ಸಂಜೆಯವರೆಗೂ ನಡೆದ ಮುದ್ದೆಸಾರಿನ ಸಂತರ್ಪಣೆ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿ ಸೋಮವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಮಾರು ಹತ್ತುಸಾವಿರದಷ್ಟಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸಾರಿನ ಸವಿ ಸವಿದರು.
ಪುರದ ಮಠದಲ್ಲಿ ಮುದ್ದೆಸಾರಿನ ಸಂತರ್ಪಣೆ ಸವಿಯುತ್ತಿರುವ ಮಹಿಳೆಯರು. |
ಇಂದು ಮುಂಜಾನೆ ಕೆಂಕೆರೆ ಗ್ರಾಮದಲ್ಲಿರುವ ಸ್ವಾಮಿಗೆ ವಿಶೇಷ ಪೂಜೆ ನಡೆಸಿ,ನಂತರ ಗ್ರಾಮದೇವತೆ ಲೋಕಮಾತೆ ಕಾಳಿಕಾಂಭ ದೇವಿ ಹಾಗೂ ಸ್ವಾಮಿಯವರನ್ನು ಧ್ವಜಕುಣಿತದೊಂದಿಗೆ ಊರಿನ ಬೀದಿಯಲ್ಲಿ ಉತ್ಸವದೊಂದಿಗೆ ಸುಮಾರು ೩ ಕೀ.ಮೀ ದೂರದ ಸ್ವಾಮಿಯ ಮೂಲಸ್ಥಾನ ಪುರದಮಠಕ್ಕೆ ಕರೆದ್ಯೊಯಲಾಯಿತು.
ನಂತರ ಮಧ್ಯಾಹ್ನ 1 ಗಂಟೆಗೆ ಪುರದಮಠದಲ್ಲಿ ಗಂಗಾಸ್ನಾನ ನಡೆಸಿ ಸ್ವಾಮಿಯ ಹಾಗೂ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಎಡೆ ಸಲ್ಲಿಸಲಾಯಿತು. ನಂತರ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾಗಿ ಮುದ್ದೆ ವಿಶೇಷ: ಪುರದಮಠದಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದಲ್ಲಿ ರಾಗಿ ಮುದ್ದೆ ಸಾರಿನ ಊಟ ವಿಶೇಷವಾಗಿದ್ದು ಇಲ್ಲಿಗೆ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ . ಅಲ್ಲದೆ ಪುರದಮಠ ಜಿಲ್ಲೆಯ ಗಡಿಭಾಗವಾಗಿರುವುದರಿಂದ ಹೊಸದುರ್ಗ, ಹಿರಿಯೂರು ತಾಲ್ಲೂಕುಗಳ ಅಪಾರ ಸಂಖ್ಯೆಯ ಭಕ್ತರು ಸಹ ಆಗಮಿಸಿ ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸವಿಯುತ್ತಾರೆ. ಈರೀತಿ ಮುದ್ದೆ ಊಟ ತಯಾರಿಸುವುದು ಕಳೆದ ಅನೇಕ ವರ್ಷದಿಂದ ನಡೆದುಕೊಂಡು ಬಂದಿದ್ದು ಭಕ್ತರು ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮೀಸಲಾಗಿ ಹಾಕಿರುತ್ತಾರೆ. ಅಲ್ಲದೆ ಕೆಲವರು ಅಕ್ಕಿ, ಬೇಳೆಕಾಳು ಸೇರಿದಂತೆ ಸಾರು ತಯಾರಿಸಲು ಬೇಕಾದ ವಸ್ತುಗಳನ್ನು ಕೊಡಿಸಿರುತ್ತಾರೆ. ಇದನ್ನೆಲ್ಲಾ ಉಪಯೋಗಿಸಿ ಗ್ರಾಮದ ಜನರೆಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳ್ಸೊಪ್ಪು ಕಾಳಿನ ಸಾರು ತಯಾರಿಸಿರುತ್ತಾರೆ. ಇದನ್ನೇ ಸ್ವಾಮಿಗೆ ನೈವೇದ್ಯವಾಗಿಟ್ಟು ನಂತರ ಭಕ್ತರಿಗೆ ಬಡಿಸುತ್ತಾರೆ. ಅಲ್ಲದೆ ಇಲ್ಲಿ ತಯಾರಿಸುವ ಸಾಂಬಾರನ್ನು ಭಕ್ತರು ತಮ್ಮ ಮನೆಗಳಿಗೆ ಕೊಂಡೊಯ್ಯುವುದು ವಿಶೇಷ.
ಮಹೋತ್ಸವದ ನೇತೃತ್ವವನ್ನು ಗ್ರಾಮದ ಸಮಸ್ತ ಯುವಕರು ವಹಿಸಿದ್ದರು.ಸಂಜೆಯವರೆಗೂ ಸಂತರ್ಪಣೆ ನಡೆಯಿತು.ಪುರದ ಮಠದಲ್ಲಿ ಮುದ್ದೆಸಾರಿನ ಸಂತರ್ಪಣೆಗಾಗಿ ಸಿದ್ಧಮಾಡಲಾಗಿರುವ ರಾಗಿ ಮುದ್ದೆ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ