ಮುಂದುವರಿದಲ್ಲಿ ಈ ಬಾರಿಯೂ ಬಿಜೆಪಿ ಸೋಲೋದು ಗ್ಯಾರೆಂಟಿ ಎಂದರು..
ಇದರಿಂದ ಕುಪಿತಗೊಂಡ ಯಡಿಯೂರಪ್ಪ ಅವರು ಮುಖ ಗಂಟು ಮಾಡಿಕೊಂಡು ಕಾರ್ಯಕರ್ತರನ್ನು ಏರಿದ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಇವರಿಬ್ಬರ ಭಿನ್ನಮತ ಇರೋದ್ರಿಂದಾನೆ ಗೆಲ್ಲಬೇಕಾದ ೨ ಜಿಪಂ ಕ್ಷೇತ್ರ ಸೋತಿದ್ದೇವೆ. ಇವರು ಸರಿಯಾಗದೆ ಚುನಾವಣೆಗೆ ಹೋದಲ್ಲಿ ಸೋಲೋದಿಲ್ವ. ನಾವು ಯಾರ ಪರವೂ ಟಿಕೆಟ್ ಕೊಡಿ ಎಂದು ಕೇಳುತ್ತಿಲ್ಲ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಎಂದು ಘೊಷಿಸಬೇಕು. ಇವರಿಬ್ಬರೂ ಬೇಡ ಹೊಸ ಮುಖ ನಿಲ್ಲಿಸುತ್ತೇನೆಂದರೂ ನಮ್ಮ ತಕರಾರಿಲ್ಲ. ಒಟ್ಟಾರೆ ಬೇಗ ಅಭ್ಯರ್ಥಿ ಘೋಷಿಸಿ ಎಂದು ಕಾರ್ಯಕರ್ತರುಗಳು ಪಟ್ಟು ಹಿಡಿದರು.
ಅಂತಿಮವಾಗಿ ಯಡಿಯೂರಪ್ಪ ಅವರು ಅಭ್ಯರ್ಥಿ ಬಗ್ಗೆ ಮಾತನಾಡದೆ ಮೌನಕ್ಕೆ ಶರಣಾದರು. ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಮನೆಗೆ ತೆರಳಿದ ಅವರು ಪ್ರತ್ಯೇಕ ಕೋಣೆಯಲ್ಲಿ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದರಾದರೂ ಟಿಕೇಟ್ ಯಾರಿಗೆಂದು ಕಡೆಗೂ ಏನೊಂದು ಹೇಳದೆ ತೆರಳಿದ್ದು ಕಾರ್ಯಕರ್ತರಲ್ಲಿ ಗೊಂದಲ ಮುಂದುವರಿಯುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ