ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಅನಂತಕುಮಾರ್ ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆರಳಲು ತೀರ್ಮಾನ
ಪ್ರಧಾನಿ ಭೇಟಿ ಮಾಡಿ ಬೆಲೆ ಪುನರ್ ಪರಿಶೀಲಿಸಲು ಮನವಿಗೆ ನಿರ್ಧಾರ
ಹುಳಿಯಾರು: ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಪಕ್ಷಾತೀತವಾಗಿ ರಾಜ್ಯದಲ್ಲಿ ತೆಂಗುಬೆಳೆಯುವ ತಾಲ್ಲೂಕಿನ ಎಲ್ಲಾ ಶಾಸಕರು ಹಾಗೂ ರೈತಮುಖಂಡರನ್ನು ಒಳಗೊಂಡ ನಿಯೋಗವು ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಭೇಟಿಯಾಗಿ ಕೊಬ್ಬರಿ ಬೆಲೆಗೆ ಹಾಲಿ ನಿಗದಿಪಡಿಸಿರುವ ಬೆಂಬಲ ಬೆಲೆಯನ್ನ ಪುರ್ನಪರಿಶೀಲಿಸುವಂತೆ ಒತ್ತಾಯಿಸಲು ಇಂದಿನ ಧರಣಿಗೆ ಆಗಮಿಸಿದ್ದ ಸಂಸದರು ೬ ತಾಲ್ಲೂಕಿನ ಶಾಸಕರು ತೀರ್ಮಾನಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು ಭಾನುವಾರದಂದು ೩೮ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಅಕ್ಕಪಕ್ಕದ ೬ ತಾಲ್ಲೂಕಿನ ಶಾಸಕರು ಆಗಮಿಸಿ ತುಮಕೂರು ಸಂಸದ ಮುದ್ಧ ಹನುಮೇಗೌಡ ಅಧ್ಯಕ್ಷತೆಯಲ್ಲಿ ಧರಣಿ ಸ್ಥಳದಲ್ಲಿ ಸಭೆ ನಡೆಸಿದರು.
ಹುಳಿಯಾರಿನಲ್ಲಿ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿದರು |
ಈ ಸಭೆಯಲ್ಲಿ ಮೊದಲಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು ನಿಗದಿ ಪಡಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಇದಕ್ಕೆ ರಾಜ್ಯಸರಕಾರ ತನ್ನ ಪಾಲಿನ ಸಹಾಯ ಧನ ಸೇರಿಸಿಕೊಡುವುದು ವಾಡಿಕೆ.ಅದರಂತೆ ಸಧ್ಯ ರಾಜ್ಯ ಸರಕಾರ ನಫೆಡ್ ತೆರೆಸಿ ಒಂದು ಸಾವಿರ ಸಹಾಯ ಧನವನ್ನು ನೀಡಿದೆ.
ನಫೆಡ್ ನಿಯಮಾವಳಿ ಪ್ರಕಾರ ಕೊಬ್ಬರಿ ಧಾರಣೆಯು ಸದ್ಯದ ದರಕ್ಕೆ ಅರ್ಧಕ್ಕಿಂತ ಹೆಚ್ಚುಹೋಗಿ ನಂತರ ಅರ್ಧಕ್ಕಿಂತ ಕಡಿಮೆ ಬಂದಲ್ಲಿ ಬೆಂಬಲ ಬೆಲೆ ಘೋಷಿಸಿ ಖರೀದಿಸಬೇಕೆಂದು ನಿಯಮವಿದ್ದು ಕೊಬ್ಬರಿ ಧಾರಣೆ ಕಳೆದ ಸಾಲಿನಲ್ಲಿ ೧೯೫೦೦ ರೂ ತಲುಪಿಪಿ ಇದೀಗ ೬೫೦೦ರೂಗೆ ಕುಸಿದಿರುವುದರಿಂದ ನಿಯಮಾವಳಿ ಪ್ರಕಾರ ನಫೇಡ್ ಖರೀದಿ ಪ್ರಾರಂಭಿಸಬೇಕಿತ್ತು ಆದರೆ ನಫೆಡ್ ನವರು ಕಣ್ಣುಮುಚ್ಚಿಕುಳಿತಿದ್ದು ,ರೈತರಿಗೆ ಸ್ಪಂದಿಸದ ಈ ಸಂಸ್ಥೆ ಏತಕ್ಕಾಗಿ ಇದೆ ಎಂದು ಪ್ರಶ್ನಿಸುವಂತಾಗಿದೆ ಎಂದರು.
ರೈತರಿಗೆ ನಾವೇನು ಬಜೆಟ್ ಹಣದಲ್ಲಿ ಪರಿಹಾರ ಕೊಡಿ ಎಂದು ಕೇಳುತ್ತಿಲ್ಲ. ಮಾರುಕಟ್ಟೆಯಲ್ಲಿ ಕೊಬ್ಬರಿ ಖರೀದಿಸುವಾಗ ರೈತರಿಂದ ಸಂಗ್ರಹಿಸಿರುವ ಸೆಸ್ ಹಣದಲ್ಲಿ ಸುಮಾರು ೪೦೦ ಕೋಟಿ ರೂ ಆವರ್ತನಿಧಿಯೆಂದು ತೆಗೆದಿರಿಸಿದ್ದು ಈ ಹಣದಲ್ಲಿ ರೈತರಿಗೆ ಸಹಾಯಧನ ಎಂದು ಕೊಟ್ಟಲ್ಲಿ ಸಮಸ್ಯೆ ಬಗೆಹರಿಸ ಬಹುದಿದ್ದು ಈಬಗ್ಗೆ ಸರಕಾರ ಮೀನಮೇಷ ಏಣಿಸುವುದರಲ್ಲಿ ಅರ್ಥವಿಲ್ಲ ಎಂದರು.
ಒಟ್ಟಾರೆ ರೈತರ ಸಂಕಷ್ಟಕ್ಕೆ ರಾಜಕೀಯ ಲೇಪನವಿಲ್ಲದೆ ನಾವೆಲ್ಲ ಇಂದು ಇಲ್ಲಿ ಸೇರಿದ್ದು ಕೊಬ್ಬರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಬೆಂಬಲ ಬೆಲೆಯನ್ನು ಮರುಪರಿಶೀಲಿಸಿ ಪುರ್ನನಿಗದಿಮಾಡುವಂತೆ ಒತ್ತಾಯಿಸೋಣ. ಇದಕ್ಕಾಗಿ ಮಾಜಿ ಪ್ರಧಾನಿ ದೇವೆಗೌಡ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಯ ರೈತರನ್ನು ಕರೆದುಕೊಂಡೆ ದೆಹಲಿಗೆ ತೆರಳೋಣ ,ಸಂಬಂಧಪಟ್ಟವರನ್ನು ಭೇಟಿಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೊಣವೆಂದರು.
ಧರಣಿ ಸ್ಥಳದಲ್ಲಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿದರು |
ಸ್ಥಳಿಯ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ ಕೇಂದ್ರಕ್ಕೆ ತೆರಳುವ ನಿಯೋಗದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಕೇಂದ್ರದಲ್ಲಿ ಪ್ರಭಾವ ಬೀರುವ ಯಾರೆ ಆದರೂ ಸರಿ ಕರೆದುಕೊಂಡು ಹೋಗೋಣ. ಯಡಿಯೂರಪ್ಪ ಹಾಗೂ ಬಿಜೆಪಿ ಸಂಸದರು ಸಹ ನಿಯೋಗದಲ್ಲಿರಲ್ಲಿ ,ಅಡ್ಡಿಯಿಲ್ಲ ಎಂದರು
ಧರಣಿ ಸ್ಥಳದಲ್ಲಿ ಸಂಸದ ಮುದ್ದುಹನುಮೇಗೌಡ ಮಾತನಾಡಿದರು |
ಸಂಸದ ಮುದ್ದುಹನುಮೇಗೌಡ ಮಾತನಾಡಿ ರೈತರು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಕೂರುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ದೇವೆಗೌಡರು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮೋದಿಯವರ ಅಪ್ತವಲಯದಲ್ಲಿರುವ ಅನಂತಕುಮಾರ್ ಅವರನ್ನು ಕರೆದುಕೊಂಡು ಹೋಗೋಣ. ರಾಜ್ಯದ ಸಂಸದರ ಜೊತೆಗೆ ಪಕ್ಕದ ಕೊಬ್ಬರಿ ಬೆಳೆಯುವ ಕೇರಳ ರಾಜ್ಯದ ಸಂಸದರನ್ನು ಸಹಾ ಕರೆದುಕೊಂಡು ಹೋಗೊಣವೆಂದರು.
ಒಟ್ಟಾರೆ ದೆಹಲಿಗೆ ನಿಯೋಗ ತೆರಳಿ ಪ್ರಧಾನಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯ ವಸ್ತುಸ್ಥಿತಿ ಬಿಂಬಿಸಿ ಇದಕ್ಕೊಂದು ಶಾಶ್ವತ ಪರಿಹರ ಕಂಡುಕೊಳ್ಳುವುದು ಒಳಿತು ಎಂದು ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸಿದರು
ತಿಪಟೂರು ಶಾಸಕ ಷಡಾಕ್ಷರಿ, ಗುಬ್ಬಿ ಶಾಸಕ ಶ್ರೀನಿವಾಸ್, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಸೇರಿದಂತೆ ರೈತಸಂಘದ ತುಮಕೂರು ಜಿಲ್ಲಾಧ್ಯಕ್ಷ ಶಂಕರಪ್ಪ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ತಿಪಟೂರು ತಾಲ್ಲೂಕು ಅಧ್ಯಕ್ಷ ದೇವರಾಜ್, ಶಿರಾ ತಾಲ್ಲೂಕ್ ಅಧ್ಯಕ್ಷ ನಿರಂಜನಾರಾಧ್ಯ, ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಪಂ ಸದಸ್ಯ ರಾಮಚಂದ್ರಯ್ಯ, ತಾಪಂ ಸದಸ್ಯ ಕುಮಾರ್, ಪುರಸಭೆ ಅಧ್ಯಕ್ಷ ಹೆಚ್ ಬಿ ಪ್ರಕಾಶ್, ಸಿ.ಡಿ ಚಂದ್ರಶೇಖರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
-----------
ರಾಜ್ಯದ ೨೧ ಜಿಲ್ಲೆಯಲ್ಲಿ ಕೊಬ್ಬರಿ ಬೆಳೆಗಾರರಿದ್ದು ಕೊಬ್ಬರಿ ಬೆಳೆಯುವ ರೈತರ ಬಗ್ಗೆ ಕೇಂದ್ರದವರು ಗಮನಹರಿಸದಿರುವುದು ದುರಂತ. ಕಳೆದ ೩ ವರ್ಷಗಳ ಹಿಂದೆಯೇ ರಾಜ್ಯ ಸರಕಾರ ಕೊಬ್ಬರಿ ಬೆಲೆಗೆ ೧೦೮೨೭ರೂ ಕನಿಷ್ಟ ಬೆಲೆ ನಿಗದಿಮಾಡಿ ಎಂದು ಸುಮಾರು ೧೬ ಪುಟಗಳಷ್ಟು ವರದಿಯನ್ನು ಸಲ್ಲಿಸಿದ್ದರೂ ಸಹಾ ಕೇಂದ್ರಸರಕಾರ ಇದಕ್ಕೆ ಸ್ಪಂದಿಸದಿರುವುದು ದುರಂತ. ರೈತರಾಗಿರುವವರು ಅಥವಾ ರೈತರ ಬಗ್ಗೆ ಅರಿವು ಇರುವವರು ಕೇಂದ್ರದಲ್ಲಿ ಸಚಿವ ರಾಗದಿರುವುದೇ ಇದಕ್ಕೆ ಕಾರಣ: ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ
--------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ