ಹುಳಿಯಾರು ಪಟ್ಟಣದ ವಾಸವಿ ವಿದ್ಯಾಸಂಸ್ಥೆಯು ಕಳೆದ ೪೦ ವರ್ಷಗಳಿಂದ ಉತ್ತಮ ಫಲಿತಾಂಶದ ಮೂಲಕ ಹೋಬಳಿಯ ಹೆಸರಾಂತ ಶಾಲೆಯಾಗಿದ್ದು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಶಾಲೆಯ ಸಾಧನೆಗೆ ಆಡಳಿತ ಮಂಡಳಿ ಹಾಗೂ ಬೋಧಕ ವರ್ಗದ ಕೊಡುಗೆ ಅಪಾರ ಎಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಶ್ಲಾಘಿಸಿದರು.
ಹುಳಿಯಾರಿನ ವಾಸವಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳು ಪೋಷಕರ ವಿಶ್ವಾಸ ಮತ್ತು ನಂಬಿಕೆ ಬೆಳೆಸಿಕೊಂಡರೆ ಮಾತ್ರ ಏಳಿಗೆ ಕಾಣಲು ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಅನೇಕ ಸೌಲಭ್ಯ ಕಲ್ಪಿಸುತ್ತಿದೆ. ನಾವು ಓದುವಾಗ ಇರದ ಸೌಲಭ್ಯ ಈಗಿನ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಇಷ್ಟೊಂದು ಸೌಲಭ್ಯ ಕೊಟ್ಟರೂ ಕಷ್ಟಪಟ್ಟು ಓದಿ ಒಳ್ಳೆಯ ಅಂಕ ತೆಗೆಯದಿದ್ದರೆ ಅದು ನಿಮ್ಮ ತಪ್ಪೇ ವಿನಃ ಪೋಷಕರ, ಶಾಲೆಯ ಹಾಗೂ ಸಮಾಜದ ತಪ್ಪಿಲ್ಲ ಎಂದರು.
ತಾಪಂ ಸದಸ್ಯ ಎಚ್.ಎನ್.ಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು. ಓದಿನಲ್ಲಿ ಸ್ಪಲ್ಪ ಹಿಂದಿದ್ದರೂ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಾರೆ. ಹಾಗಾಗಿ ಶಾಲೆಗೆ ಆಗಮಿಸುವ ಮಕ್ಕಳಲ್ಲಿ ವಿಭಿನ್ನ ಅಭಿರುಚಿ ಹಾಗೂ ವಿಭಿನ್ನ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.
ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮೀಕಾಂತ್, ಕಾರ್ಯದರ್ಶಿ ರಾಮನಾಥ್, ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್, ಮುಖ್ಯಶಿಕ್ಷಕ ಎಂ.ವಿ.ರಮೇಶ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ